ಮಡಿಕೇರಿ, NEWS DESK ನ.5: ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ, ಸರಳವಾಗಿ ಹಾಗೂ ಮಾಲಿನ್ಯ ರಹಿತವಾಗಿ ಆಚರಿಸುವಂತೆ ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
2026ನೇ ಸಾಲಿನ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿಗಳಿಂದ ಉಂಟಾಗುವ ಶಬ್ದ ಮತ್ತು ವಾಯು ಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಜಿಲ್ಲಾಡಳಿತ ಪ್ರಕಟಿಸಿದೆ.
ಪಟಾಕಿಗಳ ತಯಾರಿಕೆಯಲ್ಲಿ ಬಳಸುವ ವಿವಿಧ ರಾಸಾಯನಿಕಗಳು ಸಿಡಿದ ನಂತರ ವಾತಾವರಣಕ್ಕೆ ಸೇರಿ ವಾಯು ಮಾಲಿನ್ಯ ಉಂಟುಮಾಡುತ್ತವೆ. ಹೆಚ್ಚಿನ ಶಬ್ದವು ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಲ್ಲದೆ, ಪ್ರಾಣಿ-ಪಕ್ಷಿಗಳಿಗೂ ತೊಂದರೆಯನ್ನುಂಟುಮಾಡುತ್ತದೆ. ಈ ಹಿನ್ನೆಲೆಯಲ್ಲಿ ಹಬ್ಬವನ್ನು ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಆಚರಿಸುವಂತೆ ಸೂಚಿಸಲಾಗಿದೆ.
ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಸಿಎಸ್‌ಐಆರ್-ಎನ್‌ಇಇಆರ್‌ಐ ಶಿಫಾರಸು ಮಾಡಿರುವ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು. ಪಟಾಕಿಗಳ ಪ್ಯಾಕೆಟ್‌ಗಳ ಮೇಲೆ ಹಸಿರು ಪಟಾಕಿಯ ಚಿಹ್ನೆ ಹಾಗೂ ಕ್ಯೂಆರ್ ಕೋಡ್ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಇತರೆ ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ.
125 ಡೆಸಿಬಲ್‌ಗಿಂತ ಹೆಚ್ಚಿನ ಶಬ್ದ ಉಂಟುಮಾಡುವ ಪಟಾಕಿಗಳ ದಾಸ್ತಾನು, ಮಾರಾಟ ಹಾಗೂ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶವಿದ್ದು, ಸಾರ್ವಜನಿಕರು ನಿಗದಿತ ಸಮಯವನ್ನು ಪಾಲಿಸಬೇಕು.
ಪಟಾಕಿ ಮಾರಾಟಗಾರರು ಹಾಗೂ ಸಂಗ್ರಹಣಾ ಗೋದಾಮುಗಳು ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಪಟಾಕಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಹಾಗೂ ಪ್ಲಾಸ್ಟಿಕ್ ಚೀಲಗಳ ಬಳಕೆಗೆ ಅವಕಾಶವಿರುವುದಿಲ್ಲ.
ಆಸ್ಪತ್ರೆ, ಶಾಲೆ, ಪ್ರಾರ್ಥನಾ ಮಂದಿರ ಹಾಗೂ ವೃದ್ಧಾಶ್ರಮ ಸೇರಿದಂತೆ ನಿಶಬ್ದ ವಲಯಗಳೆಂದು ಘೋಷಿಸಲಾದ ಪ್ರದೇಶಗಳ ಸುತ್ತಮುತ್ತ ಯಾವುದೇ ಸಮಯದಲ್ಲಿಯೂ ಶಬ್ದ ಉಂಟುಮಾಡುವ ಪಟಾಕಿ ಹಾಗೂ ಸಿಡಿಮದ್ದುಗಳನ್ನು ಬಳಸುವಂತಿಲ್ಲ. ಪಟಾಕಿ ಸಿಡಿಸುವಾಗ ಮಕ್ಕಳು, ವೃದ್ಧರು ಹಾಗೂ ಪ್ರಾಣಿ-ಪಕ್ಷಿಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು.
ನಿಗದಿತ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಾಯ್ದೆಯನ್ವಯ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಶಬ್ದ ಹಾಗೂ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸಹಕರಿಸುವ ಮೂಲಕ “ಹಸಿರು ದೀಪಾವಳಿ – ಸ್ವಸ್ಥ ದೀಪಾವಳಿ – ಪರಿಸರ ಸ್ನೇಹಿ ದೀಪಾವಳಿ” ಆಚರಿಸುವಂತೆ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಮನವಿ ಮಾಡಿದ್ದಾರೆ.
















