ಮಡಿಕೇರಿ, NEWS DESK ನ. 9: ಪುಟ್ಟ ಕೊಡಗಿನ ಪರಿಸರದ ಸಾಮರ್ಥ್ಯವನ್ನು ಮೀರಿ ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಿದ್ದು, ಇದರಿಂದ ಇಲ್ಲಿನ ಸೂಕ್ಷ್ಮ ಪರಿಸರ ವ್ಯವಸ್ಥೆಯ ಮೇಲೆ ತೀವ್ರ ಒತ್ತಡ ಉಂಟಾಗುತ್ತಿದೆ. ಪ್ರವಾಸೋದ್ಯಮವನ್ನು ಮತ್ತಷ್ಟು ವಿಸ್ತರಿಸುವ ಬದಲು ನಿಯಂತ್ರಿತ ಹಾಗೂ ಜವಾಬ್ದಾರಿಯುತ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಎನ್ವಿರಾನ್ಮೆಂಟಲ್ ಅಂಡ್ ಹೆಲ್ತ್ ಫೌಂಡೇಷನ್ ಇಂಡಿಯಾದ ಗೌರವ ಕಾರ್ಯದರ್ಶಿ, ನಿವೃತ್ತ ಕರ್ನಲ್ ಸಿ.ಪಿ. ಮುತ್ತಣ್ಣ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆ ಮಿತಿಮೀರಿದ ಪ್ರವಾಸೋದ್ಯಮದಿಂದಾಗಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಜಿಲ್ಲೆಯ ಸೂಕ್ಷ್ಮ ಪರಿಸರ ವ್ಯವಸ್ಥೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯ ದೃಷ್ಟಿಯಿಂದ ಪ್ರವಾಸಿಗರ ಸಂಖ್ಯೆಯನ್ನು ನಿಯಂತ್ರಿಸುವುದು ಅನಿವಾರ್ಯವಾಗಿದೆ ಎಂದರು.
ಕೊಡಗು ಜಿಲ್ಲೆಯಲ್ಲಿ ಸುಮಾರು ಆರು ಲಕ್ಷ ಜನಸಂಖ್ಯೆಯಿದ್ದು, ವಾರ್ಷಿಕವಾಗಿ 40 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಪ್ರವಾಸೋದ್ಯಮದಿಂದ ಸ್ಥಳೀಯ ಆರ್ಥಿಕತೆಗೆ ಕೆಲವು ಪ್ರಯೋಜನಗಳಿದ್ದರೂ, ಮಿತಿಮೀರಿದ ಪ್ರವಾಸೋದ್ಯಮದಿಂದ ಸಂಚಾರ ದಟ್ಟಣೆ, ಕಸದ ಸಮಸ್ಯೆ, ನೀರು ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಒತ್ತಡ ಹಾಗೂ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದಕ್ಷಿಣ ಭಾರತದ ಕೋಟ್ಯಂತರ ಜನರ ಜೀವನಾಧಾರವಾಗಿರುವ ಕಾವೇರಿ ನದಿಯ ಪ್ರಮುಖ ಜಲಾನಯನ ಪ್ರದೇಶ ಕೊಡಗಾಗಿದೆ. ಇಂತಹ ಮಹತ್ವದ ಪರಿಸರ ಸೂಕ್ಷ್ಮ ಪ್ರದೇಶವನ್ನು ಪ್ರವಾಸೋದ್ಯಮದ ಹೆಸರಿನಲ್ಲಿ ಹಾಳುಗೆಡವಲು ಅವಕಾಶ ನೀಡಬಾರದು ಎಂದು ಹೇಳಿದರು.
ಹೊಸ ಹೋಟೆಲ್, ರೆಸಾರ್ಟ್ಗಳ ನಿರ್ಮಾಣಕ್ಕೆ ನಿರ್ಬಂಧ
ಜಿಲ್ಲೆಯಲ್ಲಿ ಹೊಸ ಹೋಟೆಲ್ಗಳು ಮತ್ತು ರೆಸಾರ್ಟ್ಗಳ ನಿರ್ಮಾಣಕ್ಕೆ ಪರವಾನಗಿ ನೀಡುವುದನ್ನು ಸ್ಥಗಿತಗೊಳಿಸಬೇಕು. ಈಗಾಗಲೇ ಹೋಂಸ್ಟೇಗಳ ಸಂಖ್ಯೆ ಮಿತಿಮೀರಿದ್ದು, ಅವುಗಳ ಮೇಲೆಯೂ ಸೂಕ್ತ ನಿಯಂತ್ರಣ ಹೇರಬೇಕಾಗಿದೆ ಎಂದು ಒತ್ತಾಯಿಸಿದರು.
ಆನ್ಲೈನ್ ಪಾಸ್ ವ್ಯವಸ್ಥೆ ಜಾರಿಗೆ ಸಲಹೆ
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ರಾಜ್ಯದ ಎಲ್ಲ ಜಿಲ್ಲೆಗಳ ಪ್ರವಾಸಿ ತಾಣಗಳ ವಿವರಗಳನ್ನು ಒಳಗೊಂಡ ಅಧಿಕೃತ ವೆಬ್ಸೈಟ್ ರೂಪಿಸಬೇಕು. ಪ್ರವಾಸಿಗರು ತಾವು ಭೇಟಿ ನೀಡಲು ಉದ್ದೇಶಿಸಿರುವ ಜಿಲ್ಲೆ ಹಾಗೂ ಪ್ರವಾಸಿ ತಾಣವನ್ನು ಆಯ್ಕೆ ಮಾಡಿಕೊಂಡು ಆನ್ಲೈನ್ ಮೂಲಕ ಪ್ರವೇಶ ಪಾಸ್ ಪಡೆಯುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಸಲಹೆ ನೀಡಿದರು.
