ಕುಶಾಲನಗರ, NEWS DESK ನ.7: ರಾಷ್ಟ್ರಕವಿ ಕುವೆಂಪು ಅವರು ಆಧುನಿಕ ಕನ್ನಡ ಸಾಹಿತ್ಯ ಲೋಕದ ದಿಗ್ಗಜರಾಗಿದ್ದು, ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅನನ್ಯ ಮತ್ತು ಹಿರಿದಾದುದು. ಅವರ ಸಾಹಿತ್ಯವು ವಿಶ್ವಮಾನವ ಸಂದೇಶ, ವೈಚಾರಿಕತೆ, ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಪರಿಸರ ಪ್ರಜ್ಞೆಯನ್ನು ಸಾರುತ್ತದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕಿ ಹಾಗೂ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಕನ್ನಡ ಅಧ್ಯಾಪಕಿ ಬಿ.ಬಿ.ಹೇಮಲತಾ ಹೇಳಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ದಿವಂಗತ ಗಂಗಮ್ಮ ರಾಚಪ್ಪ ದತ್ತಿನಿಧಿ ಉಪನ್ಯಾಸ, ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ನಡೆದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ‘ಕನ್ನಡ ಸಾಹಿತ್ಯಕ್ಕೆ ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯದ ಕೊಡುಗೆಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಕುವೆಂಪು ಅವರು ಇಪ್ಪತ್ತನೇ ಶತಮಾನ ಕಂಡ ದೈತ್ಯ ಪ್ರತಿಭೆಯಾಗಿದ್ದು, ‘ಯುಗದ ಕವಿ, ಜಗದ ಕವಿ’ ಎನಿಸಿಕೊಂಡವರು. ‘ಓ ನನ್ನ ಚೇತನ, ಆಗು ನೀ ಅನಿಕೇತನ’ ಎಂಬ ತತ್ವದ ಮೂಲಕ ಮನುಜಮತ, ವಿಶ್ವಪಥದ ಪರಿಕಲ್ಪನೆಯನ್ನು ಜಗತ್ತಿಗೆ ಸಾರಿದವರು. ಕನ್ನಡ ಸಾಹಿತ್ಯ ಲೋಕದ ಪ್ರಕೃತಿ ಕವಿ ಮತ್ತು ರಸಕವಿಯಾಗಿ ಪ್ರಸಿದ್ಧರಾಗಿರುವ ಅವರ ಸಾಹಿತ್ಯಕ್ಕೂ ಪ್ರಕೃತಿಗೂ ಅವಿನಾಭಾವ ಸಂಬಂಧವಿದೆ ಎಂದರು.
ಕುವೆಂಪು ಅವರು ಜನಿಸಿ ಬೆಳೆದ ಮಲೆನಾಡಿನ ಕುಪ್ಪಳ್ಳಿಯ ದಟ್ಟ ಅರಣ್ಯ, ಮಳೆ, ಬೆಟ್ಟ-ಗುಡ್ಡಗಳು, ನದಿಗಳು ಹಾಗೂ ಪಕ್ಷಿಗಳ ಚಿಲಿಪಿಲಿ ನಾದ ಅವರ ಬಾಲ್ಯದ ಮೇಲೆ ಗಾಢ ಪ್ರಭಾವ ಬೀರಿದ್ದು, ಅವರ ಕಾವ್ಯಕ್ಕೆ ಜೀವ ತುಂಬಿದವು ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಮಾತನಾಡಿ, ಕನ್ನಡ ನಾಡು-ನುಡಿ, ಕಲೆ ಮತ್ತು ಸಂಸ್ಕೃತಿಗೆ ಎರಡು ಸಾವಿರ ವರ್ಷಗಳಿಗೂ ಅಧಿಕ ಭವ್ಯ ಇತಿಹಾಸವಿದೆ. ಇದರ ಸಂರಕ್ಷಣೆ ಮತ್ತು ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು. ವಿದ್ಯಾರ್ಥಿಗಳು ಕನ್ನಡ ಸಾಹಿತ್ಯವನ್ನು ಅಭ್ಯಾಸ ಮಾಡುವ ಮೂಲಕ ಭಾಷೆಯ ಬೆಳವಣಿಗೆಯೊಂದಿಗೆ ತಮ್ಮ ಜ್ಞಾನವನ್ನೂ ವೃದ್ಧಿಸಿಕೊಳ್ಳಬೇಕು ಎಂದರು.
