ಮಡಿಕೇರಿ, NEWS DESK ಅ. 9: ಮಡಿಕೇರಿ ದಸರಾ ಜನೋತ್ಸವದ ಅಂಗವಾಗಿ ನಗರವನ್ನು ಆಕರ್ಷಕವಾಗಿ ಅಲಂಕರಿಸುವುದರೊಂದಿಗೆ ಸಾರ್ವಜನಿಕರಲ್ಲಿ ಹಬ್ಬದ ಸಂಭ್ರಮ ಹೆಚ್ಚಿಸುವ ಉದ್ದೇಶದಿಂದ ಮಡಿಕೇರಿ ನಗರ ಅಲಂಕಾರ ಸಮಿತಿಯ ವತಿಯಿಂದ ವಿವಿಧ ಅಲಂಕಾರ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಪದಾಧಿಕಾರಿಗಳು, ಕರಗ ಉತ್ಸವದಿಂದ ಹಿಡಿದು ಆಯುಧ ಪೂಜೆ ಹಾಗೂ ದಸರಾ ದಿನದವರೆಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಕರಗ ಉತ್ಸವದಂದು ರಂಗೋಲಿ ಸ್ಪರ್ಧೆ
ಅಕ್ಟೋಬರ್ 11ರಂದು ಸಂಜೆ 4 ಗಂಟೆಗೆ ನಾಲ್ಕು ಶಕ್ತಿ ದೇವತೆಗಳ ಕರಗಗಳು ಪಂಪಿನ ಕೆರೆಯಿಂದ ಹೊರಟು ನಗರ ಪ್ರದಕ್ಷಿಣೆ ಕೈಗೊಂಡು ಪೇಟೆ ಶ್ರೀ ರಾಮಮಂದಿರದ ರಸ್ತೆಯವರೆಗೆ ಸಾಗಲಿವೆ. ಈ ಸಂದರ್ಭದಲ್ಲಿ ಕರಗ ಸಾಗುವ ಮಾರ್ಗದ ಎರಡೂ ಬದಿಗಳಲ್ಲಿರುವ ಮನೆಗಳ ಮುಂದೆ ಮಹಿಳೆಯರು ರಂಗೋಲಿ ಹಾಕಿ ಕರಗಗಳನ್ನು ಸ್ವಾಗತಿಸುವಂತೆ ಮನವಿ ಮಾಡಿದರು.
ಪ್ರತಿ ವರ್ಷದಂತೆ ಈ ಬಾರಿಯೂ ಚುಕ್ಕಿ ರಂಗೋಲೆ, ಎಳೆ ರಂಗೋಲೆ, ಗೆರೆ ರಂಗೋಲೆ ಹಾಗೂ ಬಣ್ಣದ ರಂಗೋಲೆಗಳಿಗೆ ಪ್ರತ್ಯೇಕ ಬಹುಮಾನಗಳನ್ನು ನೀಡಲಾಗುತ್ತದೆ.
ದಸರಾ ಗೊಂಬೆ ಪ್ರದರ್ಶನಕ್ಕೆ ಪ್ರೋತ್ಸಾಹ
ದಸರಾ ಸಂದರ್ಭದಲ್ಲಿ ಮನೆಗಳಲ್ಲಿ ಗೊಂಬೆಗಳನ್ನು ಕೂರಿಸುವವರು ತಮ್ಮ ಹೆಸರು ಮತ್ತು ವಿಳಾಸವನ್ನು ಸಮಿತಿಗೆ ತಿಳಿಸಬೇಕು. ಗೊಂಬೆ ಪ್ರದರ್ಶನವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸಮಿತಿಯ ವತಿಯಿಂದ ಸೂಕ್ತ ಪ್ರೋತ್ಸಾಹ ನೀಡಲಾಗುವುದು ಎಂದು ತಿಳಿಸಿದರು.
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 94487 12748, 94490 92442, 97406 48631.
ದೇವಾಲಯಗಳ ಅಲಂಕಾರ ಸ್ಪರ್ಧೆ
ಮಡಿಕೇರಿ ದಸರಾ ಮಂಟಪಗಳ ಜೊತೆಗೆ ನಗರದ ಇತರ ದೇವಾಲಯಗಳಿಗೂ ಅಲಂಕಾರ ಸ್ಪರ್ಧೆ ಆಯೋಜಿಸಲಾಗಿದೆ. ಆಯಾ ದೇವಾಲಯ ಸಮಿತಿಗಳು ತಮ್ಮ ದೇವಾಲಯಗಳನ್ನು ಆಕರ್ಷಕವಾಗಿ ಅಲಂಕರಿಸಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತೆ ಸಮಿತಿ ಪದಾಧಿಕಾರಿಗಳು ಮನವಿ ಮಾಡಿದರು.
