ಮಡಿಕೇರಿ, NEWS DESK ನ.15: ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್ಸಿ) ವತಿಯಿಂದ ಕೊಡವ ಜನಾಂಗದ ಅಸ್ತಿತ್ವ, ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಸಾಂಸ್ಕೃತಿಕ ಹಕ್ಕುಗಳು ಹಾಗೂ ಸಂವಿಧಾನಬದ್ಧ ಮಾನ್ಯತೆಗಾಗಿ ಹಮ್ಮಿಕೊಂಡಿರುವ 10ನೇ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ನ.16ರಂದು ಬೆಳಿಗ್ಗೆ 10.30ಕ್ಕೆ ತಾಳೇರಿನಾಡಿನ ಟಿ.ಶೆಟ್ಟಿಗೇರಿಯಲ್ಲಿ ನಡೆಯಲಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರು, ಕೊಡವ ಜನಾಂಗದ ಹಕ್ಕುಗಳು ಮತ್ತು ಅಸ್ತಿತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕೊಡವಲ್ಯಾಂಡ್ಗೆ ಸಂವಿಧಾನದ 244 ಮತ್ತು 371ನೇ ವಿಧಿಗಳು ಹಾಗೂ ಐದನೇ ಮತ್ತು ಆರನೇ ಶೆಡ್ಯೂಲ್ ಅಡಿಯಲ್ಲಿ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತ ನೀಡಬೇಕು. ವಿಶ್ವಸಂಸ್ಥೆಯ ಚಾರ್ಟರ್ ಹಾಗೂ ಭಾರತೀಯ ಸಂವಿಧಾನದ ಅಡಿಯಲ್ಲಿ ಕೊಡವ ಜನಾಂಗಕ್ಕೆ ಆದಿಮಸಂಜಾತ ಸಮುದಾಯವಾಗಿ ವಿಶೇಷ ಸಂವಿಧಾನಬದ್ಧ ಮಾನ್ಯತೆ ಕಲ್ಪಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಡಲಾಗುವುದು.
ಕೊಡವರ ಪವಿತ್ರ ಗನ್-ತೋಕ್ ಅನ್ನು ಸಂವಿಧಾನದ 25, 26 ಮತ್ತು 28ನೇ ವಿಧಿಗಳ ಅಡಿಯಲ್ಲಿ ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿ ಮುಂದುವರಿಸಲು ಅವಕಾಶ ನೀಡಬೇಕು. ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯದ ಸಂಘ ಕ್ಷೇತ್ರದ ಮಾದರಿಯಲ್ಲಿ ಕೊಡವ ಜನಾಂಗಕ್ಕೂ ಪ್ರತ್ಯೇಕ ಅಮೂರ್ತ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳನ್ನು ಕಲ್ಪಿಸಬೇಕು. ಶಾಸ್ತ್ರೀಯ ಕೊಡವತಕ್ಕ್ ಭಾಷೆಯನ್ನು ಸಂವಿಧಾನದ ಎಂಟನೇ ಶೆಡ್ಯೂಲ್ಗೆ ಸೇರಿಸಬೇಕು ಹಾಗೂ ಕೆಳದಿ, ಪಾಲೇರಿ ರಾಜರು ಮತ್ತು ಬ್ರಿಟಿಷರ ಕಾಲದಲ್ಲಿ ವಶಪಡಿಸಿಕೊಳ್ಳಲಾದ ಕೊಡವರ ವಂಶಪಾರಂಪರಿಕ ಆಸ್ತಿಗಳನ್ನು ಮರಳಿ ಹಸ್ತಾಂತರಿಸಬೇಕು ಎಂದು ಒತ್ತಾಯಿಸಲಾಗುವುದು.
2027ರ ಜನಗಣತಿಯಲ್ಲಿ ಪ್ರತ್ಯೇಕ ಕೋಡ್ಗೆ ಒತ್ತಾಯ
2027ರ ರಾಷ್ಟ್ರೀಯ ಜನಗಣತಿ ಮತ್ತು ಜಾತಿ ಗಣತಿಯಲ್ಲಿ ಆದಿಮಸಂಜಾತ ಏಕಜನಾಂಗೀಯ ಪ್ರಕೃತಿ ಆರಾಧಕ ಕೊಡವ ಸಮುದಾಯವನ್ನು ಪ್ರತ್ಯೇಕವಾಗಿ ಗುರುತಿಸಿ, ಪ್ರತ್ಯೇಕ ಕೋಡ್ ಮತ್ತು ಕಾಲಂ ಒದಗಿಸಬೇಕೆಂದು ನಾಚಪ್ಪ ಆಗ್ರಹಿಸಿದ್ದಾರೆ.