ಕನ್ನಡವು ಭಾರತದ ಶಾಸ್ತ್ರೀಯ ಭಾಷೆಗಳಲ್ಲಿ ಒಂದಾಗಿದ್ದು, ಶ್ರೀಮಂತ ವ್ಯಾಕರಣ ಮತ್ತು ಶಬ್ದಕೋಶವನ್ನು ಹೊಂದಿದೆ. ಕನ್ನಡ ದತ್ತಿ ಉಪನ್ಯಾಸ ಕಾರ್ಯಕ್ರಮಗಳು ಭಾಷೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ಹಾಗೂ ಸಾಮಾಜಿಕ ಮೌಲ್ಯಗಳನ್ನು ಜನರಿಗೆ ತಲುಪಿಸುವುದರೊಂದಿಗೆ ಹಿರಿಯ ಚೇತನಗಳನ್ನು ಸ್ಮರಿಸುವ ಮಹತ್ವದ ಸಾಹಿತ್ಯಿಕ ಕಾರ್ಯಕ್ರಮಗಳಾಗಿವೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎಸ್.ಎನ್.ರಾಜೇಂದ್ರ ಮಾತನಾಡಿ, ಕನ್ನಡ ಭಾಷೆ, ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ಸಾಹಿತ್ಯದ ಅಭಿರುಚಿ ಬೆಳೆಸಿಕೊಳ್ಳುವುದರೊಂದಿಗೆ ಕನ್ನಡ ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಂಡು ಮಾತೃಭಾಷೆಗೆ ಪ್ರಾಮುಖ್ಯತೆ ನೀಡಬೇಕು ಎಂದರು.
ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಕುವೆಂಪು ಅವರು ಕೇವಲ ಮಹಾನ್ ಕವಿಗಳಷ್ಟೇ ಅಲ್ಲದೆ, ಸಮಾಜದಲ್ಲಿದ್ದ ಮೌಢ್ಯ, ಜಾತಿ ಪದ್ಧತಿ ಮತ್ತು ಅಸಮಾನತೆಯ ವಿರುದ್ಧ ಧ್ವನಿ ಎತ್ತಿದ ಸಾಮಾಜಿಕ ಹರಿಕಾರ ಹಾಗೂ ಮಾನವತಾವಾದಿಯಾಗಿದ್ದರು. ಅವರ ವೈಚಾರಿಕ ಪ್ರಜ್ಞೆ ಸಮಾಜದ ಕಣ್ತೆರೆಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದರು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ಬಿ.ಜಿ.ಶಾಂತಿ, ಮನುಷ್ಯನನ್ನು ಮನುಷ್ಯನಾಗಿಯೇ ಕಾಣಬೇಕು ಎಂಬ ಶುದ್ಧ ಮಾನವತಾವಾದವನ್ನು ಕುವೆಂಪು ಪ್ರತಿಪಾದಿಸಿದ್ದರು. ‘ಮನುಜಮತ, ವಿಶ್ವಪಥ’ ಎಂಬ ದಿವ್ಯ ಮಂತ್ರವನ್ನು ಜಗತ್ತಿಗೆ ಸಾರಿದ ಅವರ ಸಾಹಿತ್ಯವನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು ಎಂದರು.
ದತ್ತಿ ಉಪನ್ಯಾಸದ ದಾನಿಯೂ ಆದ ಶಿಕ್ಷಕಿ ಸ್ನೇಹ ಬಸಮ್ಮ ಮಾತನಾಡಿ, ವಿದ್ಯಾರ್ಥಿಗಳು ಕುವೆಂಪು ಅವರ ವಿಶ್ವಮಾನವ ಸಂದೇಶ ಮತ್ತು ವೈಚಾರಿಕತೆಯನ್ನು ಅರಿತುಕೊಳ್ಳುವುದರೊಂದಿಗೆ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಭಾಷಾವಾರು ಪ್ರಾಂತ್ಯಗಳ ರಚನೆ ಕುರಿತು ಮಾತನಾಡಿದ ರಾಜ್ಯಶಾಸ್ತ್ರ ಉಪನ್ಯಾಸಕ ಟಿ.ಡಿ.ರಾಜ ಅವರು ಕರ್ನಾಟಕ ಏಕೀಕರಣದ ಹೋರಾಟದ ವಿವಿಧ ಮಜಲುಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಕೋಶಾಧಿಕಾರಿ ಕೆ.ವಿ.ಉಮೇಶ್, ಹೆಬ್ಬಾಲೆ ಘಟಕದ ಅಧ್ಯಕ್ಷ ಎಂ.ಎನ್.ಮೂರ್ತಿ, ಉಪನ್ಯಾಸಕರಾದ ಫಿಲಿಪ್ ವಾಸ್, ಕೆ.ಎಲ್.ಅವಿನಾಶ್, ಪ್ರಮೋದ್, ಕಾಲೇಜಿನ ಗ್ರಂಥಪಾಲಕ ಎಸ್.ನಂದೀಶ್ ಉಪಸ್ಥಿತರಿದ್ದರು.
ಕನ್ನಡ ಉಪನ್ಯಾಸಕಿ ಎಂ.ಎಚ್.ಸೋನಿಯಾ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ಕೆ.ಎಲ್.ಅವಿನಾಶ್ ಸ್ವಾಗತಿಸಿದರು. ಉಪನ್ಯಾಸಕ ಪ್ರಮೋದ್ ವಂದಿಸಿದರು. ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.

















