ಮಡಿಕೇರಿ NEWS DESK ಅ.19 : ಪವಿತ್ರ ಕಾವೇರಿ ತೀರ್ಥೋದ್ಭವದ ಮರುದಿನವಾದ ಭಾನುವಾರ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ದೇವಟ್ ಪರಂಬ್ ಹತ್ಯಾಕಾಂಡ ಸ್ಮಾರಕ ಸ್ಥಳದಲ್ಲಿ ಬೊತ್ತ್ ಬಳ್ಳಿ ಸುತ್ತಿದ ಕೋಲಿನ ಮೇಲೆ ದೋಸೆ ಮತ್ತು ಪುಟ್ಟ್ ಇಟ್ಟು ಸಾಂಪ್ರದಾಯಿಕ ಆಚರಣೆಯ ಮೂಲಕ ಹಿರಿಯರನ್ನು ಸ್ಮರಿಸಿತು. ದೇವಟ್ ಪರಂಬ್ ದುರಂತದಲ್ಲಿ ಹತ್ಯೆಗೀಡಾದ ಸಾವಿರಾರು ಕೊಡವರ ಆತ್ಮಗಳಿಗೆ ಪವಿತ್ರ ಕಾವೇರಿ ತೀರ್ಥವನ್ನು ಸಿಂಪಡಿಸಿ ಪ್ರಾರ್ಥನೆ ಸಲ್ಲಿಸಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕೊಡವರಲ್ಲಿ ಅನಾದಿ ಕಾಲದಿಂದಲೂ ಬೊತ್ತ್ ಬಳ್ಳಿ ಸುತ್ತಿದ ಕೋಲುಗಳನ್ನು ಗದ್ದೆ, ಬೋಟಿ ಕಾಲ, ದನದ ಕೊಟ್ಟಿಗೆ, ಸಗಣಿ ಗುಂಡಿ, ಬಾವಿ ಹಾಗೂ ಮನೆ ಬಾಗಿಲುಗಳಲ್ಲಿ ನೆಡುವ ಸಂಪ್ರದಾಯವಿದೆ. ಕಾವೇರಿ ತುಲಾ ಸಂಕ್ರಮಣದ ಅಂಗವಾಗಿ ಆಚರಿಸಲಾಗುವ ಈ ಸಂಪ್ರದಾಯವು ಕೊಡವರ ಜಾನಪದ ಮತ್ತು ಸಾಂಸ್ಕೃತಿಕ ಪರಂಪರೆಯ ಭಾಗವಾಗಿದೆ ಎಂದರು. ದೇವಟ್ ಪರಂಬ್ ಕೊಡವರ ಪಾಲಿಗೆ ಐತಿಹಾಸಿಕ ಮಹತ್ವವುಳ್ಳ ಪವಿತ್ರ ಸ್ಥಳವಾಗಿದ್ದು, ತಲಕಾವೇರಿಗೆ ಯಾತ್ರೆ ಕೈಗೊಳ್ಳುವ ಕೊಡವರು ಈ ಸ್ಥಳದಲ್ಲಿ ಹಸಿರು ಎಲೆಗಳನ್ನು ಅರ್ಪಿಸಿ ಗೌರವ ಸಲ್ಲಿಸುವ ಸಂಪ್ರದಾಯವನ್ನು ಪಾಲಿಸುತ್ತಾರೆ. ಈ ಸ್ಥಳವನ್ನು ಕುರುಕ್ಷೇತ್ರ, ಕಳಿಂಗ ಮತ್ತು ಆಕ್ಟಿಯಂ ಯುದ್ಧಭೂಮಿಗಳಿಗೆ ಸಮಾನವಾದ ಪವಿತ್ರ ದೇಶ ಮಂದ್ ಎಂದು ಬಣ್ಣಿಸಿದರು. ಇದೇ ಸಂದರ್ಭ ಅವರು ಕೊಡವರ ಹಕ್ಕುಗಳು, ಭಾಷೆ, ಸಂಸ್ಕೃತಿ ಹಾಗೂ ರಾಜಕೀಯ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ 11 ಪ್ರಮುಖ ಬೇಡಿಕೆಗಳನ್ನು ಮಂಡಿಸಿದರು. ಭಾರತದ ಸಾರ್ವಭೌಮತ್ವದೊಳಗೆ ಸಂವಿಧಾನದ 244 ಮತ್ತು 371ನೇ ವಿಧಿಗಳು ಹಾಗೂ ಆರನೇ ಮತ್ತು ಎಂಟನೇ ಪರಿಚ್ಛೇದಗಳ ಅಡಿಯಲ್ಲಿ ಆಂತರಿಕ ರಾಜಕೀಯ ಸ್ವಯಂನಿರ್ಣಯದ ಹಕ್ಕು ಕಲ್ಪಿಸಬೇಕು. ವಿಶ್ವಸಂಸ್ಥೆಯ ಆದಿವಾಸಿ ಹಕ್ಕುಗಳ ಘೋಷಣೆಯ ಆಶಯಗಳಿಗೆ ಅನುಗುಣವಾಗಿ ಕೊಡವರಿಗೆ ಆದಿವಾಸಿ ಮಾನ್ಯತೆ ನೀಡಿ ಸಂವಿಧಾನದ ಪರಿಶಿಷ್ಟ ಪಟ್ಟಿಯಲ್ಲಿ ಸೇರಿಸಬೇಕು. ಗನ್-ತೋಕ್ ಹಕ್ಕು: ಸಿಖ್ಖರ ಕಿರ್ಪಾಣ್ ಮಾದರಿಯಲ್ಲಿ ಕೊಡವರ ಪವಿತ್ರ ಗನ್-ತೋಕ್ ಸಂಪ್ರದಾಯಕ್ಕೆ ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ರಕ್ಷಣೆ ಕಲ್ಪಿಸಬೇಕು. ಕೊಡವ ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಿ, 347 ಮತ್ತು 350ನೇ ವಿಧಿಗಳ ಆಶಯದಂತೆ ಆಡಳಿತ ಹಾಗೂ ಶಿಕ್ಷಣದಲ್ಲಿ ಅಳವಡಿಸಬೇಕು. ಕೊಡವರ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಸೇರಿಸುವುದು ಹಾಗೂ ವಿಶ್ವ ಕೊಡವಾಲಜಿ ಸಂಶೋಧನಾ ಕೇಂದ್ರ ಸ್ಥಾಪನೆಗೆ ಜಮೀನು ಒದಗಿಸಬೇಕು. ಕಾವೇರಿ ನದಿಗೆ ಕಾನೂನುಬದ್ಧ ವ್ಯಕ್ತಿತ್ವದ ಮಾನ್ಯತೆ ನೀಡುವುದು, ತಲಕಾವೇರಿಯನ್ನು ಕೊಡವರ ಪವಿತ್ರ ಯಾತ್ರಾ ಕೇಂದ್ರವಾಗಿ ಗುರುತಿಸುವುದು ಹಾಗೂ ಅಂತರರಾಷ್ಟ್ರೀಯ ಜಲ ಹಂಚಿಕೆ ತತ್ವಗಳ ಆಧಾರದಲ್ಲಿ ಕೊಡಗಿಗೆ ನೀರಿನ ಪಾಲು ಕಲ್ಪಿಸಬೇಕು.
ನಾಲ್ನಾಡ್ ಅರಮನೆ, ಮಡಿಕೇರಿ ಕೋಟೆ ಹತ್ಯಾಕಾಂಡ ಸ್ಮಾರಕ, ಉಳುಗುಲಿ-ಸುಂಟಿಕೊಪ್ಪ, ಲಕ್ಕಿದಿಬ್ಬ, ಮುಳ್ಳುಸೋಗೆ ಯುದ್ಧ ಸ್ಮಾರಕಗಳು ಮತ್ತು ದೇವಾಟ್ ಪರಂಬ್‌ನಲ್ಲಿ ಅಂತರರಾಷ್ಟ್ರೀಯ ಹತ್ಯಾಕಾಂಡ ಸ್ಮಾರಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಮಣಿಪುರ ಮತ್ತು ನಾಗಾಲ್ಯಾಂಡ್ ಮಾದರಿಯಲ್ಲಿ ಕೊಡವ ಪ್ರದೇಶದ ಜನಸಂಖ್ಯಾ ಬದಲಾವಣೆ ನಿಯಂತ್ರಿಸಲು ಇನ್ನರ್ ಲೈನ್ ಪರ್ಮಿಟ್ ವ್ಯವಸ್ಥೆ ಜಾರಿಗೊಳಿಸಬೇಕು. ಹೊಸ ಸಂಸತ್ತಿನ ಸೆಂಟ್ರಲ್ ವಿಸ್ಟಾದಲ್ಲಿ ಸಿಕ್ಕಿಂನ ಸಂಘ ಮಾದರಿಯಲ್ಲಿ ಕೊಡವರಿಗೆ ಪ್ರತ್ಯೇಕ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕು. ಕೇಳದಿ ಅರಸರು ಮತ್ತು ಬ್ರಿಟಿಷರ ಆಡಳಿತದ ಅವಧಿಯಲ್ಲಿ ಕಸಿದುಕೊಂಡ ಕೊಡವರ ಪೂರ್ವಿಕರ ಆಸ್ತಿಗಳನ್ನು ಮರುಸ್ಥಾಪಿಸಬೇಕು. 2027ರ ಜನಗಣತಿಯಲ್ಲಿ ಜಾತಿ ಮತ್ತು ಧರ್ಮದ ಕಾಲಂಗಳಲ್ಲಿ ಕೊಡವರು ತಮ್ಮ ಗುರುತನ್ನು ಕೊಡವ ಮಾತ್ರ ಎಂದು ದಾಖಲಿಸಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ಪಟ್ಟಮಾಡ ಕುಶ, ಅರೆಯಡ ಗಿರೀಶ್, ಮಂದಪಂಡ ಮನೋಜ್, ಮಂದಪಂಡ ಸೂರಜ್ ಹಾಗೂ ಮಂಗೇರಿರ ಜಗದೀಶ್ ಸೇರಿದಂತೆ ಸಿಎನ್‌ಸಿ ಬೆಂಬಲಿಗರು ಭಾಗವಹಿಸಿದ್ದರು.

















