ಶನಿವಾರಸಂತೆ, NEWS DESK ನ.12: ಮನುಷ್ಯನ ಅಂತರಂಗದ ಶುದ್ಧೀಕರಣಕ್ಕೆ ವಚನ ಸಾಹಿತ್ಯದ ಅರಿವು ದಿವ್ಯ ಔಷಧಿಯಿದ್ದಂತೆ ಎಂದು ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ. ಜಮೀರ್ ಅಹಮದ್ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಆಲೂರು ಸಿದ್ದಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ‘ವಚನಗಳಲ್ಲಿ ಸಾಮಾಜಿಕ ಮೌಲ್ಯಗಳು’ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಬಸವಾದಿ ಶರಣರು ಶಾಲೆಗಳಿಗೆ ತೆರಳಿ ಅಕ್ಷರಾಭ್ಯಾಸ ಮಾಡದಿದ್ದರೂ, ತಮ್ಮ ಜೀವನಾನುಭವಗಳ ಮೂಲಕ ಅಂದಿನ ಸಮಾಜದಲ್ಲಿ ತಲೆದೋರಿದ್ದ ಸಾಮಾಜಿಕ ಅಸಮಾನತೆ, ವರ್ಗ ಹಾಗೂ ವರ್ಣಭೇದ ಸೇರಿದಂತೆ ವಿವಿಧ ಸಾಮಾಜಿಕ ಪಿಡುಗುಗಳ ವಿರುದ್ಧ ಧ್ವನಿ ಎತ್ತಿದರು. ಅವರು ರಚಿಸಿದ ವಚನ ಸಾಹಿತ್ಯ ಇಂದು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಶ್ರೇಷ್ಠ ಸಾಹಿತ್ಯವಾಗಿದೆ. ಕನ್ನಡ ಸಾಹಿತ್ಯಕ್ಕೆ ಶರಣ ಸಾಹಿತ್ಯವೇ ತಾಯಿಬೇರು ಎಂದು ಹೇಳಿದರು.
ಭವಿಷ್ಯದ ಸತ್ಪ್ರಜೆಗಳಾದ ಇಂದಿನ ಮಕ್ಕಳಲ್ಲಿ ವಿಶ್ವಮಾನವತೆ ಹಾಗೂ ಸಾಮಾಜಿಕ ಬದ್ಧತೆಯ ಅರಿವು ಮೂಡಿಸಲು ವಚನ ಸಾಹಿತ್ಯ ಅತ್ಯಗತ್ಯವಾಗಿದೆ. ಸತ್ಯಶುದ್ಧ ಕಾಯಕ ಮತ್ತು ದಾಸೋಹದ ಮೂಲಕ ಸಮಸಮಾಜ ನಿರ್ಮಾಣ ಹಾಗೂ ಮಹಿಳಾ ಸಮಾನತೆಯನ್ನು ಪ್ರತಿಪಾದಿಸಿದ ಶರಣರ ಆಶಯಗಳೇ ಭಾರತದ ಸಂವಿಧಾನದ ಅಸ್ಮಿತೆಯಾಗಿವೆ ಎಂದು ವಿವಿಧ ವಚನಗಳ ಮೂಲಕ ವಿವರಿಸಿದರು.
ಶಾಲೆಯ ಪ್ರಾಂಶುಪಾಲ ಕೆ. ಪ್ರಕಾಶ್ ಮಾತನಾಡಿ, 12ನೇ ಶತಮಾನದ ಬಸವಾದಿ ಶರಣರು ಆಶಿಸಿದ ಸತ್ಯಶುದ್ಧ ಸಮಸಮಾಜ ನಿರ್ಮಾಣವಾಗಬೇಕಾದರೆ ಪ್ರತಿಯೊಬ್ಬರೂ ಮೊದಲು ತಮ್ಮನ್ನು ತಾವು ಅರಿತುಕೊಂಡು ತಿದ್ದಿಕೊಳ್ಳಬೇಕು. ಆಗ ಸಮಾಜವೂ ತನ್ನಿಂದ ತಾನೇ ಶುದ್ಧಿಯಾಗುತ್ತದೆ ಎಂದರು.
ಓದು-ಬರಹಗಳನ್ನು ಅರಿಯದ ಶರಣರು ತಮ್ಮ ಅನುಭವಗಳ ಮೂಲಕ ಸಮಾಜಕ್ಕೆ ನೀಡಿದ ವಚನ ಸಾಹಿತ್ಯ ವಿಶ್ವದ ಶ್ರೇಷ್ಠ ಸಾಹಿತ್ಯವಾಗಿದೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ವಚನ ಸಾಹಿತ್ಯವನ್ನು ಅರಿತು ಅದರಂತೆ ನಡೆದರೆ ಅವರ ವ್ಯಕ್ತಿತ್ವ ಉಜ್ವಲವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಸವೇಶ್ವರರ ‘ಕಲಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ಎಂಬ ಸಪ್ತಸೂತ್ರದ ವಚನದಲ್ಲಿ ಸಮಾಜದ ಸುಗಮ ಜೀವನಕ್ಕೆ ಅಗತ್ಯವಾದ ಮೌಲ್ಯಗಳು ಅಡಕವಾಗಿವೆ. ಇಂದಿನ ಯುವಜನತೆ ಈ ವಚನದ ಆಶಯಗಳನ್ನು ಅರಿತುಕೊಂಡರೆ ಕಲಹ, ದ್ವೇಷ ಹಾಗೂ ಅಸೂಯೆಗಳಿಲ್ಲದ ಸುಂದರ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಉದ್ದೇಶದಿಂದ ಜಿಲ್ಲಾದ್ಯಂತ ಶಾಲಾ-ಕಾಲೇಜುಗಳಲ್ಲಿ ‘ವಚನಗಳ ನಡಿಗೆ’ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮೊರಾರ್ಜಿ ಶಾಲೆಯ ಉಪಪ್ರಾಂಶುಪಾಲ ಇಟಗಿ ಅಶೋಕ್ ಮಾತನಾಡಿದರು. ವಿದ್ಯಾರ್ಥಿಗಳಿಂದ ವಚನ ಗಾಯನ ನಡೆಯಿತು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಬಿ. ನಟರಾಜು, ಶಾಲಾ ಶಿಕ್ಷಕರಾದ ವೇಣುಗೋಪಾಲ್, ಲೋಲಾಕ್ಷಿ, ಅಂಬಿಕಾದೇವಿ ಹಾಗೂ ಧನ್ಯ ಉಪಸ್ಥಿತರಿದ್ದರು.























