ಮಡಿಕೇರಿ, NEWS DESK ನ.11: ಮಗನ ಅಗಲಿಕೆಯ ದುಃಖದ ನಡುವೆಯೂ ಆತನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಪೋಷಕರು ಮಾನವೀಯತೆ ಮೆರೆದಿದ್ದಾರೆ. ಸಾವಿನಲ್ಲೂ ಸಾರ್ಥಕತೆ ಮೆರೆದ 22 ವರ್ಷದ ಯೋಗೇಶ್ ಅವರ ಅಂಗಾಂಗಗಳು ಇದೀಗ ಇತರರ ಬದುಕಿಗೆ ಹೊಸ ಬೆಳಕಾಗಲಿವೆ.
ಮಡಿಕೇರಿಯ ಚಾಮುಂಡೇಶ್ವರಿ ನಗರದ ನಿವಾಸಿ ಯೋಗೇಶ್ (22) ಅವರ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ, ಕುಟುಂಬದವರ ಒಪ್ಪಿಗೆಯ ಮೇರೆಗೆ ಅಂಗಾಂಗ ದಾನ ಪ್ರಕ್ರಿಯೆ ನಡೆಸಲಾಯಿತು. ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಮೈಸೂರಿನ ಮಣಿಪಾಲ್ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಯ ವೈದ್ಯರ ತಂಡ ಜಂಟಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಯಕೃತ್ ಮತ್ತು ಕಣ್ಣಿನ ಕಾರ್ನಿಯಾಗಳನ್ನು ಹೊರತೆಗೆದು ಮೈಸೂರಿಗೆ ರವಾನಿಸಿತು.
ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಯೋಗೇಶ್ ಶನಿವಾರ ತಡರಾತ್ರಿಯವರೆಗೂ ಜಿಲ್ಲೆಗೆ ಔಷಧ ಪೂರೈಕೆ ಮಾಡುವ ಮಡಿಕೇರಿಯ ಸಪ್ತಗಿರಿ ಎಂಟರ್‌ಪ್ರೈಸಸ್ ಕಚೇರಿಯಲ್ಲಿ ದೀಪಾಲಂಕಾರ ಹಾಗೂ ಪೂಜಾ ಕಾರ್ಯಕ್ರಮದ ಸಿದ್ಧತೆಗಳನ್ನು ಉತ್ಸಾಹದಿಂದ ಪೂರ್ಣಗೊಳಿಸಿ ಮನೆಗೆ ತೆರಳಿದ್ದರು. ಆದರೆ ಭಾನುವಾರ ಬೆಳಗಿನ ಜಾವ ಸುಮಾರು 3 ಗಂಟೆಗೆ ಮನೆಯಲ್ಲಿ ಆಕಸ್ಮಿಕವಾಗಿ ಕುಸಿದು ಬಿದ್ದ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿತ್ತು.
ವೈದ್ಯಕೀಯ ಪರೀಕ್ಷೆಯಲ್ಲಿ ಯೋಗೇಶ್ ಅವರ ಮೆದುಳು ನಿಷ್ಕ್ರಿಯಗೊಂಡಿರುವುದು ದೃಢಪಟ್ಟಿತ್ತು. ಬಳಿಕ ವೈದ್ಯರ ಸಲಹೆಯಂತೆ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆತಂದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಚೇತರಿಸಿಕೊಳ್ಳುವ ಸಾಧ್ಯತೆ ಇಲ್ಲದ ಗಂಭೀರ ಸ್ಥಿತಿಯಲ್ಲಿರುವುದನ್ನು ವೈದ್ಯರು ಕುಟುಂಬಸ್ಥರಿಗೆ ತಿಳಿಸಿ, ಅಂಗಾಂಗ ದಾನದ ಮಹತ್ವವನ್ನು ವಿವರಿಸಿದರು.
ಮಗನ ಅಗಲಿಕೆಯ ನೋವಿನ ನಡುವೆಯೂ ಆತನ ಅಂಗಾಂಗಗಳ ಮೂಲಕ ಇತರರ ಬದುಕಿಗೆ ಬೆಳಕಾಗಲಿ ಎಂಬ ಉದಾತ್ತ ಆಶಯದಿಂದ ತಾಯಿ ನಿರ್ಮಲ ಹಾಗೂ ಹಿರಿಯ ಸಹೋದರ ಪ್ರತಾಪ್ ಅಂಗಾಂಗ ದಾನಕ್ಕೆ ಸಮ್ಮತಿ ಸೂಚಿಸಿದರು.
ಅಗತ್ಯ ದಾಖಲಾತಿ ಹಾಗೂ ವೈದ್ಯಕೀಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ 25ಕ್ಕೂ ಅಧಿಕ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಸುಮಾರು ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದರು. ಯಕೃತ್ ಹಾಗೂ ಕಣ್ಣಿನ ಕಾರ್ನಿಯಾಗಳನ್ನು ಹೊರತೆಗೆದು ತುರ್ತು ವಾಹನದ ಮೂಲಕ ಮೈಸೂರು ಮಣಿಪಾಲ್ ಆಸ್ಪತ್ರೆಗೆ ಸಾಗಿಸಲಾಯಿತು.
