ಮಡಿಕೇರಿ, NEWS DESK ನ.9: ನೃತ್ಯ ಪ್ರತಿಭೆ, ಸತತ ಪರಿಶ್ರಮ ಹಾಗೂ ಅದ್ಭುತ ಪ್ರದರ್ಶನದ ಮೂಲಕ ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋ ತಂಡವು ವಿವಿಧ ಪ್ರತಿಷ್ಠಿತ ವೇದಿಕೆಗಳಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದೆ.
ಜೀ ಕನ್ನಡ ವಾಹಿನಿಯ ಜನಪ್ರಿಯ ನೃತ್ಯ ರಿಯಾಲಿಟಿ ಶೋ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (DKD)’ ವೇದಿಕೆಯಲ್ಲಿ ಭಾಗವಹಿಸಿದ್ದ ತಂಡವು ತನ್ನ ಅತ್ಯುತ್ತಮ ನೃತ್ಯ ಪ್ರದರ್ಶನದ ಮೂಲಕ ‘ಫೈರ್ ಬ್ರ್ಯಾಂಡ್’ ಹಾಗೂ ‘ಗೋಲ್ಡನ್ ಹ್ಯಾಟ್’ ಎಂಬ ವಿಶೇಷ ಗೌರವಗಳನ್ನು ಪಡೆದುಕೊಂಡಿದೆ.
ಅಲ್ಲದೆ, ಮಡಿಕೇರಿ ದಸರಾ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಗೋಣಿಕೊಪ್ಪ ಯುವ ದಸರಾ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಹಾಗೂ ಸೋಮವಾರಪೇಟೆಯಲ್ಲಿ ನಡೆದ ಆಯ್ದ ಪೂಜಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸುವ ಮೂಲಕ ತನ್ನ ಪ್ರತಿಭೆಯನ್ನು ಮತ್ತೊಮ್ಮೆ ಅನಾವರಣಗೊಳಿಸಿದೆ.
ತಂಡದ ಈ ಯಶಸ್ಸಿನ ಹಿಂದೆ ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋದ ಕೊರಿಯೋಗ್ರಾಫರ್ ಅಭಿಷೇಕ್ ಮಾಸ್ಟರ್ ಅವರ ಮಾರ್ಗದರ್ಶನ, ಪರಿಶ್ರಮ ಹಾಗೂ ಸೃಜನಶೀಲತೆ ಪ್ರಮುಖ ಪಾತ್ರ ವಹಿಸಿದೆ. ವಿದ್ಯಾರ್ಥಿಗಳ ನಿರಂತರ ಅಭ್ಯಾಸ ಮತ್ತು ಸಮರ್ಪಣಾ ಮನೋಭಾವವೂ ಸಾಧನೆಗೆ ಪೂರಕವಾಗಿದೆ.
ಈ ಸಾಧನೆಯಲ್ಲಿ ಪ್ರವೀಣಾ, ಯಾನಾ, ತೇಜಸ್ ರಾಜ್, ಅಶ್ವಧಿ, ಪುನೀತ್, ಶಿವ ಕುಮಾರ್, ಶ್ರವಣ್, ಕಿಶಿ ಕಾವೇರಮ್ಮ, ತಶ್ಮಿತಾ, ಪೂಜಾ, ದಿಶಾ, ನಿಶ್ಮಿತಾ, ತ್ರಿಶ್ಯಾ, ಪ್ರಜ್ಞಾ, ಪ್ರೇಕ್ಷಾ, ಐಶ್ವರ್ಯ, ವರ್ಷ, ಅಮೃತಾ, ಸನ್ವಿಕಾ, ಮೋನಾಲಿ, ಚಿನ್ಮಯ್, ಕನಿಷ್, ತೇಜಸ್ ಪಿ.ಸಿ., ಸ್ಟರ್ಲಿಟಾ, ಆದ್ಯಶ್ರೀ, ತನೀಶ್ ಹಾಗೂ ಆರ್ವಿ ದಮನ್ ಭಾಗವಹಿಸಿದ್ದಾರೆ.
ತಂಡದ ಸಾಧನೆಗೆ ಪೋಷಕರು, ಹಿತೈಷಿಗಳು ಹಾಗೂ ನಾಟ್ಯಕಲಾ ಸಂಸ್ಥೆಯ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ನೃತ್ಯ ಕ್ಷೇತ್ರದಲ್ಲಿ ನಿರಂತರ ಸಾಧನೆಯ ಮೂಲಕ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸುತ್ತಿರುವ ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋ ತಂಡದ ಯಶಸ್ಸು ಜಿಲ್ಲೆಯ ಕಲಾ ವಲಯಕ್ಕೆ ಹೆಮ್ಮೆಯ ಸಂಗತಿಯಾಗಿದೆ.
























