ವಿರಾಜಪೇಟೆ, NEWS DESK ಅ.19: ಕರುನಾಡಿನ ಜೀವನದಿ ಹಾಗೂ ಕೊಡವರ ಕುಲದೇವಿ ತಾಯಿ ಕಾವೇರಿಯ ಪವಿತ್ರ ತೀರ್ಥೋದ್ಭವದ ಹಿನ್ನೆಲೆಯಲ್ಲಿ ವಿರಾಜಪೇಟೆಯಿಂದ ತಲಕಾವೇರಿವರೆಗೆ ಸುಮಾರು 58 ಕಿ.ಮೀ. ದೂರದ ಪಾದಯಾತ್ರೆಯನ್ನು 15 ಮಂದಿ ಭಕ್ತರು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಈ ಮೂಲಕ ಆರನೇ ವರ್ಷದ ಪಾದಯಾತ್ರೆ ಭಕ್ತಿ ಹಾಗೂ ಧಾರ್ಮಿಕ ಶ್ರದ್ಧೆಯೊಂದಿಗೆ ನೆರವೇರಿತು.
ಶುಕ್ರವಾರ ಮುಂಜಾನೆ ವಿರಾಜಪೇಟೆಯಿಂದ ಆರಂಭಗೊಂಡ ಪಾದಯಾತ್ರೆಯು ಕದನೂರು, ಕಡಂಗ, ನಾಪೋಕ್ಲು, ನೆಲಜಿ, ಬಲ್ಲಮಾವಟಿ ಹಾಗೂ ಅಯ್ಯಂಗೇರಿ ಮಾರ್ಗವಾಗಿ ಸಾಗಿ ಸಂಜೆ 6.35ಕ್ಕೆ ಭಾಗಮಂಡಲ ತಲುಪಿತು. ಯಾತ್ರಾರ್ಥಿಗಳಿಗೆ ಬೆಳಗಿನ ಉಪಾಹಾರವನ್ನು ಕೋಚಮಂಡ ವಿಜಯ ಶೀಲ ಹಾಗೂ ಕುಟುಂಬದವರು, ಮಧ್ಯಾಹ್ನದ ಉಪಾಹಾರವನ್ನು ಕೆಟೋಳ್ಳಿರ ಡಾಲಿ ಹಾಗೂ ಕುಟುಂಬದವರು ಮತ್ತು ಸಂಜೆಯ ಫಲಾಹಾರವನ್ನು ಪುಲಿಕೋಟ್ ಮುಕ್ಕಟೀರ ಕುಟುಂಬದವರು ಒದಗಿಸಿ ಸಹಕರಿಸಿದರು.
ಶನಿವಾರ ಭಾಗಮಂಡಲದಿಂದ ವಿವಿಧ ಸಂಘಟನೆಗಳೊಂದಿಗೆ ಕಾವೇರಿ ಭಜನೆ ಮಾಡುತ್ತಾ ಪಾದಯಾತ್ರೆಯನ್ನು ಮುಂದುವರಿಸಿದ ಭಕ್ತರು, ತೀರ್ಥೋದ್ಭವಕ್ಕೂ ಮುನ್ನ ತಲಕಾವೇರಿ ತಲುಪಿದರು. ಬಳಿಕ ತಾಯಿ ಕಾವೇರಿಯ ಪವಿತ್ರ ತೀರ್ಥವನ್ನು ಸ್ವೀಕರಿಸಿ, ವಿವಿಧೆಡೆ ಭಕ್ತರಿಗೆ ತೀರ್ಥಪ್ರಸಾದ ವಿತರಿಸಿದರು.
ತಾಯಿ ಕಾವೇರಿಯ ಮೇಲಿನ ಅಪಾರ ಭಕ್ತಿ ಹಾಗೂ ಧಾರ್ಮಿಕ ನಂಬಿಕೆಯನ್ನು ಪ್ರತಿಬಿಂಬಿಸುವ ಈ ಪಾದಯಾತ್ರೆಯನ್ನು ಪ್ರತಿವರ್ಷ ಹಮ್ಮಿಕೊಳ್ಳಲಾಗುತ್ತಿದ್ದು, ಈ ಬಾರಿಯೂ 15 ಮಂದಿ ಭಕ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಪಾದಯಾತ್ರೆಯಲ್ಲಿ ಚೆಟ್ಟೋಳಿರ ಶರತ್ ಸೋಮಣ್ಣ, ಮುರುವಂಡ ಸಾವನ್ ಸೋಮಣ್ಣ, ಕಾಳಮಂಡ ರಾಬಿನ್ ಅಚ್ಚಮ್ಮ, ಚೈಯ್ಯಂಡ ಕೀರ್ತನ್ ಅಯ್ಯಪ್ಪ, ನೆಲ್ಲಚಂಡ ಪ್ರಕಾಶ್ ನಾಣಯ್ಯ, ನಿಖಿಲ್ ಮಂಡೆಪಂಡ, ಚಂಬಂಡ ಬವನ್ ಪೊನ್ನಣ್ಣ, ಚೋಕಂಡ ಕರಿಯಪ್ಪ, ಪೊನ್ನೋಲತಂಡ ಶರಣು ತಮ್ಮಯ್ಯ, ನಂಬಿಯಪಂಡ ಸೋಮೇಶ್, ಮಂಡೆಪಂಡ ಆಯುಷ್ ಮಂದಣ್ಣ, ಪಳ್ಳಂಗಂಡ ರಯಾನ್ ತಮ್ಮಯ್ಯ ಹಾಗೂ ಮೂವರು ಯುವತಿಯರಾದ ಮುರುವಂಡ ಸ್ಪೂರ್ತಿ ಸೀತಮ್ಮ, ಮುರುವಂಡ ಮುತ್ತಮ್ಮ ಕುಟ್ಟಪ್ಪ ಮತ್ತು ಮುರುವಂಡ ನಿಹಾರಿಕಾ ಅಣ್ಣಯ್ಯ ಭಾಗವಹಿಸಿದ್ದರು.
ಮುದ್ದಿಯಾಡ ಕರಣ್ ಕಾವೇರಪ್ಪ ಅವರು ಸ್ವಯಂಸೇವಕರಾಗಿ ಸಹಕರಿಸಿದರು.





































