ಮಡಿಕೇರಿ, NEWS DESK ನ. 11: ನಗರದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ನ. 8ರಂದು ಸಂಜೆ 6 ಗಂಟೆಗೆ ದಸರಾ ಉತ್ಸವದ ಮಂಟಪಗಳಲ್ಲಿ ಅಳವಡಿಸಲಾಗಿದ್ದ ಸರ್ವ ದೇವತೆಗಳ ವಿಗ್ರಹಗಳಿಗೆ ಶ್ರದ್ಧಾಭಕ್ತಿಯಿಂದ ಶಾಂತಿ ಪೂಜೆ ನೆರವೇರಿಸಲಾಯಿತು.
ಪ್ರತಿವರ್ಷ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ ಮಂಟಪಗಳಲ್ಲಿ ಕಥಾಹಂದರಕ್ಕೆ ಅನುಗುಣವಾಗಿ ಅಳವಡಿಸಲಾಗುವ ಸರ್ವ ದೇವತೆಗಳ ವಿಗ್ರಹಗಳನ್ನು ಸಂಗ್ರಹಿಸಿಡುವ ದೇವಾಲಯದ ಗೋದಾಮಿನಲ್ಲಿ ಈ ಶಾಂತಿ ಪೂಜೆಯನ್ನು ಆಯೋಜಿಸಲಾಗಿತ್ತು. ಪೂಜಾ ಕೈಂಕರ್ಯಗಳನ್ನು ಅರ್ಚಕರಾದ ವಿಠಲ ಭಟ್ ಅವರು ಅರ್ಥಪೂರ್ಣವಾಗಿ ನೆರವೇರಿಸಿಕೊಟ್ಟರು.
ಈ ಸಂದರ್ಭದಲ್ಲಿ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ಟ್ರಸ್ಟ್ನ ಟ್ರಸ್ಟಿ ಟಿ.ಪಿ. ರಮೇಶ್, ದೇವಾಲಯದ ಮುಖ್ಯ ಅರ್ಚಕ ಪಿ.ಪಿ. ಚಾಮಿ, ಮಾಜಿ ಅಧ್ಯಕ್ಷ ನವೀನ್ ಪೂಜಾರಿ, ಹಿರಿಯರಾದ ಕೆ. ರವಿ, ಎ.ಆರ್. ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



























