ಮಡಿಕೇರಿ, NEWS DESK ನ.13: ಕೊಡಗು ವಿದ್ಯಾಲಯದ 4ನೇ ತರಗತಿ ವಿದ್ಯಾರ್ಥಿಗಳು ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮ, ಸಡಗರ ಹಾಗೂ ಪರಿಸರ ಜಾಗೃತಿಯ ಸಂದೇಶದೊಂದಿಗೆ ಅರ್ಥಪೂರ್ಣವಾಗಿ ಆಚರಿಸಿದರು.
ಕಾರ್ಯಕ್ರಮವು ವಿದ್ಯಾರ್ಥಿಗಳ ಸ್ವಾಗತ ನೃತ್ಯದೊಂದಿಗೆ ಆರಂಭಗೊಂಡಿತು. ವಿದ್ಯಾರ್ಥಿಗಳು ಸುಮಧುರ ಹಾಡಿನ ಮೂಲಕ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭಾರಂಭ ನೀಡಿದರು.
ಶಾಲೆಯ ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರ, ಮುಖ್ಯ ಆಡಳಿತಾಧಿಕಾರಿ ರವಿ ಪಿ., ಶೈಕ್ಷಣಿಕ ಸಂಯೋಜಕಿ ಮಿಲನ್ ಕುಮಾರಿ ಹಾಗೂ ಶಿಕ್ಷಕಿಯರಾದ ಲಾವಣ್ಯ ಮತ್ತು ಮಮತ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ದೀಪಾವಳಿ ಹಬ್ಬದ ಮಹತ್ವ, ಪೌರಾಣಿಕ ಹಿನ್ನೆಲೆ ಹಾಗೂ ಆಚರಣೆಯ ಉದ್ದೇಶವನ್ನು ವಿದ್ಯಾರ್ಥಿಗಳು ಸುಂದರ ನಾಟಕದ ಮೂಲಕ ಪ್ರಸ್ತುತಪಡಿಸಿದರು. ಬೆಳಕು ಕತ್ತಲೆಯನ್ನು ದೂರಮಾಡುವಂತೆ, ನಮ್ಮ ಬದುಕಿನಲ್ಲಿರುವ ಅಜ್ಞಾನ ಮತ್ತು ಅಸತ್ಯವನ್ನು ದೂರಮಾಡಿ ಸತ್ಯ, ಪ್ರೀತಿ ಹಾಗೂ ಒಳಿತಿನ ಹಾದಿಯಲ್ಲಿ ಸಾಗಬೇಕು ಎಂಬ ಸಂದೇಶವನ್ನು ನಾಟಕದ ಮೂಲಕ ಸಾರಿದರು.
ಮಾನವನ ಚಟುವಟಿಕೆಗಳಿಂದ ಭೂಮಿಗೆ ಉಂಟಾಗುತ್ತಿರುವ ಹಾನಿ ಹಾಗೂ ಪರಿಸರ ಮಾಲಿನ್ಯದ ಗಂಭೀರತೆಯನ್ನು ವಿದ್ಯಾರ್ಥಿಗಳು ಮನಮುಟ್ಟುವಂತೆ ವಿವರಿಸಿದರು. ಪಟಾಕಿಗಳ ಸಿಡಿತದಿಂದ ಉಂಟಾಗುವ ವಾಯುಮಾಲಿನ್ಯ, ಶಬ್ದಮಾಲಿನ್ಯ ಹಾಗೂ ಪ್ರಕೃತಿಯ ಮೇಲಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು. ದೀಪಾವಳಿಯ ಸಂಭ್ರಮದ ಹೆಸರಿನಲ್ಲಿ ಭೂಮಿಯ ಆರೋಗ್ಯವನ್ನು ಹಾಳುಮಾಡದೆ ಪರಿಸರ ಸ್ನೇಹಿಯಾಗಿ ಹಬ್ಬ ಆಚರಿಸಬೇಕು ಎಂಬ ಸಂದೇಶ ನೀಡಿದರು.
