ವಿರಾಜಪೇಟೆ, NEWS DESK ನ.11: ಪಟ್ಟಣದಲ್ಲಿ ದಿನೇದಿನೇ ಹೆಚ್ಚುತ್ತಿರುವ ವಾಹನ ದಟ್ಟಣೆ, ಆಡಳಿತಾತ್ಮಕ ಲೋಪದೋಷಗಳು, ಭ್ರಷ್ಟಾಚಾರ, ಮಾಲಿನ್ಯ ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ನಿರಂತರ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಆಗ್ರಹಿಸಿ ನಾಗರಿಕ ಸಮಿತಿ ಹಾಗೂ ಸಾಮಾಜಿಕ ಕಾರ್ಯಕರ್ತರ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು. ಈ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಕಾರ್ಯವೈಖರಿ ವಿರುದ್ಧ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡ ಮಾಲೇಟಿರ ಎಸ್. ಕಾಳಯ್ಯ ಅವರು, ವಿರಾಜಪೇಟೆ ಪಟ್ಟಣದ ವಾಹನ ದಟ್ಟಣೆ ಸಮಸ್ಯೆ ಪರಿಹಾರಕ್ಕೆ ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿರುವ ಮನೆ ಮತ್ತು ಕಟ್ಟಡ ಮಾಲೀಕರಿಗೆ ಕಾನೂನುಬದ್ಧ ಪರಿಹಾರ ನೀಡಿ ಜಾಗ ಸ್ವಾಧೀನಪಡಿಸಿಕೊಂಡು ರಸ್ತೆ ಅಗಲೀಕರಣ ಕಾಮಗಾರಿಯನ್ನು ತಕ್ಷಣ ಆರಂಭಿಸಬೇಕು ಎಂದು ಒತ್ತಾಯಿಸಿದರು.
ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಿ, ಚರಂಡಿಗಳ ಸಮರ್ಪಕ ನಿರ್ವಹಣೆ ಮಾಡಬೇಕು. ಅಡ್ಡಾದಿಡ್ಡಿ ವಾಹನ ಸಂಚಾರ ಹಾಗೂ ಎಲ್ಲೆಂದರಲ್ಲಿ ವಾಹನ ನಿಲುಗಡೆಯನ್ನು ನಿಯಂತ್ರಿಸಲು ಪೊಲೀಸರು ಕ್ರಮ ಕೈಗೊಳ್ಳಬೇಕು. ದೀರ್ಘಾವಧಿ ಪಾರ್ಕಿಂಗ್ ಮಾಡುವ ವಾಹನಗಳಿಗೆ ಗಂಟೆಯ ಆಧಾರದಲ್ಲಿ ಶುಲ್ಕ ಅಥವಾ ದಂಡ ವಿಧಿಸಬೇಕು ಎಂದು ಆಗ್ರಹಿಸಿದರು.
ಹೊಸದಾಗಿ ನಿರ್ಮಾಣವಾಗುವ ಕಟ್ಟಡಗಳಲ್ಲಿ ವಾಹನ ಪಾರ್ಕಿಂಗ್‌ಗೆ ಸೆಲ್ಲಾರ್ ಜಾಗ ಮೀಸಲಿಡುವ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ನಿಯಮ ಉಲ್ಲಂಘಿಸಿ ಪಾರ್ಕಿಂಗ್ ಸ್ಥಳದಲ್ಲಿ ಅಂಗಡಿಗಳನ್ನು ನಿರ್ಮಿಸಿ ಬಾಡಿಗೆಗೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಟ್ಟಡಗಳಿಗೆ ಪುರಸಭೆ ಅನುಮತಿ ನೀಡಬಾರದು ಎಂದರು.
ಮುಖಂಡ ಪಿ.ಕೆ. ಅಬ್ದುಲ್ ರೆಹಮಾನ್ ಮಾತನಾಡಿ, ಕೇರಳದಿಂದ ಕೊಡಗಿಗೆ ಕೆಂಪು ಕಲ್ಲು ಸಾಗಿಸುವ ಸಂದರ್ಭದಲ್ಲಿ ಇರುವ ನಿಯಮ ಹಾಗೂ ನಿರ್ಬಂಧಗಳನ್ನು ದುರುಪಯೋಗಪಡಿಸಿಕೊಂಡು ರಾಜಕೀಯ ಪ್ರಭಾವಿಗಳು ಮತ್ತು ಅಧಿಕಾರಿಗಳ ಮೂಲಕ ವಾಹನ ಸವಾರರಿಂದ ಅಕ್ರಮವಾಗಿ ಹಫ್ತಾ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಇಂತಹ ವಸೂಲಿಯನ್ನು ತಕ್ಷಣ ನಿಲ್ಲಿಸಿ, ಸರ್ಕಾರವೇ ಅಧಿಕೃತ ಶುಲ್ಕ ನಿಗದಿಪಡಿಸಿ ರಶೀದಿ ನೀಡಿ ಕೆಂಪು ಕಲ್ಲು ಸಾಗಣೆಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಗ್ಯಾಸ್ ವಿತರಣೆಯಲ್ಲಿನ ಸಮಸ್ಯೆಗಳ ಕುರಿತು ಮಾತನಾಡಿದ ಎಚ್.