ಮೈಸೂರು, NEWS DESK ನ.13: ವಿಜ್ಞಾನ ಮತ್ತು ಆಧ್ಯಾತ್ಮದ ಪರಂಪರೆ ಭಾರತದಲ್ಲಿ ಸದಾ ಜೊತೆಯಾಗಿ ಬೆಳೆದುಬಂದಿವೆ. ಯುವಜನರಲ್ಲಿ ವೈಜ್ಞಾನಿಕ ಕುತೂಹಲ, ಸಂಶೋಧನಾ ಮನೋಭಾವ ಮತ್ತು ಹೊಸ ಆವಿಷ್ಕಾರಗಳಿಗೆ ಪ್ರೇರಣೆ ನೀಡುವಲ್ಲಿ COSMOS–ಮೈಸೂರು ತಾರಾಲಯ ಮಹತ್ವದ ಪಾತ್ರ ವಹಿಸಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಜಯಚಾಮರಾಜ ಒಡೆಯರ್ ಸೆಂಟರ್ ಫಾರ್ ಹೈಯರ್ ಲರ್ನಿಂಗ್ ಆವರಣದಲ್ಲಿ ನಿರ್ಮಿಸಲಾಗಿರುವ ವಿಶ್ವದ ಮೊದಲ ಟಿಲ್ಟೆಡ್ ಎಲ್‌ಇಡಿ ಡೋಮ್ ತಾರಾಲಯವಾದ COSMOS–Mysuru ಅನ್ನು ರಾಷ್ಟ್ರಕ್ಕೆ ಸಮರ್ಪಿಸಿ ಅವರು ಮಾತನಾಡಿದರು.
ಭಾರತದ ಪೂರ್ವಜರು ನಕ್ಷತ್ರಗಳು, ಗ್ರಹಗಳ ಚಲನೆ ಹಾಗೂ ಸೂರ್ಯ, ಚಂದ್ರಗ್ರಹಣಗಳ ಕುರಿತು ನಿಖರ ಅಧ್ಯಯನ ನಡೆಸಿದ್ದರು. ಆರ್ಯಭಟ, ವರಾಹಮಿಹಿರ ಮತ್ತು ಭಾಸ್ಕರಾಚಾರ್ಯರಂತಹ ಮಹಾನ್ ವಿಜ್ಞಾನಿಗಳು ಅತ್ಯಾಧುನಿಕ ತಂತ್ರಜ್ಞಾನಗಳಿಲ್ಲದ ಕಾಲದಲ್ಲಿಯೇ ಖಗೋಳ ವಿಜ್ಞಾನ ಮತ್ತು ಗಣಿತ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಮೈಸೂರಿನ ಮಹಾರಾಜರ ಕೊಡುಗೆ ಸ್ಮರಣೆ
ಜ್ಞಾನ ಮತ್ತು ಸಂಶೋಧನೆಗೆ ಪ್ರೋತ್ಸಾಹ ನೀಡುವ ಸಂಸ್ಥೆಗಳನ್ನು ನಿರ್ಮಿಸುವಲ್ಲಿ ಮೈಸೂರು ಮಹಾರಾಜರ ಕೊಡುಗೆ ಅಪಾರವಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಯಾಗಿದ್ದು, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc) ಸ್ಥಾಪನೆಯಲ್ಲಿಯೂ ಒಡೆಯರ್ ಕುಟುಂಬ ಮಹತ್ವದ ಪಾತ್ರ ವಹಿಸಿದೆ. ಈ ಸಂಸ್ಥೆಗಳು ಹಲವು ತಲೆಮಾರುಗಳ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಅವಕಾಶ ಕಲ್ಪಿಸಿವೆ ಎಂದರು.
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಐತಿಹಾಸಿಕ ಸಾಧನೆ
ಕಳೆದ ಒಂದು ದಶಕದಲ್ಲಿ ಭಾರತವು ಬಾಹ್ಯಾಕಾಶ ಸಂಶೋಧನೆ ಮತ್ತು ಖಗೋಳ ವಿಜ್ಞಾನ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಚಂದ್ರಯಾನ-3 ಮೂಲಕ ಚಂದ್ರನ ದಕ್ಷಿಣ ಧ್ರುವದ ಸಮೀಪ ಇಳಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಆದಿತ್ಯ ಎಲ್-1 ಮೂಲಕ ಸೂರ್ಯನ ಅಧ್ಯಯನಕ್ಕಾಗಿ ಭಾರತದ ಮೊದಲ ಬಾಹ್ಯಾಕಾಶ ಸೌರ ವೀಕ್ಷಣಾಲಯವನ್ನು ಸ್ಥಾಪಿಸಲಾಗಿದೆ.