1871-72ರಿಂದ 1941ರವರೆಗಿನ ಜನಗಣತಿಯಲ್ಲಿ ಕೊಡವರನ್ನು ಪ್ರತ್ಯೇಕ ಜನಾಂಗೀಯ ಸಮುದಾಯವಾಗಿ ದಾಖಲಿಸಲಾಗಿತ್ತು. ಆದರೆ 1941ರ ನಂತರ ಕೊಡವರ ಪ್ರತ್ಯೇಕ ಗುರುತನ್ನು ದೊಡ್ಡ ಸಮುದಾಯಗಳೊಂದಿಗೆ ವಿಲೀನಗೊಳಿಸುವ ಮೂಲಕ ಅಳಿಸಿಹಾಕಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
1956ರವರೆಗೆ ಕೊಡಗು ಪ್ರತ್ಯೇಕ ‘ಸಿ’ ರಾಜ್ಯವಾಗಿದ್ದು, ರಾಜ್ಯ ಮರುಸಂಘಟನಾ ಕಾಯ್ದೆಯ ಮೂಲಕ ಕರ್ನಾಟಕದೊಂದಿಗೆ ವಿಲೀನಗೊಳಿಸಲಾಯಿತು. 1941ರ ಜನಗಣತಿಯಲ್ಲಿ ಕೊಡವರ ಪ್ರತ್ಯೇಕ ಗುರುತು ಕಳೆದುಹೋಗಿದ್ದು ಮತ್ತು 1956ರಲ್ಲಿ ಕೊಡಗು ರಾಜ್ಯದ ಅಸ್ತಿತ್ವ ಅಂತ್ಯಗೊಂಡಿದ್ದು, ಕೊಡವ ಜನಾಂಗದ ಪಾಲಿಗೆ ಎರಡು ಹಂತದ ಗುರುತಿನ ನಷ್ಟವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭೂ ಪರಿವರ್ತನೆ ಕುರಿತು ಕಳವಳ
ಕರ್ನಾಟಕ ಭೂ ಕಂದಾಯ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆಗಳಿಗೆ ತಿದ್ದುಪಡಿ ತಂದು ವಾಣಿಜ್ಯ ಉದ್ದೇಶಗಳಿಗಾಗಿ ಭೂ ಪರಿವರ್ತನೆಗೆ ಅವಕಾಶ ನೀಡುತ್ತಿರುವುದರಿಂದ ಹೊರಗಿನ ಬಂಡವಾಳಶಾಹಿಗಳು ಕೊಡಗಿನಲ್ಲಿ ದೊಡ್ಡ ಪ್ರಮಾಣದ ಭೂಮಿಯನ್ನು ಖರೀದಿಸಿ ಮೆಗಾ ಟೌನ್ಶಿಪ್ಗಳು, ಬೃಹತ್ ರೆಸಾರ್ಟ್ಗಳು ಮತ್ತು ಲೇಔಟ್ಗಳನ್ನು ನಿರ್ಮಿಸುತ್ತಿದ್ದಾರೆ ಎಂದು ನಾಚಪ್ಪ ಕಳವಳ ವ್ಯಕ್ತಪಡಿಸಿದ್ದಾರೆ.
ಇಂತಹ ಬೆಳವಣಿಗೆಗಳು ಕಾವೇರಿ ನದಿಯ ಜಲಮೂಲಗಳು, ಕಾಫಿ ತೋಟಗಳು ಮತ್ತು ಕೃಷಿ ಪ್ರದೇಶಗಳ ಮೇಲೆ ಪರಿಣಾಮ ಬೀರುವುದರೊಂದಿಗೆ ಜನಸಂಖ್ಯೆಯ ಸ್ವರೂಪ, ಭೂಪ್ರದೇಶ ಹಾಗೂ ನಿತ್ಯಹರಿದ್ವರ್ಣ ಅರಣ್ಯ ಹೊದಿಕೆಯಲ್ಲಿಯೂ ಬದಲಾವಣೆಗೆ ಕಾರಣವಾಗುತ್ತಿವೆ. ಇದು ಸಂವಿಧಾನದ 51ಎ(ಜಿ) ವಿಧಿ ಮತ್ತು ವಿಶ್ವಸಂಸ್ಥೆಯ ಆದಿಮಸಂಜಾತ ಹಕ್ಕುಗಳ ಘೋಷಣೆಯ ಆಶಯಗಳಿಗೆ ವಿರುದ್ಧವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಕೊಡವ ಜನಾಂಗದ ಅಸ್ತಿತ್ವ, ಗುರುತು, ಭೂಮಿ, ಭಾಷೆ, ಸಾಂಸ್ಕೃತಿಕ ಪರಂಪರೆ, ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯವನ್ನು ಸಂರಕ್ಷಿಸುವ ಉದ್ದೇಶದಿಂದ ಈ ಜನಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕೊಡವಲ್ಯಾಂಡ್ ಮತ್ತು ಕೊಡವ ಗುರುತಿನ ರಕ್ಷಣೆಗಾಗಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನಾಚಪ್ಪ ಮನವಿ ಮಾಡಿದ್ದಾರೆ.
