ಶಿಕ್ಷಕಿ ಲಾವಣ್ಯ ಅವರು ದೀಪಾವಳಿಯ ಮೂರು ಪ್ರಮುಖ ದಿನಗಳಾದ ನರಕ ಚತುರ್ದಶಿ, ಲಕ್ಷ್ಮಿ ಪೂಜೆ ಹಾಗೂ ಬಲಿಪಾಡ್ಯಮಿಯ ಮಹತ್ವ, ಧಾರ್ಮಿಕ ಹಿನ್ನೆಲೆ ಮತ್ತು ಸಾಂಸ್ಕೃತಿಕ ಆಚರಣೆಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು.
ಶಾಲೆಯ ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರ ಅವರು ಮಾತನಾಡಿ, ಹಬ್ಬಗಳು ಕೇವಲ ಸಂಭ್ರಮಾಚರಣೆಗೆ ಸೀಮಿತವಾಗದೆ ನಮ್ಮ ಜೀವನದಲ್ಲಿ ಪ್ರೀತಿ, ಸಹಬಾಳ್ವೆ, ಉತ್ತಮ ಗುಣಗಳು ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಸಂದರ್ಭಗಳಾಗಬೇಕು ಎಂದು ತಿಳಿಸಿದರು. ಪರಿಸರದ ಕಾಳಜಿ ವಹಿಸುವುದು, ಪ್ರಕೃತಿಯನ್ನು ಪ್ರೀತಿಸುವುದು ಹಾಗೂ ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯುವುದು ಪ್ರತಿಯೊಬ್ಬರ ಕರ್ತವ್ಯವೆಂದು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.
ಇದೇ ಸಂದರ್ಭದಲ್ಲಿ ನಡೆದ “ಒಂದು ನಿಮಿಷ – ಒಂದು ಸಂದೇಶ” ಎಂಬ ವಿಶೇಷ ವಿಭಾಗದಲ್ಲಿ ಭಾವನ ಎಸ್. ಅವರು ಪರಿಸರ ಸಂರಕ್ಷಣೆಯ ಮಹತ್ವ ಹಾಗೂ ಪರಿಸರ ಸ್ನೇಹಿ ದೀಪಾವಳಿ ಆಚರಣೆಯ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ವಿದ್ಯಾರ್ಥಿಗಳ ಹಾಡು, ಸ್ವಾಗತ ನೃತ್ಯ, ನಾಟಕ ಹಾಗೂ ಪರಿಸರ ಜಾಗೃತಿಯ ಪ್ರಸ್ತುತಿಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು. ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿದರು.
ಪೂರ್ಣಚಂದ್ರ ಶೆಟ್ಟಿ ಹಾಗೂ ವೈಶ್ವಿ ಎಸ್. ಬಂಗೇರ ಕಾರ್ಯಕ್ರಮ ನಿರೂಪಿಸಿದರು. ನೀಲ್ ನಾಚಪ್ಪ ಸ್ವಾಗತಿಸಿದರು. ತಾರಿತ್ ಪೊನ್ನಣ್ಣ ವಂದಿಸಿದರು.
ದೀಪಾವಳಿಯ ಬೆಳಕು ಮತ್ತು ಸಂಭ್ರಮದೊಂದಿಗೆ ಪರಿಸರ ಸಂರಕ್ಷಣೆ, ಪ್ರಕೃತಿಯ ಮೇಲಿನ ಪ್ರೀತಿ ಹಾಗೂ ಸಾಮಾಜಿಕ ಜವಾಬ್ದಾರಿಯ ಮಹತ್ವವನ್ನು ಸಾರಿದ ಈ ಕಾರ್ಯಕ್ರಮ ಅರ್ಥಪೂರ್ಣವಾಗಿ ಮೂಡಿಬಂತು.
















