ಮಡಿಕೇರಿ, NEWS DESK ನ.11: ಕನ್ನಡ ನಾಡಿನ ವೀರವನಿತೆ ಒನಕೆ ಓಬವ್ವ ಅವರ ಶೌರ್ಯ, ಸಾಹಸ ಮತ್ತು ದೇಶಪ್ರೇಮವನ್ನು ಸ್ಮರಿಸುವ ನಿಟ್ಟಿನಲ್ಲಿ ನಗರದ ಗಾಂಧಿ ಭವನದಲ್ಲಿ ಬುಧವಾರ ಒನಕೆ ಓಬವ್ವ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ಲಾಸಂ ಶಾಲೆಯ ವಿದ್ಯಾರ್ಥಿಗಳು ನಾಗರಹಾವು ಚಲನಚಿತ್ರದ ಜನಪ್ರಿಯ ಗೀತೆಯಾದ ‘ಕನ್ನಡ ನಾಡಿನ ವೀರರಮಣಿಯ, ಗಂಡು ಭೂಮಿಯ ವೀರನಾರಿಯ’ ಹಾಡಿಗೆ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಹಿರಿಯ ಉಪನ್ಯಾಸಕಿ ಬಿ.ಬಿ. ಸವಿತ ಅವರು, 18ನೇ ಶತಮಾನದಲ್ಲಿ ಒನಕೆ ಓಬವ್ವ ಅವರು ರಾಜ್ಯದ ಇತಿಹಾಸದಲ್ಲಿ ಅಸಾಧಾರಣ ಶೌರ್ಯ ಮೆರೆದ ವೀರವನಿತೆಯಾಗಿದ್ದಾರೆ ಎಂದು ಹೇಳಿದರು.
ಈಗಿನ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆಯಲ್ಲಿ ಜನಿಸಿದ ಒನಕೆ ಓಬವ್ವ ಅವರು ಚಿತ್ರದುರ್ಗದ ಏಳುಸುತ್ತಿನ ಕೋಟೆಯ ಕಾವಲುಗಾರರಾಗಿದ್ದ ಮುದ್ದ ಹನುಮ ಅವರ ಪತ್ನಿಯಾಗಿದ್ದರು. ಒಂದು ದಿನ ನೀರು ತರಲು ತೆರಳಿದ್ದ ಸಂದರ್ಭದಲ್ಲಿ ಕೋಟೆಯ ಕಿಂಡಿಯ ಮೂಲಕ ಶತ್ರುಗಳು ಒಳನುಗ್ಗುತ್ತಿರುವುದನ್ನು ಗಮನಿಸಿದ ಅವರು, ತಕ್ಷಣ ಒನಕೆಯನ್ನು ಆಯುಧವನ್ನಾಗಿ ಮಾಡಿಕೊಂಡು ಒಬ್ಬೊಬ್ಬರಾಗಿ ಬರುತ್ತಿದ್ದ ಶತ್ರುಗಳನ್ನು ಸದೆಬಡಿದು ಕೋಟೆಯನ್ನು ರಕ್ಷಿಸಿದರು ಎಂದು ವಿವರಿಸಿದರು.
ಸಾಮಾನ್ಯ ಮಹಿಳೆಯಾಗಿದ್ದ ಒನಕೆ ಓಬವ್ವ ಅವರು ಸಮಯಪ್ರಜ್ಞೆ, ಧೈರ್ಯ ಮತ್ತು ಸಾಹಸದಿಂದ ಶತ್ರುಗಳ ವಿರುದ್ಧ ಹೋರಾಡಿ ಜಯಗಳಿಸಿರುವುದು ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿದೆ. ಅವರ ಸಾಹಸವನ್ನು ಸ್ಮರಿಸುವ ಉದ್ದೇಶದಿಂದ ಚಿತ್ರದುರ್ಗ ಸೇರಿದಂತೆ ರಾಜ್ಯದ ವಿವಿಧೆಡೆ ಪ್ರತಿಮೆಗಳನ್ನು ಸ್ಥಾಪಿಸಿ ಗೌರವಿಸಲಾಗುತ್ತಿದೆ ಎಂದರು.
ಬ್ಲಾಸಂ ಶಾಲೆಯ ಪ್ರಾಂಶುಪಾಲರಾದ ಅನಸೂಯ ಅವರು ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ, ಅಬ್ಬಕ್ಕ ರಾಣಿ ಹಾಗೂ ಕೆಳದಿ ಚೆನ್ನಮ್ಮ ಅವರಂತೆ ಒನಕೆ ಓಬವ್ವ ಅವರು ಕೂಡ ಶತ್ರುಗಳ ವಿರುದ್ಧ ವೀರಾವೇಶದಿಂದ ಹೋರಾಡಿದ ಧೀರ ಮಹಿಳೆಯಾಗಿದ್ದಾರೆ. ಐತಿಹಾಸಿಕ ಹಿನ್ನೆಲೆ ಹೊಂದಿರುವ ಚಿತ್ರದುರ್ಗದ ಕೋಟೆಯ ರಕ್ಷಣೆಗಾಗಿ ಅವರು ನಡೆಸಿದ ಹೋರಾಟದ ಜೀವನವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಬ್ಲಾಸಂ ಶಾಲೆಯ ವಿದ್ಯಾರ್ಥಿನಿಯರು ವಂದೇ ಮಾತರಂ ಗೀತೆ ಹಾಗೂ ನಾಡಗೀತೆಯನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಅಜೀಜ್, ಶಿಕ್ಷಕರಾದ ಸೆಲ್ವಿ, ಪ್ರಿಯಾಂಕ, ವನಿತ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಸ್ವಾಗತಿಸಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.























