ನಾಪೋಕ್ಲು, NEWS DESK ನ.14: ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಮಡಿಕೇರಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಹೆಚ್ಐವಿ ಏಡ್ಸ್ ಅರಿವಿನ ಮಾಸಾಚರಣೆ–2026ರ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಯಿತು.
ಸ್ಪರ್ಧೆಯಲ್ಲಿ ನಾಪೋಕ್ಲುವಿನ ಕೆಪಿಎಸ್ ಶಾಲೆಯ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಗಳಿಸುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ಶಾಲೆಯ ವಿದ್ಯಾರ್ಥಿನಿಯರಾದ ಫಾತಿಮತುಲ್ ಅಫ್ರಿನಾ ಬಿ.ಜೆ. ಮತ್ತು ಸಿಯಾನ ಸಿ.ಹೆಚ್. ಅವರ ತಂಡ 37 ಅಂಕಗಳನ್ನು ಗಳಿಸಿ ಪ್ರಥಮ ಬಹುಮಾನಕ್ಕೆ ಭಾಜನವಾಯಿತು. ವಿಜೇತ ತಂಡಕ್ಕೆ ರೂ.6,000 ನಗದು ಹಾಗೂ ಪ್ರಮಾಣಪತ್ರ ವಿತರಿಸಲಾಯಿತು.
ಮಡಿಕೇರಿಯ ಜನರಲ್ ತಿಮ್ಮಯ್ಯ ಶಾಲೆಯ ಎನ್.ಸಿ. ಕಾವೇರಪ್ಪ ಮತ್ತು ರಿಷಿತ್ ಕೆ.ಎಸ್. ಅವರ ತಂಡ 27 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದು ರೂ.5,000 ನಗದು ಹಾಗೂ ಪ್ರಮಾಣಪತ್ರ ಸ್ವೀಕರಿಸಿತು. ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಸಿಂಚನ ಪಿ.ಎಸ್. ಮತ್ತು ಪ್ರಾರ್ಥನಾ ಪೊನ್ನಮ್ಮ ಅವರ ತಂಡ 26 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿತು.
ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಪ್ರೌಢಶಾಲೆಗಳ ಒಟ್ಟು 12 ತಂಡಗಳು ಭಾಗವಹಿಸಿದ್ದವು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಸನತ್ ಕುಮಾರ್, ಯುವಜನರಲ್ಲಿ ಹೆಚ್ಐವಿ ಏಡ್ಸ್ ಕುರಿತಂತೆ ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯದ ಎಲ್ಲಾ ಭಾಗಗಳಲ್ಲಿ ಇಂತಹ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಆರೋಗ್ಯವಂತ ಯುವ ಸಮುದಾಯದಿಂದ ಸುಭದ್ರ ದೇಶ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕಿ ಸುನಿತಾ ಮುತ್ತಣ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಪಿಒ ಮಲ್ಲೇಶ್, ಮಡಿಕೇರಿ ಜಿಲ್ಲಾ ಆಸ್ಪತ್ರೆಯ ಆಪ್ತ ಸಮಾಲೋಚಕರಾದ ಅಶ್ವಿತ, ಯಮುನಾ, ಅರುಣ್ ಕುಮಾರ್ ಹಾಗೂ ಸಂಯೋಜಕ ಟೈನಿ ಉಪಸ್ಥಿತರಿದ್ದರು.
ಗಣಿತ ಶಿಕ್ಷಕ ಸಿ.ಎಸ್. ಸುರೇಶ್ ಅವರು ರಸಪ್ರಶ್ನೆ ಸ್ಪರ್ಧೆಯ ನಿರ್ವಾಹಕರಾಗಿ ಕಾರ್ಯನಿರ್ವಹಿಸಿದರು.
















