ಮಡಿಕೇರಿ, NEWS DESK ನ. 14: ಗಾಳಿಬೀಡು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ವರ್ಷ ಕಳೆದರೂ ಕಾಮಗಾರಿ ಆರಂಭವಾಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಶನಿವಾರ ಸುಮಾರು ಮೂರು ಗಂಟೆಗಳ ಕಾಲ ರಸ್ತೆ ತಡೆ ಪ್ರತಿಭಟನೆ ನಡೆಸಿದರು.
ಗಾಳಿಬೀಡು, ವಣಚಲು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ಮಂದಿ ಪಕ್ಷಾತೀತವಾಗಿ ಜಿಲ್ಲಾ ಪಂಚಾಯಿತಿ ಸಮೀಪದ ಗಾಳಿಬೀಡು ಜಂಕ್ಷನ್ನಲ್ಲಿ ಬೆಳಿಗ್ಗೆ 9.30ಕ್ಕೆ ಜಮಾಯಿಸಿ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.
ಮಡಿಕೇರಿಯಿಂದ ಕೇವಲ 8 ಕಿ.ಮೀ. ದೂರದಲ್ಲಿರುವ ಗಾಳಿಬೀಡು ರಸ್ತೆಯ ಸುಮಾರು 3.45 ಕಿ.ಮೀ. ಉದ್ದದ ಭಾಗ ಸಂಪೂರ್ಣ ಹದಗೆಟ್ಟಿದ್ದು, ವಿದ್ಯಾರ್ಥಿಗಳು ಸೇರಿದಂತೆ ನಿತ್ಯ ಸಂಚರಿಸುವ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಮಡಿಕೇರಿ-ಕಡಮಕಲ್ಲು-ಸುಬ್ರಮಣ್ಯ ರಸ್ತೆಯ 2ರಿಂದ 5.45ನೇ ಕಿ.ಮೀ.ವರೆಗಿನ 3.45 ಕಿ.ಮೀ. ರಸ್ತೆ ಅಭಿವೃದ್ಧಿಗೆ 3.50 ಕೋಟಿ ರೂ. ಅನುದಾನ ಮಂಜೂರಾಗಿತ್ತು. 2025ರ ನವೆಂಬರ್ 14ರಂದು ಶಾಸಕ ಡಾ. ಮಂತರ್ ಗೌಡ ಅವರು ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು. ಸೋಮವಾರಪೇಟೆ ತಾಲ್ಲೂಕಿನ ರಾಜೇಂದ್ರ ಎಂಬ ಗುತ್ತಿಗೆದಾರರಿಗೆ ಕಾಮಗಾರಿಯ ಜವಾಬ್ದಾರಿ ವಹಿಸಲಾಗಿತ್ತು. ಆದರೆ, ಇದುವರೆಗೆ ಕಾಮಗಾರಿ ಆರಂಭವಾಗಿರಲಿಲ್ಲ.
ಗುತ್ತಿಗೆ ರದ್ದು, ಹೊಸ ಟೆಂಡರ್ ಭರವಸೆ
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಪ್ರಭು ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಗುತ್ತಿಗೆ ಅವಧಿ ಮೇ 28ರಂದು ಮುಕ್ತಾಯಗೊಂಡಿದ್ದು, ಕಾಮಗಾರಿ ನಡೆಸದ ಹಿನ್ನೆಲೆಯಲ್ಲಿ ಗುತ್ತಿಗೆ ರದ್ದುಗೊಳಿಸಿ ಹೊಸ ಪ್ರಸ್ತಾವನೆ ಸಿದ್ಧಪಡಿಸಲಾಗುವುದು. ಡಿಸೆಂಬರ್ 14ರೊಳಗೆ ನೂತನ ಟೆಂಡರ್ ಕರೆದು ಮೂರು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಆದರೆ, ಈ ಭರವಸೆಗೆ ಒಪ್ಪದ ಗ್ರಾಮಸ್ಥರು, ಶಾಸಕರು ಸ್ಥಳಕ್ಕೆ ಆಗಮಿಸಿ ಕಾಮಗಾರಿ ಆರಂಭಿಸುವ ಬಗ್ಗೆ ಖಚಿತ ಭರವಸೆ ನೀಡಬೇಕೆಂದು ಪಟ್ಟು ಹಿಡಿದರು.
ಗ್ರಾಮಸ್ಥ ದಿಶಾಂತ್ ಮಾತನಾಡಿ, ಕುಂಡಾಮೇಸ್ತಿç ನೀರು ಹಾಗೂ ಗ್ರಾಮದ ರೆಸಾರ್ಟ್ಗಳಿಂದ ತೆರಿಗೆ ಆದಾಯ ಪಡೆಯುವ ವ್ಯವಸ್ಥೆ ಇದ್ದರೂ ಜನರ ಸಂಚಾರಕ್ಕೆ ಯೋಗ್ಯವಾದ ರಸ್ತೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲವೇ ಎಂದು ಪ್ರಶ್ನಿಸಿದರು. ಉಡುದೋಳಿರ ಗಿರೀಶ್ ಅವರು ರಸ್ತೆ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನದ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದರು. ಸುಭಾಷ್ ಆಳ್ವ, ಮನೋಜ್ ಬೋಪಯ್ಯ, ಜಯಂತಿ ಶೆಟ್ಟಿ, ಡೀನ್ ಬೋಪಣ್ಣ ಸೇರಿದಂತೆ ಹಲವರು ಕಾಮಗಾರಿಯನ್ನು ತಕ್ಷಣ ಆರಂಭಿಸುವಂತೆ ಒತ್ತಾಯಿಸಿದರು.
ಪೊಲೀಸರು ರಸ್ತೆ ತಡೆ ಹಿಂಪಡೆಯುವಂತೆ ಮನವಿ ಮಾಡಿದರೂ ಪ್ರತಿಭಟನಾಕಾರರು ಪಟ್ಟು ಸಡಿಲಿಸಲಿಲ್ಲ.
ನ.16ರಂದು ಜಂಟಿ ಸಭೆ
ಸುಮಾರು ಮೂರು ಗಂಟೆಗಳ ಪ್ರತಿಭಟನೆಯ ಬಳಿಕ ನವೆಂಬರ್ 16ರಂದು ಶಾಸಕರ ಸಮ್ಮುಖದಲ್ಲಿ ಸಭೆ ನಡೆಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಗುತ್ತಿಗೆದಾರರು, ಗ್ರಾಮಸ್ಥರು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಭಾಗವಹಿಸಲಿದ್ದು, ಹಾಲಿ ಗುತ್ತಿಗೆದಾರರ ಮೂಲಕವೇ ಎರಡು ತಿಂಗಳೊಳಗೆ ರಸ್ತೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಕಾರ್ಯಪಾಲಕ ಅಭಿಯಂತರ ಪ್ರಭು ಭರವಸೆ ನೀಡಿದರು. ಇದಕ್ಕೆ ಸಮ್ಮತಿಸಿದ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂಪಡೆದರು.
