ಅಂಗಾಂಗ ದಾನಿ ಯೋಗೇಶ್ ಅವರ ಮೃತದೇಹಕ್ಕೆ ಮಣಿಪಾಲ್ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಯ ವೈದ್ಯರು, ಸಿಬ್ಬಂದಿ ಮತ್ತು ಕುಟುಂಬಸ್ಥರು ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು. ಆಸ್ಪತ್ರೆಯ ಕಾರಿಡಾರ್‌ನಲ್ಲಿ ನೂರಾರು ಮಂದಿ ಸಾಲಾಗಿ ನಿಂತು ಮೃತದೇಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಭಾವಪೂರ್ಣ ವಿದಾಯ ಹೇಳಿದರು.
ರಕ್ತದಾನದ ಮೂಲಕವೂ ಜೀವ ಉಳಿಸಲು ಮುಂದಾಗಿದ್ದ ಯುವಕ
ವಿಶೇಷವೆಂದರೆ, ಯೋಗೇಶ್ ಇತ್ತೀಚೆಗೆ ಕೆಮಿಸ್ಟ್ ಅಸೋಸಿಯೇಷನ್ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದ್ದರು. ಅಂದು ರಕ್ತದಾನದ ಮೂಲಕ ಮತ್ತೊಬ್ಬರ ಜೀವ ಉಳಿಸಲು ಮುಂದಾಗಿದ್ದ ಯುವಕ, ಇಂದು ತನ್ನ ಅಂಗಾಂಗಗಳ ಮೂಲಕ ಹಲವು ಮಂದಿಯ ಬದುಕಿಗೆ ಆಸರೆಯಾಗುವ ಅವಕಾಶ ಕಲ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಡೀನ್ ಡಾ. ಲೋಕೇಶ್, ಅಂಗಾಂಗ ದಾನ ಪ್ರಕ್ರಿಯೆಯ ನೋಡಲ್ ಅಧಿಕಾರಿ ಡಾ. ನಿಷಿದ್ ಜೋಸೆಫ್, ಜಿಲ್ಲಾಸ್ಪತ್ರೆಯ ಮುಖ್ಯಸ್ಥ ಡಾ. ನಂಜುಂಡಯ್ಯ, ಮುಖ್ಯ ಶಸ್ತ್ರಚಿಕಿತ್ಸಕ ಡಾ. ಸೋಮಶೇಖರ್, ಅಂಗಾಂಗ ದಾನ ಪ್ರಕ್ರಿಯೆಯ ಆಪ್ತ ಸಮಾಲೋಚಕಿ ಜಿ. ವಿನೋದ ಕುಮಾರಿ, ಮಣಿಪಾಲ್ ಆಸ್ಪತ್ರೆಯ ವೈದ್ಯರಾದ ಡಾ. ಜ್ಞಾನವೀರು, ಡಾ. ಅಮಿತ್ ಸೇರಿದಂತೆ ಶುಶ್ರೂಷಕಿಯರು ಹಾಗೂ ವೈದ್ಯಕೀಯ ಸಿಬ್ಬಂದಿ ಉಪಸ್ಥಿತರಿದ್ದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಎರಡನೇ ಅಂಗಾಂಗ ದಾನ
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯಲ್ಲಿ ಇದು ಎರಡನೇ ಅಂಗಾಂಗ ದಾನ ಪ್ರಕ್ರಿಯೆಯಾಗಿದೆ. ಯಕೃತ್ ಮತ್ತು ಕಾರ್ನಿಯಾಗಳನ್ನು ಅಗತ್ಯವಿರುವವರಿಗೆ ಕಸಿ ಮಾಡಲು ಮೈಸೂರು ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ.
ಅಂಗಾಂಗ ದಾನ ಮಾಡುವ ಕುಟುಂಬದವರಿಗೆ ಜಿಲ್ಲಾಸ್ಪತ್ರೆಯಲ್ಲಿ ಜೀವಿತಾವಧಿಯವರೆಗೆ ಉಚಿತ ಚಿಕಿತ್ಸೆಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಅಂಗಾಂಗ ದಾನದ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಾಗುತ್ತಿದ್ದರೂ ಇನ್ನೂ ಹೆಚ್ಚಿನ ಜಾಗೃತಿ ಅಗತ್ಯವಿದೆ ಎಂದು ಸಂಸ್ಥೆಯ ಡೀನ್ ಡಾ. ಲೋಕೇಶ್ ಎ.ಜೆ ತಿಳಿಸಿದರು.
ಯೋಗೇಶ್ ಅವರ ಕುಟುಂಬದ ಮಾನವೀಯ ನಿರ್ಧಾರಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.























