ತಿತಿಮತಿ, NEWS DESK ನ.10: ನೊಖ್ಯ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ನಿನ್ನೆ ರಾತ್ರಿ ಮರಿಯೊಂದಿಗೆ ಬಂದ ಕಾಡಾನೆಗಳ ಹಿಂಡು ಚೆಪ್ಪುಡೀರ ಕಾರ್ಯಪ್ಪ ಅವರ ಗದ್ದೆಗೆ ನುಗ್ಗಿ ಕೊಯ್ಲಿಗೆ ಸಿದ್ಧವಾಗಿದ್ದ ಭತ್ತದ ಬೆಳೆಯನ್ನು ತುಳಿದು ತಿಂದು ಸಂಪೂರ್ಣವಾಗಿ ನಾಶಪಡಿಸಿವೆ.
ಗದ್ದೆಗೆ ಸೋಲಾರ್ ತಂತಿ ಬೇಲಿ ಅಳವಡಿಸಿದ್ದರೂ ಅದನ್ನು ಲೆಕ್ಕಿಸದ ಕಾಡಾನೆಗಳು ಬೇಲಿಯನ್ನು ದಾಟಿ ಒಳನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿವೆ. ಇನ್ನೇನು ಕೆಲವೇ ದಿನಗಳಲ್ಲಿ ಹುತ್ತರಿ ಹಬ್ಬ ಸಮೀಪಿಸುತ್ತಿದ್ದು, ಹಬ್ಬದ ಸಂಭ್ರಮಕ್ಕೆ ಸಿದ್ಧತೆ ನಡೆಸುತ್ತಿದ್ದ ರೈತರಿಗೆ ಕಾಡಾನೆಗಳ ದಾಳಿಯಿಂದ ಭಾರೀ ಆಘಾತ ಎದುರಾಗಿದೆ. ತಿಂಗಳುಗಟ್ಟಲೆ ಶ್ರಮಪಟ್ಟು ಬೆಳೆದಿದ್ದ ಭತ್ತದ ಬೆಳೆ ಕೈಗೆ ಬರುವ ಹಂತದಲ್ಲಿ ನಾಶವಾಗಿರುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಭಾಗದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿ ಹೆಚ್ಚುತ್ತಿದ್ದು, ಈ ಕುರಿತು ಹಲವು ಬಾರಿ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರೂ ಇದುವರೆಗೆ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಪ್ರತಿವರ್ಷವೂ ಕಾಡಾನೆಗಳಿಂದ ಕೃಷಿ ಬೆಳೆಗಳು ನಾಶವಾಗುತ್ತಿದ್ದು, ರೈತರು ಅಪಾರ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.
ಅರಣ್ಯ ಇಲಾಖೆ ಹಾಗೂ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಕಾಡಾನೆಗಳು ತೋಟ ಹಾಗೂ ಗದ್ದೆಗಳಿಗೆ ಪ್ರವೇಶಿಸದಂತೆ ವೈಜ್ಞಾನಿಕ ಮತ್ತು ಶಾಶ್ವತ ತಡೆ ಕ್ರಮಗಳನ್ನು ಕೈಗೊಳ್ಳಬೇಕು. ಕಾಡಾನೆಗಳ ದಾಳಿಯಿಂದ ಸಂಪೂರ್ಣ ನಾಶವಾಗಿರುವ ಭತ್ತದ ಬೆಳೆಗೆ ಸೂಕ್ತ ಸಮೀಕ್ಷೆ ನಡೆಸಿ ರೈತರಿಗೆ ತಕ್ಷಣವೇ ಪರಿಹಾರ ನೀಡಬೇಕು ಎಂದು ನೊಖ್ಯ ಗ್ರಾಮದ ರೈತರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.
