ಕೊಡಗಿನಂತಹ ಪ್ರವಾಸಿಗರ ಒತ್ತಡ ಹೆಚ್ಚಿರುವ ಜಿಲ್ಲೆಯಲ್ಲಿ ಪ್ರತಿ ಪ್ರವಾಸಿ ತಾಣಕ್ಕೆ ದಿನವೊಂದಕ್ಕೆ ಗರಿಷ್ಠ 150 ಪಾಸ್ಗಳನ್ನು ಮಾತ್ರ ವಿತರಿಸಬೇಕು. ಪ್ರತಿ ಪ್ರವಾಸಿಗರಿಗೆ 500 ರೂ. ಪ್ರವೇಶ ಶುಲ್ಕ ವಿಧಿಸಬೇಕು. ಇದರೊಂದಿಗೆ ನಾಲ್ಕು ಚಕ್ರದ ವಾಹನಗಳಿಗೆ ಹೆಚ್ಚುವರಿಯಾಗಿ 500 ರೂ. ಹಾಗೂ ವ್ಯಾನ್ ಮತ್ತು ಬಸ್ಗಳಿಗೆ 3,000 ರೂ. ಶುಲ್ಕ ನಿಗದಿಪಡಿಸಬೇಕು ಎಂದು ತಿಳಿಸಿದರು.
ಈ ಮೂಲಕ ಸಂಗ್ರಹವಾಗುವ ಆದಾಯದ ಒಂದು ಭಾಗವನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಅಥವಾ ಕೆಎಸ್ಟಿಡಿಸಿಗೆ ನೀಡಬೇಕು. ಉಳಿದ ಮೊತ್ತವನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿ, ನಗರಸಭೆ ಅಥವಾ ಅರಣ್ಯ ಇಲಾಖೆಯ ಮೂಲಕ ಸ್ಥಳೀಯ ಪ್ರವಾಸಿ ತಾಣಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಬಳಸಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದರು.
ಸ್ವಚ್ಛತೆ ಮತ್ತು ನಿರ್ವಹಣೆಯ ಉದ್ದೇಶದಿಂದ ಪ್ರತಿ ಪ್ರವಾಸಿ ತಾಣವನ್ನು 15 ದಿನಗಳಿಗೊಮ್ಮೆ ಒಂದು ದಿನ ಮುಚ್ಚುವ ವ್ಯವಸ್ಥೆ ಜಾರಿಗೆ ತರಬೇಕು. ಆದರೆ, ಕೊಡಗಿನ ಸ್ಥಳೀಯರು ಧಾರ್ಮಿಕ ವಿಧಿವಿಧಾನಗಳು ಹಾಗೂ ಸಾಂಪ್ರದಾಯಿಕ ಆಚರಣೆಗಳಿಗಾಗಿ ಭಾಗಮಂಡಲ, ತಲಕಾವೇರಿ ಸೇರಿದಂತೆ ಪವಿತ್ರ ಸ್ಥಳಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಯಾವುದೇ ತೊಂದರೆಯಾಗದಂತೆ ವಿಶೇಷ ಪ್ರವೇಶ ಅನುಮತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಮೂಲಸೌಕರ್ಯವಿಲ್ಲದ ಹೋಂಸ್ಟೇ, ರೆಸಾರ್ಟ್ಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಸಂಸ್ಥೆಯ ಸದಸ್ಯ ಗೋಪಿನಾಥ್ ತಿಮ್ಮಯ್ಯ ಮಾತನಾಡಿ, ಮಿತಿಮೀರಿದ ಪ್ರವಾಸೋದ್ಯಮದಿಂದಾಗಿ ಸ್ಥಳೀಯರು ನೆಮ್ಮದಿ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ರೆಸಾರ್ಟ್ಗಳು ಮತ್ತು ಹೋಂಸ್ಟೇಗಳು ಅಣಬೆಗಳಂತೆ ತಲೆ ಎತ್ತುತ್ತಿವೆ. ಬಹುತೇಕ ಹೋಂಸ್ಟೇ ಹಾಗೂ ರೆಸಾರ್ಟ್ಗಳಲ್ಲಿ ಪ್ರವಾಸಿಗರಿಗೆ ಅಗತ್ಯವಾದ ಮೂಲಸೌಕರ್ಯಗಳಿಲ್ಲ. ಹಲವು ಕಡೆಗಳಲ್ಲಿ ಪ್ರವಾಸಿಗರಿಂದ ದುಬಾರಿ ದರ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಅಲ್ಲದೆ, ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಬಾಡಿಗೆ ಬೈಕ್ಗಳಲ್ಲಿ ಅತಿವೇಗವಾಗಿ ಸಂಚರಿಸುತ್ತಿರುವುದು ಕಂಡುಬರುತ್ತಿದೆ. ಇಂತಹ ಪ್ರವೃತ್ತಿಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸದಸ್ಯರಾದ ಶಿವಶಂಕರ್, ಶ್ಯಾಂ ಬೋಪಯ್ಯ ಹಾಗೂ ಫ್ರಾಂಕ್ಲಿನ್ ಉಪಸ್ಥಿತರಿದ್ದರು.
