ಬಾಹ್ಯಾಕಾಶದಲ್ಲಿ ಡಾಕಿಂಗ್ ಮತ್ತು ಅನ್‌ಡಾಕಿಂಗ್ ಸಾಮರ್ಥ್ಯ ಪ್ರದರ್ಶಿಸಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ಭಾರತೀಯ ಗಗನಯಾತ್ರಿಯೊಬ್ಬರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿ ಸಂಶೋಧನೆ ನಡೆಸಿರುವುದು ಮುಂಬರುವ ಗಗನಯಾನ ಯೋಜನೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಯುವಜನರಿಗೆ ಸಂಶೋಧನೆಗೆ ವಿಪುಲ ಅವಕಾಶ
ಜೈ ಜವಾನ್, ಜೈ ಕಿಸಾನ್ ಘೋಷಣೆಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಜೈ ವಿಜ್ಞಾನ್ ಸೇರಿಸಿದರೆ, ತಾವು ಜೈ ಅನುಸಂಧಾನ್ ಘೋಷಣೆಯನ್ನು ಸೇರ್ಪಡೆಗೊಳಿಸಿರುವುದಾಗಿ ಪ್ರಧಾನಿ ತಿಳಿಸಿದರು. ವಿಜ್ಞಾನ ಮತ್ತು ಸಂಶೋಧನೆಗೆ ಉತ್ತೇಜನ ನೀಡುವ ಮೂಲಕ ಭಾರತವನ್ನು ನಾವೀನ್ಯತೆಯ ಕೇಂದ್ರವನ್ನಾಗಿ ರೂಪಿಸಲಾಗುತ್ತಿದೆ ಎಂದರು.
ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ವಲಯಕ್ಕೂ ಮುಕ್ತಗೊಳಿಸಿರುವುದರಿಂದ ಯುವ ಉದ್ಯಮಿಗಳಿಗೆ ಹೊಸ ಅವಕಾಶಗಳು ಸೃಷ್ಟಿಯಾಗಿವೆ. ಭಾರತೀಯ ಸ್ಟಾರ್ಟ್‌ಅಪ್‌ಗಳು ಸ್ವಂತ ರಾಕೆಟ್‌ಗಳನ್ನು ಉಡಾವಣೆ ಮಾಡುತ್ತಿದ್ದು, ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಸಾಮರ್ಥ್ಯ ಬೆಳೆಸಿಕೊಂಡಿವೆ ಎಂದು ಹೇಳಿದರು.
ಅಟಲ್ ಟಿಂಕರಿಂಗ್ ಲ್ಯಾಬ್‌ಗಳ ಮೂಲಕ ಒಂದು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳಿಗೆ ಹೊಸ ಆಲೋಚನೆಗಳು ಮತ್ತು ಪ್ರಯೋಗಗಳಿಗೆ ಅವಕಾಶ ಕಲ್ಪಿಸಲಾಗಿದೆ. ‘ಒಂದು ರಾಷ್ಟ್ರ, ಒಂದು ಚಂದಾದಾರಿಕೆ’ ಯೋಜನೆ ಹಾಗೂ ಅನುಸಂಧಾನ್ ನ್ಯಾಷನಲ್ ರಿಸರ್ಚ್ ಫೌಂಡೇಷನ್ ಮೂಲಕ ಸಂಶೋಧನಾ ಕ್ಷೇತ್ರವನ್ನು ಬಲಪಡಿಸಲಾಗುತ್ತಿದೆ. ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆಗಾಗಿ ಒಂದು ಲಕ್ಷ ಕೋಟಿ ರೂಪಾಯಿಗಳ ಯೋಜನೆಯನ್ನೂ ಆರಂಭಿಸಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು COSMOS ತಾರಾಲಯಕ್ಕೆ ಭೇಟಿ ನೀಡಲಿ
ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ COSMOS ತಾರಾಲಯಕ್ಕೆ ಭೇಟಿ ನೀಡುವಂತೆ ಆಡಳಿತ ಮಂಡಳಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕು. ಬ್ರಹ್ಮಾಂಡದ ಕುರಿತು ತಿಳಿದುಕೊಳ್ಳಲು ಬರುವ ಮಕ್ಕಳಲ್ಲಿ ಕೆಲವರು ಭವಿಷ್ಯದಲ್ಲಿ ಮಹಾನ್ ವಿಜ್ಞಾನಿಗಳಾಗಿ ಹೊಸ ಸಂಶೋಧನೆಗಳನ್ನು ನಡೆಸಬಹುದು. ಯುವಜನರ ವೈಜ್ಞಾನಿಕ ಕನಸುಗಳಿಗೆ ರೂಪ ನೀಡುವುದೇ ಈ ತಾರಾಲಯದ ದೊಡ್ಡ ಯಶಸ್ಸಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕಾರ್ಯಕ್ರಮದಲ್ಲಿ ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ಯೋಜನೆಯ ನಿರ್ಮಾಣದಲ್ಲಿ ಸಹಕರಿಸಿದ ಎಲ್ಲರನ್ನೂ ಪ್ರಧಾನಮಂತ್ರಿ ಅಭಿನಂದಿಸಿದರು.
















