ಮಡಿಕೇರಿ, NEWS DESK ನ.9: ಗ್ರಾಮಸ್ಥರ ಒಗ್ಗಟ್ಟು, ಸಹಕಾರ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಸಾರುವ ಉದ್ದೇಶದಿಂದ ಬೆಕ್ಕೆ ಸುಡ್ಲೂರು ಗ್ರಾಮದಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿದ್ದ ‘ಒತೋರ್ಮೆ’ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಗ್ರಾಮದ ದೇವ ಬಂಡಾರ ಸಮಿತಿಯಿಂದ ನಿರ್ಮಿಸಲಾದ ನೂತನ ಮುಖ್ಯದ್ವಾರ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಬಸ್ ನಿಲ್ದಾಣವನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ದೇವಾಡಳಿತ ಮಂಡಳಿಯ ಸದಸ್ಯರು, ತಕ್ಕ ಮುಖ್ಯಸ್ಥರು ಹಾಗೂ ಗ್ರಾಮದ ಹಿರಿಯರು ನೂತನ ಕಾಮಗಾರಿಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಒತೋರ್ಮೆ ಕಾರ್ಯಕ್ರಮದ ಅಂಗವಾಗಿ ಗ್ರಾಮಸ್ಥರಲ್ಲಿ ಒಗ್ಗಟ್ಟು ಮತ್ತು ಸೌಹಾರ್ದತೆಯನ್ನು ಬೆಳೆಸುವ ಉದ್ದೇಶದಿಂದ ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಹಗ್ಗಜಗ್ಗಾಟ, ವಿವಿಧ ಕೇರಿಗಳ ನಡುವಿನ ವಾಲಿಬಾಲ್ ಪಂದ್ಯಾವಳಿ, ತೆಂಗಿನಕಾಯಿ ಗುಂಡು ಹೊಡೆಯುವ ಸ್ಪರ್ಧೆ ಸೇರಿದಂತೆ ಹಲವು ಆಟೋಟಗಳು ಗಮನ ಸೆಳೆದವು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಗ್ರಾಮಸ್ಥರ ಸಕ್ರಿಯ ಪಾಲ್ಗೊಳ್ಳುವಿಕೆ ಹಾಗೂ ಸಹಕಾರದೊಂದಿಗೆ ನಡೆದ ಈ ಕಾರ್ಯಕ್ರಮವು ಗ್ರಾಮದ ಒಗ್ಗಟ್ಟು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸಿತು.
