ಆಯುಧ ಪೂಜೆಯಂದು ವಾಹನಗಳ ಅಲಂಕಾರ ಸ್ಪರ್ಧೆ
ಅಕ್ಟೋಬರ್ 20ರಂದು ಆಯುಧ ಪೂಜೆಯ ಅಂಗವಾಗಿ ವಾಹನಗಳ ಅಲಂಕಾರ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಅಲಂಕೃತ ವಾಹನಗಳು ಸಂಜೆ 7 ಗಂಟೆಗೆ ಗಾಂಧಿ ಮೈದಾನಕ್ಕೆ ತಲುಪುವುದು ಕಡ್ಡಾಯವಾಗಿದೆ. ಸಂಜೆ 7ರಿಂದ ರಾತ್ರಿ 9ರವರೆಗೆ ತೀರ್ಪುಗಾರರು ವಾಹನಗಳ ಅಲಂಕಾರವನ್ನು ಪರಿಶೀಲಿಸಲಿದ್ದಾರೆ. ಆಯುಧ ಪೂಜೆಯ ಸಭಾ ಕಾರ್ಯಕ್ರಮದ ಬಳಿಕ ಬಹುಮಾನ ವಿಜೇತರನ್ನು ಘೋಷಿಸಲಾಗುತ್ತದೆ.
ಅಲಂಕೃತ ಬಸ್, ಲಾರಿ ಹಾಗೂ ಜೆಸಿಬಿ ವಾಹನಗಳ ತೀರ್ಪುಗಾರಿಕೆ ಹೊಸ ಬಸ್ ನಿಲ್ದಾಣದಲ್ಲಿ ಸಂಜೆ 6ರಿಂದ 6.30ರವರೆಗೆ ನಡೆಯಲಿದ್ದು, ಸ್ಪರ್ಧಿಗಳು ನಿಗದಿತ ಸಮಯಕ್ಕೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ.
ಅಂಗಡಿಗಳ ಅಲಂಕಾರ ಸ್ಪರ್ಧೆ
ದಸರಾ ದಿನದಂದು ನಗರದ ಅಂಗಡಿಗಳನ್ನು ಆಕರ್ಷಕವಾಗಿ ಅಲಂಕರಿಸುವ ಮೂಲಕ ಜನೋತ್ಸವದ ಸಂಭ್ರಮವನ್ನು ಹೆಚ್ಚಿಸಲು ಅಂಗಡಿಗಳ ಅಲಂಕಾರ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ರಾತ್ರಿ 9ರಿಂದ ಮರುದಿನ ಬೆಳಗಿನ ಜಾವ 1 ಗಂಟೆಯವರೆಗೆ ತೀರ್ಪುಗಾರರು ನಗರದ ಅಂಗಡಿಗಳಿಗೆ ಭೇಟಿ ನೀಡಿ ಅಲಂಕಾರವನ್ನು ಪರಿಶೀಲಿಸಲಿದ್ದಾರೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಅಂಗಡಿ ಮಾಲೀಕರು ತಮ್ಮ ಅಂಗಡಿಯ ಛಾಯಾಚಿತ್ರ, ಹೆಸರು ಹಾಗೂ ವಿಳಾಸವನ್ನು 94487 12748, 94490 92442 ಅಥವಾ 97406 48631 ಸಂಖ್ಯೆಗಳ ವಾಟ್ಸ್ಆ್ಯಪ್ ಮೂಲಕ ಕಳುಹಿಸಬೇಕು. ಅಲ್ಲದೆ, ಸ್ಪರ್ಧೆಯಲ್ಲಿ ಭಾಗವಹಿಸುವ ಕುರಿತು ಒಂದು ದಿನ ಮುಂಚಿತವಾಗಿ ಸಮಿತಿಗೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ.
ತೀರ್ಪುಗಾರರು ಅಂಗಡಿಗೆ ಭೇಟಿ ನೀಡುವ ಸಂದರ್ಭದಲ್ಲಿ ಮಾಲೀಕರು ಅಥವಾ ಸಂಬಂಧಪಟ್ಟವರು ಅಂಗಡಿಯ ಮುಂದೆ ಖುದ್ದಾಗಿ ಹಾಜರಿದ್ದು ತಮ್ಮ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ತಿಳಿಸಬೇಕು. ಯಾರೂ ಹಾಜರಿಲ್ಲದಿದ್ದರೆ ಅಂತಹ ಅಂಗಡಿಯನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
ಸ್ಪರ್ಧೆಗಳ ವಿಜೇತರು ಅಕ್ಟೋಬರ್ 22ರ ಬೆಳಗಿನ ಜಾವ ವೇದಿಕೆಯಲ್ಲಿಯೇ ಬಹುಮಾನಗಳನ್ನು ಸ್ವೀಕರಿಸುವಂತೆ ಸಮಿತಿ ಮನವಿ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಮುನೀರ್ ಮಾಚಾರ್ ಎಂ.ಎ., ಗೌರವಾಧ್ಯಕ್ಷ ಮಂಜುನಾಥ್ ಪಿ.ಜಿ., ಉಪಾಧ್ಯಕ್ಷ ಕೋಚನ ಎಂ. ಚೇತನ್, ಖಜಾಂಚಿ ಕೆ.ಬಿ. ಪ್ರಸಾದ್ ಹಾಗೂ ಕಾರ್ಯದರ್ಶಿ ಜೆ. ಮೈಕಲ್ ಮಾರ್ಷಲ್ ಉಪಸ್ಥಿತರಿದ್ದರು.

