ಬಿ. ಸತೀಶ್ ಕುಮಾರ್ ಅವರು, ವಿರಾಜಪೇಟೆಯ ಗ್ಯಾಸ್ ಏಜೆನ್ಸಿಯು ಗ್ರಾಹಕರಿಗೆ ಸಮರ್ಪಕ ಸೇವೆ ನೀಡುತ್ತಿಲ್ಲ ಎಂದು ಆರೋಪಿಸಿದರು. ಗ್ಯಾಸ್ ಬುಕ್ಕಿಂಗ್ ಮಾಡಲು ಪ್ರಯತ್ನಿಸಿದಾಗ ತಾಂತ್ರಿಕ ಸಮಸ್ಯೆಗಳ ನೆಪ ಹೇಳಿ ಬುಕ್ಕಿಂಗ್ ಮುಂದೂಡಲಾಗುತ್ತಿದೆ. ತಿಂಗಳ ಕೊನೆಯ ದಿನಗಳಲ್ಲಿ ಬುಕ್ ಮಾಡಿದ ಆರ್ಡರ್‌ಗಳನ್ನು ‘ಸಿಸ್ಟಮ್ ರಿಫ್ರೆಶ್’ ನೆಪದಲ್ಲಿ ರದ್ದುಗೊಳಿಸಲಾಗುತ್ತಿದೆ. ಇದರಿಂದ ಗ್ರಾಹಕರು ಆ ತಿಂಗಳ ಸಿಲಿಂಡರ್ ಪಡೆಯುವ ಅವಕಾಶ ಕಳೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ಗ್ರಾಹಕರಿಗೆ ವಿತರಿಸದೆ ಉಳಿಸುವ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ದುಬಾರಿ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದರು. ಏಜೆನ್ಸಿಯು ಗ್ರಾಹಕರಿಗೆ ಸರಿಯಾದ ಸ್ಪಂದನೆ ನೀಡಬೇಕು ಹಾಗೂ ಬಾಕಿ ಇರುವ ಸಿಲಿಂಡರ್‌ಗಳನ್ನು ತಕ್ಷಣ ವಿತರಿಸಬೇಕು. ಇಲ್ಲದಿದ್ದರೆ ಏಜೆನ್ಸಿ ವಿರುದ್ಧ ನಿರಂತರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸ್ಥಿರ ಆಡಳಿತದ ಕುರಿತು ಮಾತನಾಡಿದ ಎನ್.ಕೆ. ಅಬ್ದುಲ್ ರೆಹಮಾನ್ ಅವರು, ವಿರಾಜಪೇಟೆ ಪುರಸಭೆಗೆ ಬೇರೆ ಇಲಾಖೆಗಳ ಅಧಿಕಾರಿಗಳನ್ನು ತಾತ್ಕಾಲಿಕವಾಗಿ ಮುಖ್ಯಾಧಿಕಾರಿಗಳನ್ನಾಗಿ ನೇಮಿಸುವುದರಿಂದ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ತೊಂದರೆಯಾಗುತ್ತಿದೆ ಎಂದು ಹೇಳಿದರು. ಪುರಸಭೆಗೆ ತಕ್ಷಣವೇ ಶಾಶ್ವತ ಮುಖ್ಯಾಧಿಕಾರಿಯನ್ನು ನೇಮಿಸಬೇಕು. ಹಲವು ವರ್ಷಗಳಿಂದ ಒಂದೇ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಪಟ್ಟಣದ ಮಾಲಿನ್ಯ ಸಮಸ್ಯೆ ಕುರಿತು ಮಾತನಾಡಿದ ಎಂ.ಕೆ. ಗಣೇಶ್ ಅವರು, ವಿರಾಜಪೇಟೆ ಪುರಸಭೆಯಲ್ಲಿ ಹಣವಿಲ್ಲದೆ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂದು ಆರೋಪಿಸಿದರು. ಪಟ್ಟಣದ ಸಿಮೆಂಟ್ ಅಂಗಡಿಯೊಂದರಿಂದ ನಿರಂತರವಾಗಿ ಹೊರಬರುತ್ತಿರುವ ಸಿಮೆಂಟ್ ಧೂಳಿನಿಂದ ಅಕ್ಕಪಕ್ಕದ ನಿವಾಸಿಗಳು, ಶಾಲಾ ಮಕ್ಕಳು, ವೃದ್ಧರು ಹಾಗೂ ಸಮೀಪದ ಪ್ರಯೋಗಾಲಯಕ್ಕೆ ಬರುವ ರೋಗಿಗಳು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಿಮೆಂಟ್ ಧೂಳಿನ ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಕೊಳ್ಳುವುದರ ಜೊತೆಗೆ ಪಟ್ಟಣದ ಫುಟ್‌ಪಾತ್ ಅತಿಕ್ರಮಣಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ನಾಗರಿಕ ಸಮಿತಿಯ ಸಂಚಾಲಕ ಡಾ. ಐ.ಆರ್. ದುರ್ಗಾಪ್ರಸಾದ್ ಮಾತನಾಡಿ, ವಿರಾಜಪೇಟೆ ಪಟ್ಟಣದ ನಾಗರಿಕರು ಎದುರಿಸುತ್ತಿರುವ ಎಲ್ಲಾ ಜ್ವಲಂತ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಗಮನಹರಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಪಟ್ಟಣದ ನಾಗರಿಕರು ಹಾಗೂ ಸಾರ್ವಜನಿಕರನ್ನು ಒಗ್ಗೂಡಿಸಿ ನಿರಂತರ ಹೋರಾಟ ಮತ್ತು ಬೃಹತ್ ಪ್ರತಿಭಟನೆ ಸಂಘಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.























