ಮಡಿಕೇರಿ, NEWS DESK ನ.6: ಕೊಡಗು ಜಿಲ್ಲೆಯಲ್ಲಿ ಕೃಷಿ ಭೂಮಿಗಳ ಮಾರಾಟ ಹಾಗೂ ಸಾಂಪ್ರದಾಯಿಕ ಕೃಷಿ ಪದ್ಧತಿಗೆ ವಿರುದ್ಧವಾಗಿ ಕಟ್ಟಡಗಳ ನಿರ್ಮಾಣ ಹೆಚ್ಚುತ್ತಿರುವುದರಿಂದ ಜಿಲ್ಲೆಯ ಭೌಗೋಳಿಕ ಚಿತ್ರಣವೇ ಬದಲಾಗುತ್ತಿದೆ. ಇದರಿಂದ ಹಸಿರು ಪರಿಸರ ಹದಗೆಡುತ್ತಿದ್ದು, ಅಂತರ್ಜಲ ಮಟ್ಟವೂ ಕುಸಿಯುತ್ತಿದೆ ಎಂದು ಅಮ್ಮತ್ತಿ ರೈತ ಸಂಘ ಆತಂಕ ವ್ಯಕ್ತಪಡಿಸಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಕಾವಡಿಚಂಡ ಯು. ಗಣಪತಿ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ಮಂದಿ ಕೊಡಗಿನಲ್ಲಿ ಮನಬಂದಂತೆ ಆಸ್ತಿಗಳನ್ನು ಖರೀದಿಸಿ, ತಮ್ಮ ಇಚ್ಛೆಯಂತೆ ಬಳಸಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಕೃಷಿ ಸಂಸ್ಕೃತಿಗೆ ವಿರುದ್ಧವಾಗಿ ಕೃಷಿ ಭೂಮಿಗಳಲ್ಲಿ ಕಟ್ಟಡಗಳನ್ನು ನಿರ್ಮಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಹಿಂದೆ ಗದ್ದೆ ಬಯಲುಗಳಲ್ಲಿ ವ್ಯಾಪಕವಾಗಿ ಭತ್ತದ ಕೃಷಿ ನಡೆಯುತ್ತಿದ್ದುದರಿಂದ ಅಂತರ್ಜಲ ಮಟ್ಟ ಉತ್ತಮವಾಗಿತ್ತು. ಆದರೆ, ಇದೀಗ ಕೃಷಿ ಭೂಮಿಗಳನ್ನು ಕಟ್ಟಡ ನಿರ್ಮಾಣಕ್ಕೆ ಬಳಸುತ್ತಿರುವುದರಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಕೃಷಿ ಭೂಮಿಗಳ ಪರಿವರ್ತನೆಯಿಂದ ಜಮೀನುಗಳು ಬರಡಾಗುತ್ತಿದ್ದು, ಜಿಲ್ಲೆಯ ಪರಿಸರ ಸಮತೋಲನಕ್ಕೂ ಧಕ್ಕೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೊಡಗಿನ ನೈಸರ್ಗಿಕ ಸೌಂದರ್ಯಕ್ಕೆ ಧಕ್ಕೆ
ಕೊಡಗು 1952ರಿಂದ 1956ರವರೆಗೆ ‘ಸಿ’ ರಾಜ್ಯವಾಗಿದ್ದ ಅವಧಿಯಲ್ಲಿ ಅತ್ಯಂತ ಸುಂದರ ನಾಡಾಗಿತ್ತು. ಬಳಿಕ ವಿಶಾಲ ಕರ್ನಾಟಕದೊಂದಿಗೆ ವಿಲೀನಗೊಂಡ ನಂತರ ಹೊರಭಾಗದ ಮಂದಿ ಜಿಲ್ಲೆಯ ಜಮೀನುಗಳನ್ನು ಖರೀದಿಸಿ ನಡೆಸುತ್ತಿರುವ ಚಟುವಟಿಕೆಗಳಿಂದ ಕೊಡಗಿನ ನೈಸರ್ಗಿಕ ಸೌಂದರ್ಯ ಹಾಳಾಗುವುದರ ಜೊತೆಗೆ ಸ್ಥಳೀಯ ಸಂಸ್ಕೃತಿಗೂ ಧಕ್ಕೆಯಾಗಿದೆ ಎಂದು ಗಣಪತಿ ಬೇಸರ ವ್ಯಕ್ತಪಡಿಸಿದರು.
ಕೃಷಿ ಭೂಮಿಗಳ ಪರಿವರ್ತನೆಯಿಂದ ಅಂತರ್ಜಲ ಮಟ್ಟ ನಿರಂತರವಾಗಿ ಕುಸಿಯುತ್ತಿದ್ದು, ಈಗಾಗಲೇ ಜಿಲ್ಲೆಯ ಕೆಲವು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು.
