ಮಡಿಕೇರಿ NEWS DESK ನ.15 : ಮಕ್ಕಳ ದಿನಾಚರಣೆಯ ಅಂಗವಾಗಿ SS ಆಸ್ಪತ್ರೆ ಮತ್ತು RK LABS ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಶಾಲಾ ಮಕ್ಕಳಿಗಾಗಿ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. LKG ಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಕೊಡಗು ಜಿಲ್ಲೆಯ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮಲ್ಲಿರುವ ಕಲಾತ್ಮಕ ಪ್ರತಿಭೆಯನ್ನು ಪ್ರದರ್ಶಿಸಬೇಕೆಂದು SS ಆಸ್ಪತ್ರೆ, ಮಹದೇವಪೇಟೆ, ಮಡಿಕೇರಿಯ ವ್ಯವಸ್ಥಾಪಕ ನಿರ್ದೇಶಕಿ ಡಾ. ಶಿಲ್ಪಾ ಸತೀಶ್ ಮನವಿ ಮಾಡಿದ್ದಾರೆ. ಸ್ಪರ್ಧೆಯ ಮೊದಲ ವಿಭಾಗದಲ್ಲಿ LKG, UKG ಹಾಗೂ 1ನೇ ತರಗತಿಯ ವಿದ್ಯಾರ್ಥಿಗಳಿಗೆ ‘ನಾನು ಮತ್ತು ನನ್ನ ತಾಯಿ’ (My Mother and Me) ಎಂಬ ವಿಷಯ ನೀಡಲಾಗಿದೆ. ಎರಡನೇ ವಿಭಾಗದಲ್ಲಿ 2ರಿಂದ 6ನೇ ತರಗತಿಯ ವಿದ್ಯಾರ್ಥಿಗಳಿಗೆ ‘ಮೀಸಲು ಅರಣ್ಯ’ (Reserve Forest) ಹಾಗೂ ಮೂರನೇ ವಿಭಾಗದಲ್ಲಿ 7ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ‘ವಿದ್ಯಾರ್ಥಿ ಜೀವನದಲ್ಲಿ ಸಮಯದ ಪ್ರಾಮುಖ್ಯತೆ’ (Importance of Time in Students’ Life) ಎಂಬ ವಿಷಯದಡಿ ಸ್ಪರ್ಧೆ ನಡೆಯಲಿದೆ. ಮೂರು ವಿಭಾಗಗಳಲ್ಲಿಯೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗುವುದು. ವಿಜೇತರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಆಕರ್ಷಕ ಟ್ರೋಫಿಗಳನ್ನು ನೀಡಿ ಗೌರವಿಸಲಾಗುತ್ತದೆ. *ನ.22ರಂದು ಸ್ಪರ್ಧೆ* ಚಿತ್ರಕಲಾ ಸ್ಪರ್ಧೆಯು ನವೆಂಬರ್ 22ರ ಭಾನುವಾರದಂದು ಮಡಿಕೇರಿಯ ಮಹದೇವಪೇಟೆಯ ALG ಕ್ರೆಸೆಂಟ್ ಶಾಲಾ ಆವರಣದಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 8.30ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದ್ದು, ಬೆಳಗ್ಗೆ 9.30ರಿಂದ 11.30ರವರೆಗೆ ಸ್ಪರ್ಧೆ ನಡೆಯಲಿದೆ. ಬೆಳಗ್ಗೆ 11.45ಕ್ಕೆ ಪ್ರಶಸ್ತಿ ಪ್ರದಾನ ಹಾಗೂ ಸಭಾ ಕಾರ್ಯಕ್ರಮ ಜರುಗಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು ಸ್ಥಳದಲ್ಲಿಯೇ ನೋಂದಣಿ ಮಾಡಿಕೊಂಡು ಪಾಲ್ಗೊಳ್ಳಬಹುದಾಗಿದೆ. ಸ್ಪರ್ಧೆ ಮುಕ್ತಾಯಗೊಂಡ ಬಳಿಕ ತೀರ್ಪುಗಾರರು ವಿಜೇತರನ್ನು ಆಯ್ಕೆ ಮಾಡಲಿದ್ದಾರೆ. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ಹಾಗೂ ಉದ್ಘಾಟನೆಯನ್ನು ಕೊಡ್ಲಿಪೇಟೆಯ ಶ್ರೀ ಕ್ಷೇತ್ರ ಕಲ್ಲುಮಠದ ಪೂಜ್ಯ ಶ್ರೀ ಶ್ರೀ ಮಹಾಂತ ಸ್ವಾಮಿಗಳು ವಹಿಸಲಿದ್ದಾರೆ. SS ಆಸ್ಪತ್ರೆಯ ಮಾರ್ಗದರ್ಶಕರು ಹಾಗೂ ಹಿರಿಯರಾದ ಎಚ್.ಎಂ. ನಂದಕುಮಾರ್, ಡಾ. ಎಚ್.ವಿ. ದೇವದಾಸ್, ನಗರಸಭೆಯ ಮಾಜಿ ಸದಸ್ಯರಾದ ಮಹೇಶ್ ಜೈನಿ, ಕಲಾವತಿ, ಸವಿತಾ ರಾಕೇಶ್ ಹಾಗೂ ಆಡಿಟರ್ ಹನೀಫ್ ಅವರು ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ. ಮಡಿಕೇರಿಯ ಮೃಣಾಲಿನಿ ಚಿನ್ನಪ್ಪ ಅವರು ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. *ರಕ್ತದಾನ ಸೇವಕರಿಗೆ ಸನ್ಮಾನ* ಇದೇ ಸಂದರ್ಭದಲ್ಲಿ ಕೊಡಗು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ರಕ್ತದಾನ ಹಾಗೂ ರಕ್ತದಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಸಮಾಜಸೇವೆ ಸಲ್ಲಿಸುತ್ತಿರುವ ಸಮೀರ್ ಮತ್ತು ಖಲೀಲ್ ಅವರನ್ನು SS ಆಸ್ಪತ್ರೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಗುವುದು ಎಂದು ಡಾ. ಶಿಲ್ಪಾ ಸತೀಶ್ ತಿಳಿಸಿದ್ದಾರೆ. ಕೊಡಗಿನ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವುದರೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು SS ಆಸ್ಪತ್ರೆ ಮತ್ತು RK LABS ಕೋರಿದೆ.
















