ಚನ್ನರಾಯಪಟ್ಟಣ, NEWS DESK ನ.7: ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ಹೋಬಳಿಯ ಶ್ರೀ ಕ್ಷೇತ್ರ ಕಬ್ಬಳ್ಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದ ಲೋಕಾರ್ಪಣೆ ಹಾಗೂ ಮಹಾಕುಂಭಾಭಿಷೇಕ ಮಹೋತ್ಸವವು ನವೆಂಬರ್ 14ರಿಂದ 16ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಆಶ್ರಯದಲ್ಲಿ, ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ದಿವ್ಯ ಸಂಕಲ್ಪದಂತೆ, ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಹಾಗೂ ಹಾಸನ ಮತ್ತು ಕೊಡಗು ಜಿಲ್ಲೆಯ ಕಾರ್ಯದರ್ಶಿಗಳಾದ ಪರಮಪೂಜ್ಯ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಈ ಧಾರ್ಮಿಕ ಮಹೋತ್ಸವ ಆಯೋಜಿಸಲಾಗಿದೆ.
ಮೂರು ದಿನಗಳ ಕಾಲ ನಡೆಯುವ ಮಹೋತ್ಸವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು, ಪೂಜಾ ಕೈಂಕರ್ಯಗಳು ಹಾಗೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಭಕ್ತಿ ಮತ್ತು ಶ್ರದ್ಧೆಯಿಂದ ನಡೆಯಲಿರುವ ಈ ಕಾರ್ಯಕ್ರಮವು ಧಾರ್ಮಿಕ ಪರಂಪರೆ, ಸನಾತನ ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಸಾರುವ ಮಹತ್ವದ ಪುಣ್ಯ ಕಾರ್ಯವಾಗಿದೆ.
ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಪೂಜ್ಯರ ಆಶೀರ್ವಚನ ಪಡೆಯುವ ಸೌಭಾಗ್ಯವೂ ಭಕ್ತರಿಗೆ ದೊರೆಯಲಿದೆ.
ಈ ಮಹೋತ್ಸವ ಯಶಸ್ವಿಯಾಗಿ ನಡೆಯಲೆಂದು ಶ್ರೀ ಕಾವೇರಿ ವಿದ್ಯಾಸಂಘ (ರಿ.), ಭಾಗಮಂಡಲದ ನಿರ್ದೇಶಕರು, ಆಡಳಿತ ಮಂಡಳಿಯ ಅಧಿಕಾರಿಗಳು, ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗ, ಪ್ರೌಢಶಾಲಾ ವಿಭಾಗದ ಹಿರಿಯ ಸಹಾಯಕ ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗ ಹಾಗೂ ಬಿ.ಜಿ.ಎಸ್. ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.

















