ಕುಶಾಲನಗರ, NEWS DESK ನ. 6: ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಮಾಲಿನ್ಯಕಾರಿ ಪಟಾಕಿಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಮಕ್ಕಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಸಿರು ದೀಪಾವಳಿ ಆಚರಣೆ ಕಾರ್ಯಕ್ರಮ ನಡೆಯಿತು.
ಶಾಲಾ ಶಿಕ್ಷಣ ಇಲಾಖೆ, ರಾಜ್ಯ ವಿಜ್ಞಾನ ಪರಿಷತ್ತು, ರಾಷ್ಟ್ರೀಯ ಹಸಿರು ಪಡೆ ಬನಶಂಕರಿ ಇಕೋ ಕ್ಲಬ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಹಾಗೂ ಜಿಲ್ಲಾ ಪರಿಸರ ಜಾಗೃತಿ ಸಮಿತಿಯ ಆಶ್ರಯದಲ್ಲಿ ‘ಸ್ವಸ್ಥ ಹಾಗೂ ಸ್ವಚ್ಛ ಹಸಿರು ದೀಪಾವಳಿ-2026’ ಆಚರಣೆಯ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕ ಹಾಗೂ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮಕುಮಾರ್ ಮಾತನಾಡಿದರು.
ಪಟಾಕಿ ಸಿಡಿಸುವುದರಿಂದ ವಾಯು ಮತ್ತು ಶಬ್ದ ಮಾಲಿನ್ಯ ಉಂಟಾಗುವುದಲ್ಲದೆ, ಮಕ್ಕಳು, ಹಿರಿಯ ನಾಗರಿಕರು, ಉಸಿರಾಟದ ಸಮಸ್ಯೆ ಹೊಂದಿರುವವರು, ಪ್ರಾಣಿಗಳು ಹಾಗೂ ಪಕ್ಷಿಗಳ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ. ಆದ್ದರಿಂದ ಸಾರ್ವಜನಿಕರು ಪರಿಸರ ಸ್ನೇಹಿ, ಸುರಕ್ಷಿತ ಹಾಗೂ ಸ್ವಚ್ಛ ರೀತಿಯಲ್ಲಿ ದೀಪಾವಳಿ ಆಚರಿಸುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ಶಾಲಾ ಮುಖ್ಯೋಪಾಧ್ಯಾಯ ಎಚ್.ಎಂ. ವೆಂಕಟೇಶ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಮಾಲಿನ್ಯಕಾರಿ ಪಟಾಕಿಗಳನ್ನು ತ್ಯಜಿಸಿ ಹಣತೆ ಬೆಳಗಿಸುವ ಮೂಲಕ ದೀಪಾವಳಿ ಆಚರಿಸಬೇಕು. ಅಲ್ಲದೆ, ಪೋಷಕರು ಹಾಗೂ ಸಾರ್ವಜನಿಕರಲ್ಲಿ ಹಸಿರು ದೀಪಾವಳಿ ಆಚರಣೆಯ ಕುರಿತು ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ಶಾಲೆಯ ಇಕೋ ಕ್ಲಬ್ ಉಸ್ತುವಾರಿ ಶಿಕ್ಷಕಿ ಕೆ.ಎಸ್. ರಮ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಪಟಾಕಿಗಳ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುವುದರಿಂದ ಪಟಾಕಿಗಳನ್ನು ತ್ಯಜಿಸಿ ಹಣತೆ ಬೆಳಗಿಸುವ ಮೂಲಕ ಪರಿಸರ ಸ್ನೇಹಿ ದೀಪಾವಳಿ ಆಚರಿಸುವ ಮಹತ್ವವನ್ನು ವಿವರಿಸಿದರು.
ವಿದ್ಯಾರ್ಥಿಗಳಾದ ಎಚ್.ವಿ. ಎಮೀಮ ಹಾಗೂ ಎಚ್.ಜಿ. ಹರ್ಷಿತ್ ಹಸಿರು ದೀಪಾವಳಿ ಆಚರಣೆಯ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಶಾಲಾ ಶಿಕ್ಷಕರಾದ ಎಸ್.ಕೆ. ಶಿವಾನಂದ, ಸಿ.ಎಂ. ಬಬಿತ, ಜಿ. ವನಜ, ಸುಜಾತ ಹಾಗೂ ಎಚ್.ಪಿ. ಪ್ರತಿಮ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಘೋಷಣಾ ಫಲಕಗಳನ್ನು ಹಿಡಿದು ಪರಿಸರ ಜಾಗೃತಿ ಮೂಡಿಸಿದರು. ‘ಹಣತೆ ಬೆಳಗಿಸಿ ದೀಪಾವಳಿ ಆಚರಿಸಿ’, ‘ಮಾಲಿನ್ಯಕಾರಿ ಪಟಾಕಿ ತ್ಯಜಿಸಿ ಪರಿಸರ ಉಳಿಸಿ’, ‘ಹಸಿರು ದೀಪಾವಳಿ ಆಚರಿಸಿ’, ‘ಸ್ವಸ್ಥ, ಸ್ವಚ್ಛ ದೀಪಾವಳಿ ಆಚರಣೆ ನಮ್ಮೆಲ್ಲರ ಹೊಣೆ’ ಎಂಬ ಘೋಷಣೆಗಳನ್ನು ಸಾರಿದರು.

















