ಸುಂಟಿಕೊಪ್ಪ, NEWS DESK ನ.11: ತಾಲ್ಲೂಕು ಸಾಮರಸ್ಯ ವೇದಿಕೆಯ ವತಿಯಿಂದ ಸುಂಟಿಕೊಪ್ಪದ ಚಾಮುಂಡೇಶ್ವರಿ ಬಡಾವಣೆ ಹಾಗೂ ಜನತಾ ಕಾಲೋನಿಯ ದಲಿತ ಸಮುದಾಯದವರೊಂದಿಗೆ ಸಾಮರಸ್ಯ ದೀಪಾವಳಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಅರ್ಚಕರಾದ ಶರತ್ ಭಟ್ ಅವರು ದೀಪವನ್ನು ಬೆಳಗಿಸಿ ಬಸವರಾಜ್ ದಂಪತಿಗಳಿಗೆ ಹಸ್ತಾಂತರಿಸಿದರು. ಬಳಿಕ ಗೋ ಪೂಜೆಯೊಂದಿಗೆ ಸಾಮರಸ್ಯ ಜ್ಯೋತಿಯನ್ನು ಬಡಾವಣೆಯ ಪ್ರತಿಯೊಂದು ಮನೆಯಲ್ಲೂ ಬೆಳಗಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಾಮರಸ್ಯ ವೇದಿಕೆಯ ಮುಖಂಡ ಚಿ.ನಾ. ಸೋಮೇಶ್ ಅವರು, ಸಮಾಜದಲ್ಲಿರುವ ಅಸ್ಪೃಶ್ಯತೆ ಹಾಗೂ ಜಾತಿ ತಾರತಮ್ಯಗಳು ತೊಲಗಿ, ಸಾಮರಸ್ಯದ ಬದುಕು ನಮ್ಮದಾಗಲಿ. ದೀಪಾವಳಿ ಎಲ್ಲರ ಬದುಕಿನಲ್ಲಿ ಹೊಸ ಬೆಳಕನ್ನು ತರಲಿ ಎಂದು ಹಾರೈಸಿದರು.
ನಂತರ ಸೋಮವಾರಪೇಟೆಯ ಬಸವ ಕುಮಾರ ಶಾಸ್ತ್ರಿಗಳು ದಲಿತ ಸಮುದಾಯದ ಮನೆಗಳಿಗೆ ಭೇಟಿ ನೀಡಿ ದೀಪ ಬೆಳಗಿಸಿ ಆಶೀರ್ವದಿಸಿದರು. ಬಳಿಕ ಎಲ್ಲರೂ ಒಟ್ಟಾಗಿ ಸೇರಿ ಪ್ರಸಾದ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಸಾಮರಸ್ಯ ವೇದಿಕೆಯ ಕಾರ್ಯಕರ್ತರಾದ ತೃಶಾಲ್ ಸನ್ಮಾನ್, ಲೀಲಾ ಮೇದಪ್ಪ, ರಾಕೇಶ್, ಸಾಮರಸ್ಯ ಚಟುವಟಿಕೆಯ ಕಾರ್ಯಕರ್ತರು, ಊರಿನ ಪ್ರಮುಖರು ಸೇರಿದಂತೆ ಇತರರು ಉಪಸ್ಥಿತರಿದ್ದರು.