ಕೊಡಗಿನ ಸ್ಥಳೀಯ ನಿವಾಸಿಗಳು ತಮ್ಮ ಜಮೀನುಗಳ ಮಹತ್ವವನ್ನು ಅರಿತುಕೊಳ್ಳಬೇಕು. ಯಾವುದೇ ಕಾರಣಕ್ಕೂ ಹೊರಗಿನವರಿಗೆ ಜಮೀನುಗಳನ್ನು ಪರಭಾರೆ ಮಾಡದೆ, ಮಾರಾಟ ಅನಿವಾರ್ಯವಾದಲ್ಲಿ ಸ್ಥಳೀಯರಿಗೇ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಬಿಲ್ ವಿನಾಯಿತಿಗೆ ಆಗ್ರಹ
ಹಿಂದಿನ ಸರ್ಕಾರದ ಅವಧಿಯಲ್ಲಿ ಕೊಡಗಿನ ಬೆಳೆಗಾರರು ಕೃಷಿ ಚಟುವಟಿಕೆಗಳಿಗೆ ಬಳಸುವ 10 ಎಚ್ಪಿ ವರೆಗಿನ ಮೋಟಾರ್ ಪಂಪ್ಗಳಿಗೆ ವಿದ್ಯುತ್ ಬಿಲ್ನಲ್ಲಿ ರಿಯಾಯಿತಿ ನೀಡುವ ವಿಚಾರ ಪ್ರಸ್ತಾಪವಾಗಿತ್ತು. ಆದರೆ, ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಹೊರತುಪಡಿಸಿ ರೈತರ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿಲ್ಲ ಎಂದು ಟೀಕಿಸಿದರು.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕವೇ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದ ಅವರು, ಕೊಡಗಿನ ಬೆಳೆಗಾರರ ಹಿತದೃಷ್ಟಿಯಿಂದ ಕೃಷಿ ಪಂಪ್ಸೆಟ್ಗಳಿಗೆ ತಕ್ಷಣ ವಿದ್ಯುತ್ ಬಿಲ್ ವಿನಾಯಿತಿ ಒದಗಿಸಬೇಕೆಂದು ಒತ್ತಾಯಿಸಿದರು.
ಪೌತಿ ಖಾತೆ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಕ್ರಮ ಕೈಗೊಳ್ಳಲಿ
ಕೊಡಗಿನ ಕೃಷಿಕರು ಜಮೀನಿನ ದಾಖಲೆಗಳಲ್ಲಿನ ಪೌತಿ ಖಾತೆ ಸಮಸ್ಯೆಯಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಜಿಲ್ಲೆಯ ಹಲವು ಜಮೀನುಗಳ ಆರ್ಟಿಸಿಗಳಲ್ಲಿ ಒಂದೇ ಕುಟುಂಬದ ಹತ್ತಾರು ಮಂದಿಯ ಹೆಸರುಗಳಿದ್ದು, ಅವರಲ್ಲಿ ಮೃತಪಟ್ಟವರ ಹೆಸರುಗಳೂ ಇನ್ನೂ ದಾಖಲೆಗಳಲ್ಲಿ ಮುಂದುವರಿದಿವೆ ಎಂದು ತಿಳಿಸಿದರು.
ಕೆಲವು ಆರ್ಟಿಸಿಗಳಲ್ಲಿ ಹಿಂದಿನ ತಲೆಮಾರಿನವರ ಹೆಸರುಗಳಿದ್ದು, ಅವರ ಬಗ್ಗೆ ಪ್ರಸ್ತುತ ಕುಟುಂಬದ ಸದಸ್ಯರಿಗೆ ಸ್ಪಷ್ಟ ಮಾಹಿತಿಯೇ ಇಲ್ಲ. ಇನ್ನೂ ಕೆಲವು ದಾಖಲೆಗಳಲ್ಲಿ ನಮೂದಾಗಿರುವ ವ್ಯಕ್ತಿಗಳು ಜೀವಂತವಾಗಿದ್ದಾರೆಯೇ ಅಥವಾ ಮೃತಪಟ್ಟಿದ್ದಾರೆಯೇ ಎಂಬುದೂ ತಿಳಿದಿಲ್ಲ ಎಂದರು.
ನಾಲ್ಕೈದು ದಶಕಗಳ ಹಿಂದೆ ಮೃತಪಟ್ಟವರ ಮರಣ ಪ್ರಮಾಣಪತ್ರಗಳು ಲಭ್ಯವಿಲ್ಲದ ಕಾರಣ ಆರ್ಟಿಸಿಗಳಲ್ಲಿನ ಲೋಪದೋಷಗಳನ್ನು ಸರಿಪಡಿಸುವುದು ಕಷ್ಟಕರವಾಗಿದೆ. ಇದರಿಂದ ರೈತರು ತಮ್ಮ ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಪೌತಿ ಖಾತೆ ಸಮಸ್ಯೆ ಪರಿಹಾರಕ್ಕೆ ವಿಶೇಷ ಕ್ರಮ ಕೈಗೊಳ್ಳಬೇಕೆಂದು ಕಾವಡಿಚಂಡ ಯು. ಗಣಪತಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಅಮ್ಮತ್ತಿ ರೈತ ಸಂಘದ ಅಧ್ಯಕ್ಷ ಕೇಚಂಡ ಕುಶಾಲಪ್ಪ, ಕಾರ್ಯದರ್ಶಿ ಮನೆಯಪಂಡ ಜಿ. ಪೊನ್ನಪ್ಪ ಹಾಗೂ ಖಜಾಂಚಿ ಪಟ್ಟಡ ಬಿ. ಅರುಣ್ ಚಂಗಪ್ಪ ಉಪಸ್ಥಿತರಿದ್ದರು.

















