ಮಡಿಕೇರಿ, NEWS DESK ನ.11: ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಹಾಗೂ ವಿವಿಧ ವಿದ್ಯಾರ್ಥಿವೇತನ ಯೋಜನೆಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಸಿಗ್ಮ ಪೀಡಿಯಾ (Sigma Pedia) ಮತ್ತು ಉಮ್ಮತ್ ಒನ್ ಕೊಡಗು ಚಾರಿಟೇಬಲ್ ಟ್ರಸ್ಟ್ನ ಜಂಟಿ ಆಶ್ರಯದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ವಿದ್ಯಾರ್ಥಿವೇತನ ಜಾಗೃತಿ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರದಲ್ಲಿ ಸಿಗ್ಮ ಪೀಡಿಯಾ ಸಂಸ್ಥೆಯ ಸ್ಥಾಪಕ ಹಾಗೂ ಸಿಇಒ ಅಮೀನ್ ಇ. ಮುದಸ್ಸರ್ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ವಿವಿಧ ವಿದ್ಯಾರ್ಥಿವೇತನ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಆರ್ಥಿಕ ಪರಿಸ್ಥಿತಿ ಯಾವುದೇ ವಿದ್ಯಾರ್ಥಿಯ ಉನ್ನತ ಶಿಕ್ಷಣಕ್ಕೆ ಅಡ್ಡಿಯಾಗಬಾರದು. ಪ್ರತಿಭಾವಂತ ಹಾಗೂ ಆಸಕ್ತ ವಿದ್ಯಾರ್ಥಿಗಳಿಗೆ ಸರ್ಕಾರ ಮತ್ತು ವಿವಿಧ ಖಾಸಗಿ ಸಂಸ್ಥೆಗಳಿಂದ ಹಲವಾರು ವಿದ್ಯಾರ್ಥಿವೇತನಗಳು ಲಭ್ಯವಿವೆ. ವಿದ್ಯಾರ್ಥಿಗಳು ಇಂತಹ ಅವಕಾಶಗಳ ಕುರಿತು ಸರಿಯಾದ ಮಾಹಿತಿ ಪಡೆದುಕೊಂಡು, ಅರ್ಹತೆಗೆ ಅನುಗುಣವಾಗಿ ಅರ್ಜಿ ಸಲ್ಲಿಸಬೇಕು. ವಿದ್ಯಾರ್ಥಿವೇತನದ ಮೂಲಕ ಒಂದು ಲಕ್ಷ ರೂ.ವರೆಗೂ ಆರ್ಥಿಕ ನೆರವು ಪಡೆಯಲು ಅವಕಾಶವಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
2001ರಿಂದ ಈವರೆಗೆ ಐದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ನೀಡಿರುವ ತಮ್ಮ ಅನುಭವವನ್ನು ಹಂಚಿಕೊಂಡ ಅವರು, ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ವಿಧಾನ, ಅಗತ್ಯ ದಾಖಲೆಗಳು, ಅರ್ಹತಾ ಮಾನದಂಡಗಳು ಹಾಗೂ ವಿವಿಧ ಯೋಜನೆಗಳ ಕುರಿತು ವಿವರಿಸಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ. ಲೋಕೇಶ್ ಎ.ಜೆ. ಮಾತನಾಡಿ, ಉನ್ನತ ಶಿಕ್ಷಣವು ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯ ರೂಪಿಸುವ ಪ್ರಮುಖ ಹಂತವಾಗಿದೆ. ಆರ್ಥಿಕ ಸಮಸ್ಯೆಯಿಂದಾಗಿ ಯಾವುದೇ ವಿದ್ಯಾರ್ಥಿ ಶಿಕ್ಷಣದಿಂದ ವಂಚಿತರಾಗಬಾರದು. ಇಂತಹ ಜಾಗೃತಿ ಕಾರ್ಯಾಗಾರಗಳು ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳನ್ನು ಪರಿಚಯಿಸುವುದರ ಜೊತೆಗೆ ಉನ್ನತ ಶಿಕ್ಷಣದ ಕನಸು ನನಸಾಗಿಸಲು ಸಹಕಾರಿಯಾಗುತ್ತವೆ. ವಿದ್ಯಾರ್ಥಿಗಳು ಶ್ರಮ, ಶಿಸ್ತು ಮತ್ತು ನಿರಂತರ ಅಧ್ಯಯನದ ಮೂಲಕ ತಮ್ಮ ಗುರಿ ಸಾಧಿಸಬೇಕು ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಉಮ್ಮತ್ ಒನ್ ಕೊಡಗು ಚಾರಿಟೇಬಲ್ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಖಾಲಿದ್ ಹಾಕತ್ತೂರು, ಕಳೆದ ಐದು ವರ್ಷಗಳಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಸಂಸ್ಥೆಯು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ ಎಂದರು.
ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಮೂಲಕ ದೊರೆಯುವ ವಿದ್ಯಾರ್ಥಿವೇತನಗಳನ್ನು ಪಡೆಯುವ ಕುರಿತು ವಿದ್ಯಾರ್ಥಿಗಳಲ್ಲಿರುವ ಮಾಹಿತಿಯ ಕೊರತೆಯನ್ನು ಈ ಕಾರ್ಯಾಗಾರದ ಮೂಲಕ ನೀಗಿಸಲಾಗಿದೆ. ಮುಂದಿನ ದಿನಗಳಲ್ಲಿಯೂ ವಿದ್ಯಾರ್ಥಿಗಳಿಗಾಗಿ ಇಂತಹ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸಿಗ್ಮ ಪೀಡಿಯಾ ಮತ್ತು ಉಮ್ಮತ್ ಒನ್ ಕೊಡಗು ಚಾರಿಟೇಬಲ್ ಟ್ರಸ್ಟ್ನ ಈ ಜಂಟಿ ಪ್ರಯತ್ನಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಸಂಸ್ಥೆಯಿಂದ ತಮಗೆ ದೊರೆತ ಆರ್ಥಿಕ ಪ್ರೋತ್ಸಾಹದ ಕುರಿತು ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ರಿಜಿಸ್ಟ್ರಾರ್ ಡಾ. ರವಿ ಕಿರಣ್, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಮಂಜುಳ ಎ.ಕೆ., ಉಮ್ಮತ್ ಒನ್ ಕೊಡಗು ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಎಂ.ಬಿ. ಬಷೀರ್, ಟ್ರಸ್ಟಿಗಳಾದ ಹನೀಫ್, ಸಲೀಂ ಮತ್ತಿತರರು ಉಪಸ್ಥಿತರಿದ್ದರು.























