ನಾಪೋಕ್ಲು, NEWS DESK ಅ.20: ಪವಿತ್ರ ಶ್ರೀ ಕಾವೇರಿ ಮಾತೆಯ ತೀರ್ಥವನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಧಾರ್ಮಿಕ ಸೇವೆಯನ್ನು ಕಳೆದ 31 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಕೊಡಗು ಹಕ್ಕು ಸಂರಕ್ಷಣಾ ಸಮಿತಿಯು ಈ ಬಾರಿಯೂ ಯಶಸ್ವಿಯಾಗಿ ತೀರ್ಥ ವಿತರಣೆ ಕಾರ್ಯಕ್ರಮವನ್ನು ನೆರವೇರಿಸಿತು.
ಸಮಿತಿಯ ಸಂಚಾಲಕ ಬಿದ್ದಾಟಂಡ ರೋಜಿ ಚಿಣ್ಣಪ್ಪ ಅವರ ಮುಂದಾಳತ್ವದಲ್ಲಿ ತಲಕಾವೇರಿಯಲ್ಲಿ ಕಾವೇರಿ ತೀರ್ಥವನ್ನು ಸಂಗ್ರಹಿಸಿ, ಭಾಗಮಂಡಲದಿಂದ ಶ್ರೀ ಕಾವೇರಿ ತೀರ್ಥ ರಥಯಾತ್ರೆಗೆ ಚಾಲನೆ ನೀಡಲಾಯಿತು. ರಥಯಾತ್ರೆಯು ಚೇರಂಗಾಲ, ಅಯ್ಯಂಗೇರಿ, ಪುಲಿಕೋಟು, ಬಲ್ಲಮಾವಟಿ, ನೆಲಜಿ ಹಾಗೂ ನಾಪೋಕ್ಲು ಮಾರ್ಗವಾಗಿ ಸಂಚರಿಸಿ, ಹಾದಿಯುದ್ದಕ್ಕೂ ಭಕ್ತಾದಿಗಳಿಗೆ ಕಾವೇರಿ ತೀರ್ಥವನ್ನು ವಿತರಿಸಿತು.
ನಂತರ ರಥಯಾತ್ರೆಯು ಪಾಲೂರಿನ ಶ್ರೀ ಹರಿಶ್ಚಂದ್ರ ದೇವಾಲಯವನ್ನು ತಲುಪಿತು. ಅಲ್ಲಿ ಶ್ರೀ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ರಥಯಾತ್ರೆ ಸಮಾಪ್ತಿಗೊಂಡಿತು.
ಈ ವರ್ಷದ ರಥಯಾತ್ರೆಯಲ್ಲಿ ಶ್ರೀ ಕಾವೇರಿ ಮಾತೆಯ ಪ್ರತಿರೂಪವನ್ನು ಒಳಗೊಂಡ ಆಕರ್ಷಕ ರಥವನ್ನು ಸಿದ್ಧಪಡಿಸಲಾಗಿದ್ದು, ಇದರ ಖರ್ಚು ವೆಚ್ಚವನ್ನು ಬಿದ್ದಾಟಂಡ ಗಿನ್ನಿಸ್ ಪೊನ್ನಣ್ಣ ಅವರು ಭರಿಸಿ ಸಹಕರಿಸಿದ್ದಾರೆ ಎಂದು ರೋಜಿ ಚಿಣ್ಣಪ್ಪ ತಿಳಿಸಿದರು.
ಕಳೆದ 31 ವರ್ಷಗಳಿಂದ ಸಮಿತಿಯು ಶ್ರದ್ಧಾಭಕ್ತಿಯಿಂದ ನಡೆಸಿಕೊಂಡು ಬರುತ್ತಿರುವ ಈ ಧಾರ್ಮಿಕ ಸೇವೆಯಿಂದಾಗಿ ಭಕ್ತಾದಿಗಳ ಮನೆಮನೆಗೂ ಕಾವೇರಿ ತೀರ್ಥ ತಲುಪುವಂತಾಗಿದೆ. ಸಮಿತಿಯ ಈ ಸೇವೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿಯೂ ಈ ಸತ್ಕಾರ್ಯ ನಿರಂತರವಾಗಿ ಮುಂದುವರಿಯಲಿ ಎಂದು ಭಕ್ತಾದಿಗಳು ಹಾರೈಸಿದ್ದಾರೆ.
ಕಾರ್ಯಕ್ರಮದಲ್ಲಿ ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಲಿಯಾಟಂಡ ಮಯ್ಯು ದೇವಯ್ಯ, ಪದಾಧಿಕಾರಿಗಳಾದ ಬಿದ್ದಾಟಂಡ ಮಮತಾ ಚಿಣ್ಣಪ್ಪ, ಕಲಿಯಾಟಂಡ ಸುಮಿತ್ರ ದೇವಯ್ಯ, ತಂಬಂಡ ಮಂಜು ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ವರದಿ: ದುಗ್ಗಳ ಸದಾನಂದ



































