ಸುಂಟಿಕೊಪ್ಪ, NEWS DESK ನ.9: ಕನ್ನಡ ರಾಜ್ಯೋತ್ಸವದ ಅಂಗವಾಗಿ 7ನೇ ಹೊಸಕೋಟೆಯ ದೀಪ್ತಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಭಾನುವಾರ ಆಯೋಜಿಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಸುಂಟಿಕೊಪ್ಪ ಹೋಬಳಿ ಘಟಕ, ಕೂರ್ಗ್ ಬ್ಲಡ್ ಫೌಂಡೇಶನ್ ಕರ್ನಾಟಕ (ರಿ.) ಹಾಗೂ ಸ್ನೇಹಿತರ ಬಳಗದ ಜಂಟಿ ಆಶ್ರಯದಲ್ಲಿ ಕೊಡಗು ಜಿಲ್ಲಾ ರಕ್ತನಿಧಿ ಘಟಕದ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ದೀಪಕ್ ಕನ್ನಡಿಗ, ಕರವೇ ಸಂಘಟನೆಯು ಕಳೆದ ಹಲವು ವರ್ಷಗಳಿಂದ ಕನ್ನಡಪರ ಹೋರಾಟದ ಜೊತೆಗೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ತುರ್ತು ಸಂದರ್ಭದಲ್ಲಿ ರಕ್ತದಾನದ ಮೂಲಕ ಮತ್ತೊಬ್ಬರ ಜೀವ ಉಳಿಸುವ ಮಹತ್ವದ ಕಾರ್ಯವನ್ನು ಸಂಘಟನೆ ಮಾಡುತ್ತಿದೆ. ಹೋಬಳಿ ಘಟಕಗಳು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ರಕ್ತನಿಧಿ ಘಟಕದ ಅಧಿಕಾರಿ ಡಾ. ಕರುಂಬಯ್ಯ ಮಾತನಾಡಿ, ರಕ್ತದಾನ ಮಾಡಲು ಯಾರೂ ಭಯಪಡುವ ಅಗತ್ಯವಿಲ್ಲ. ಒಬ್ಬ ವ್ಯಕ್ತಿ ನೀಡುವ ರಕ್ತದಿಂದ ಮೂವರು ಜೀವಗಳನ್ನು ಉಳಿಸಲು ಸಾಧ್ಯವಿದೆ. ಜಿಲ್ಲೆಯಲ್ಲಿ ಪ್ರತಿ ತಿಂಗಳು ಸುಮಾರು 500ರಿಂದ 600 ಯೂನಿಟ್ ರಕ್ತದ ಅಗತ್ಯವಿದ್ದು, ಇಂತಹ ಶಿಬಿರಗಳು ರಕ್ತದ ಕೊರತೆ ನೀಗಿಸಲು ಸಹಕಾರಿಯಾಗಿವೆ ಎಂದು ತಿಳಿಸಿದರು. ಶಿಬಿರ ಆಯೋಜಿಸಿದ ಸಂಘಟಕರಿಗೆ ಕೃತಜ್ಞತೆ ಸಲ್ಲಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಟೆಸ್ಸಿ ಮ್ಯಾನುವೆಲ್ ಹಾಗೂ ಕುಶಾಲನಗರ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಜಾಕ್ ರಕ್ತದಾನದ ಮಹತ್ವದ ಕುರಿತು ಮಾತನಾಡಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ದೇಶದ ಗಡಿಯಲ್ಲಿ ರಾಷ್ಟ್ರವನ್ನು ಕಾಯುವ ಯೋಧರ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಸ್ಥಳೀಯ ನಿವೃತ್ತ ಸೇನಾನಿ ಶಿವನ್ ಅವರನ್ನು ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಮಾಜಮುಖಿ ಸೇವೆ ಸಲ್ಲಿಸಿದ ಗಣ್ಯರು ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಶಿಬಿರದಲ್ಲಿ ಒಟ್ಟು 40 ಮಂದಿ ರಕ್ತದಾನ ಮಾಡಿ ಮಾನವೀಯತೆ ಮೆರೆದರು. ನಿಜಾಂ ಉಸ್ತಾದ್ ಅವರು ರಕ್ತದಾನ ಮಾಡಿದ್ದು ವಿಶೇಷವಾಗಿತ್ತು. ಸಂಘಟನೆಯ ನೂರಾರು ಕಾರ್ಯಕರ್ತರು ಹಾಗೂ ಮಹಿಳಾ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವೇದಿಕೆಯಲ್ಲಿ ಕರವೇ ಸುಂಟಿಕೊಪ್ಪ ಹೋಬಳಿ ಅಧ್ಯಕ್ಷ ಪವನ್ ಪಾಂಡುರಂಗ, ಕೂರ್ಗ್ ಬ್ಲಡ್ ಫೌಂಡೇಶನ್ ಸಂಸ್ಥಾಪಕ ಸಮೀರ್, ಸಂಸ್ಥೆಯ ಅಧ್ಯಕ್ಷ ವಿನು, ಮಹಿಳಾ ವಿಭಾಗದ ಲವಿ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಮಾಜಿ ಉಪಾಧ್ಯಕ್ಷ ಮುಸ್ತಫ, ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಅಬ್ಬಾಸ್, ಕೆ.ಸಿ. ಸಂತೋಷ್, ನಿರ್ಮಲಾ ಪ್ರಕಾಶ್, ವಸಂತ್ ಆಚಾರ್ಯ, ಜೋಸೆಫ್, ಎ.ಪಿ. ರಮೇಶ್, ಸಂಧ್ಯಾ ಗಣೇಶ್, ಆನಂದ್ ಕನ್ನಡಿಗ, ಆಸಿಫ್, ಶಶಿಕಲಾ, ಮುರುಗೇಶ್, ಸಮೀರ್, ಪ್ರತಾಪ್ ಪೂಜಾರಿ, ಡಿ.ಆರ್. ಯೋಗೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕೊಡಗು ಜಿಲ್ಲಾ ರಕ್ತನಿಧಿ ಘಟಕದ ವೈದ್ಯರಾದ ಡಾ. ಮನೋಜ್ ಕುಮಾರ್, ಡಾ. ಮಂಜುನಾಥ್, ಡಾ. ಪೂರ್ಣಿಮಾ, ಡಾ. ಕಾರ್ತಿಕ್ ಹಾಗೂ ಸಿಬ್ಬಂದಿ ವರ್ಗದವರು ಶಿಬಿರದಲ್ಲಿ ಸೇವೆ ಸಲ್ಲಿಸಿದರು. ಸಂಘಟನೆಯ ಪದಾಧಿಕಾರಿಗಳಾದ ಹರೀಶ್, ಅಶ್ವಿತ್ ಪೂಜಾರಿ, ಶ್ರೀಧರ, ಶ್ರೀನಿವಾಸ, ನರೇಶ್ ನಾಣಯ್ಯ, ಹೇಮಂತ್, ಗಣೇಶ್, ಶರವಣ, ದೀಪು ಚಂದ್ರ ಪೂಜಾರಿ ಸೇರಿದಂತೆ ಹಲವರು ಸಹಕರಿಸಿದರು.
ಸಂಘಟನೆಯ ಗೌರವ ಸಲಹೆಗಾರ ಪಿ.ಎ. ರವಿಚಂದ್ರ ಸ್ವಾಗತಿಸಿದರು. ಜಿಲ್ಲಾ ಕಾರ್ಯಾಧ್ಯಕ್ಷ ರವೀಶ್ ಕಾರ್ಯಕ್ರಮ ನಿರೂಪಿಸಿದರು.
























