ವಿರಾಜಪೇಟೆ, NEWS DESK ಅ.19: ಕೊಡಗು ಪರಿಸರ ರಕ್ಷಣಾ ಹೋರಾಟ ಸಮಿತಿ, ಪಾಲಿಬೆಟ್ಟ ಗ್ರಾಮ ಪಂಚಾಯಿತಿ, ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್ಎಸ್ಎಸ್ ಘಟಕ, ಕಾವೇರಿ ಕಾಲೇಜಿನ ಎನ್ಎಸ್ಎಸ್ ಘಟಕ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಅಕ್ಟೋಬರ್ 23ರಂದು ಪಾಲಿಬೆಟ್ಟದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಶಶಿ ಅಚ್ಚಪ್ಪ ತಿಳಿಸಿದ್ದಾರೆ.
ವಿರಾಜಪೇಟೆಯ ಪತ್ರಕರ್ತರ ವೇದಿಕೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಸಮಿತಿಯ ವತಿಯಿಂದ ವಿದ್ಯಾರ್ಥಿಗಳ ಸಹಕಾರದೊಂದಿಗೆ ಮಾಕುಟ್ಟದಲ್ಲಿ ಸ್ವಚ್ಛತಾ ಅಭಿಯಾನ ಜಾಥಾ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ಯಶಸ್ವಿಯಾಗಿದ್ದು, ಇದೀಗ ಪಾಲಿಬೆಟ್ಟದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಎರಡು ಪದವಿ ಕಾಲೇಜುಗಳ ಎನ್ಎಸ್ಎಸ್ ಘಟಕಗಳ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಒಟ್ಟು 150ಕ್ಕೂ ಅಧಿಕ ಮಂದಿ ಅಭಿಯಾನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ಪಾಲಿಬೆಟ್ಟ ಗ್ರಾಮ ಪಂಚಾಯಿತಿಯು ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದ್ದು, ಅಂದು ಬೆಳಿಗ್ಗೆ ವಿರಾಜಪೇಟೆ ತಾಲೂಕು ತಹಸೀಲ್ದಾರ್ ಪ್ರವೀಣ್ ಕುಮಾರ್ ಅವರು ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಪಾಲಿಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯದ ಜೊತೆಗೆ ಸ್ವಚ್ಛ ಪರಿಸರದ ಕುರಿತು ಜಾಗೃತಿ ಕಾರ್ಯಕ್ರಮ ಹಾಗೂ ಗಿಡ ನೆಡುವ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಪುರಸಭಾ ಸದಸ್ಯೆ ಸುನಿತಾ ಮಾತನಾಡಿ, ಪಾಲಿಬೆಟ್ಟದಲ್ಲಿ ನಡೆಯಲಿರುವ ಸ್ವಚ್ಛತಾ ಅಭಿಯಾನಕ್ಕೆ ಎನ್ಎಸ್ಎಸ್ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು ಕೈಜೋಡಿಸಲಿವೆ. ಸ್ವಚ್ಛ ಪರಿಸರ ನಿರ್ಮಾಣವು ಎಲ್ಲರ ಜವಾಬ್ದಾರಿಯಾಗಿದ್ದು, ಈ ಮಹತ್ವದ ಕಾರ್ಯದಲ್ಲಿ ಸಾರ್ವಜನಿಕರು ಸಹ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕೊಡಗು ಪರಿಸರ ರಕ್ಷಣಾ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಸುಬ್ರಮಣಿ ಹಾಗೂ ಥೆರೇಸಾ ವಿಕ್ಟರ್ ಉಪಸ್ಥಿತರಿದ್ದರು.





































