ಮಡಿಕೇರಿ, NEWS DESK ನ.12 : ಧಾರ್ಮಿಕ ಸ್ವಾತಂತ್ರ್ಯ, ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ, ಸಾಮಾಜಿಕ ನ್ಯಾಯ ಹಾಗೂ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೊಡಗು ಕ್ರೈಸ್ತ ವೇದಿಕೆ ಮತ್ತು ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ವತಿಯಿಂದ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಕೆಲವು ಕಾಯ್ದೆಗಳನ್ನು ಹಿಂಪಡೆಯುವುದು, ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವುದು ಹಾಗೂ ಸಾಮಾಜಿಕ ನ್ಯಾಯದ ಕ್ರಮಗಳನ್ನು ಮರುಸ್ಥಾಪಿಸುವುದಾಗಿ ಭರವಸೆ ನೀಡಿತ್ತು. ಆದರೆ, ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದರೂ ಪ್ರಮುಖ ಭರವಸೆಗಳು ಈಡೇರಿಲ್ಲ ಎಂದು ಸಂಘಟನೆಗಳು ಮನವಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿವೆ.
ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಸಂರಕ್ಷಣಾ ಕಾಯ್ದೆ-2022 ಅನ್ನು ರದ್ದುಪಡಿಸಬೇಕು. ಈ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳನ್ನು ಕಾನೂನುಬದ್ಧವಾಗಿ ಪರಿಶೀಲಿಸಿ, ಸೂಕ್ತ ಪ್ರಕ್ರಿಯೆ ಅನುಸರಿಸಿ ಹಿಂಪಡೆಯಬೇಕು. ಧಾರ್ಮಿಕ ಅಲ್ಪಸಂಖ್ಯಾತರು, ವಿಶೇಷವಾಗಿ ಕ್ರೈಸ್ತ ಸಮುದಾಯದವರು ಯಾವುದೇ ರೀತಿಯ ಕಿರುಕುಳ, ಬೆದರಿಕೆ ಹಾಗೂ ಹಿಂಸೆಗೆ ಒಳಗಾಗದಂತೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಲಾಗಿದೆ.
ಚರ್ಚ್ಗಳು, ಪ್ರಾರ್ಥನಾ ಸಭೆಗಳು, ಧಾರ್ಮಿಕ ಆರಾಧನೆ ಹಾಗೂ ದತ್ತಿ ಚಟುವಟಿಕೆಗಳಿಗೆ ಸೂಕ್ತ ರಕ್ಷಣೆ ನೀಡಬೇಕು. ದ್ವೇಷ ಭಾಷಣ, ಕೋಮು ಪ್ರಚೋದನೆ, ಪೂಜಾ ಸ್ಥಳಗಳ ಮೇಲಿನ ದಾಳಿ ಹಾಗೂ ಗುಂಪು ಹಿಂಸಾಚಾರವನ್ನು ತಡೆಗಟ್ಟಲು ಸುಪ್ರೀಂ ಕೋರ್ಟ್ ನಿರ್ದೇಶನಗಳಂತೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಅಲ್ಲದೆ, ತೆಹ್ಸೀನ್ ಎಸ್. ಪೂನವಲ್ಲಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಗುಂಪು ಹಿಂಸಾಚಾರ ತಡೆಗಟ್ಟುವ ನಿರ್ದೇಶನಗಳನ್ನು ಜಾರಿಗೊಳಿಸಬೇಕು. ಕರ್ನಾಟಕ ವಧೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ-2020 ಅನ್ನು ರದ್ದುಪಡಿಸಿ, ರೈತರು, ಜಾನುವಾರು ವ್ಯಾಪಾರಿಗಳು ಹಾಗೂ ಸಾಗಣೆದಾರರ ಜೀವನೋಪಾಯಕ್ಕೆ ಧಕ್ಕೆಯಾಗದಂತಹ ಸಮತೋಲಿತ ಕಾನೂನನ್ನು ರೂಪಿಸಬೇಕು ಎಂದು ಮನವಿ ಮಾಡಲಾಗಿದೆ.
ಕ್ರೈಸ್ತರು ಸೇರಿದಂತೆ ಎಲ್ಲ ಅಲ್ಪಸಂಖ್ಯಾತ ಸಮುದಾಯಗಳಿಗೆ ಸರ್ಕಾರಿ ಕಲ್ಯಾಣ ಯೋಜನೆಗಳು, ವಿದ್ಯಾರ್ಥಿವೇತನ, ಶಿಕ್ಷಣ ಹಾಗೂ ಜೀವನೋಪಾಯ ಕಾರ್ಯಕ್ರಮಗಳಲ್ಲಿ ಸಮಾನ ಅವಕಾಶ ಕಲ್ಪಿಸಬೇಕು. ಮನವಿಯಲ್ಲಿನ ಬೇಡಿಕೆಗಳ ಕುರಿತು ಸರ್ಕಾರ ಲಿಖಿತ ಪ್ರತಿಕ್ರಿಯೆ ನೀಡಿ, ಕಾಲಮಿತಿಯೊಳಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಂತ ಮೈಕಲ್ ಧರ್ಮಕೇಂದ್ರದ ಪ್ರಧಾನ ಗುರುಗಳಾದ ಫಾದರ್ ಪ್ಯಾಟ್ರಿಕ್ ಕ್ಸೆವಿಯರ್, ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ, ಉಪಾಧ್ಯಕ್ಷ ಜೋಕಿಂ ರಾಡ್ರಿಗಸ್, ಕಾರ್ಯದರ್ಶಿ ಲಾರೆನ್ಸ್ ವಿಎ, ಗೌರವಾಧ್ಯಕ್ಷರಾದ ಜೋಕಿ ವಾಸ್ ಮತ್ತು ಆಗಸ್ಟೀನ್ ಜಯರಾಜ್, ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿರಿಲ್ ಮೊರಸ್, ಕ್ಲೆಮೆಂಟ್, ಸುನಿಲ್ ಲೋಬೋ, ಸಾರ್ಜೆಂಟ್, ವಿನ್ಸೆಂಟ್, ರಿಚರ್ಡ್, ಉಲ್ಲಾಸ್ ಕುಮಾರ್, ಸಂತ ಮೈಕಲ್ ಧರ್ಮಕೇಂದ್ರದ ಸದಸ್ಯರಾದ ಪಿಯುಸ್ ಪೆರೇರಾ ಹಾಗೂ ಜಾರ್ಜ್ ಉಪಸ್ಥಿತರಿದ್ದರು.























