ಮಡಿಕೇರಿ, NEWS DESK ನ.16: ಮೂರ್ನಾಡಿನಲ್ಲಿ ಕೊಯವ ಸಮಾಜದ 21ನೇ ಮಹಾಸಭೆ ಹಾಗೂ ಕ್ರೀಡಾಕೂಟವನ್ನು ಸಂಭ್ರಮದಿಂದ ಆಯೋಜಿಸಲಾಯಿತು. ಸಮಾರಂಭದಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸುವುದರ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಯವ ಸಮಾಜದ ಅಧ್ಯಕ್ಷ ಜಿಲ್ಲಂಡ ದಾದು ಮಾದಪ್ಪ, ಸಮಾಜ ಬಾಂಧವರು ವರ್ಷಕ್ಕೊಮ್ಮೆಯಾದರೂ ಒಂದೆಡೆ ಸೇರಿ ವಿಚಾರ ವಿನಿಮಯ ಮಾಡಿಕೊಳ್ಳುವುದರಿಂದ ಪರಸ್ಪರ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುತ್ತದೆ ಎಂದರು.
ಮೂರ್ನಾಡಿನಲ್ಲಿ ಸಮಾಜದ ವತಿಯಿಂದ ಈಗಾಗಲೇ ಜಾಗ ಖರೀದಿಸಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಮಡಿಕೇರಿ ಕ್ಷೇತ್ರದ ಶಾಸಕರು 5 ಲಕ್ಷ ರೂ. ಅನುದಾನ ಮಂಜೂರು ಮಾಡಿದ್ದು, ಭೂಮಿಪೂಜೆಯೂ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ, ಸಂಸದರು ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಮೂಲಕ ಹೆಚ್ಚಿನ ಅನುದಾನ ಪಡೆಯಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಸಮಾಜದ ಉಪಾಧ್ಯಕ್ಷ ಮೇಚಿರ ಡಾ. ಸುಭಾಷ್ ನಾಣಯ್ಯ ಮಾತನಾಡಿ, ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳ ಪ್ರವರ್ಗ ‘ಎ’ ಅಡಿಯಲ್ಲಿ ದೊರೆಯುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶಿಕ್ಷಣ, ಉದ್ಯೋಗ ಹಾಗೂ ವಿದ್ಯಾರ್ಥಿವೇತನದ ಪ್ರಯೋಜನ ಪಡೆಯಬೇಕು. ಎಲ್ಲಿಯೇ ಉದ್ಯೋಗ ನಿರ್ವಹಿಸಿದರೂ ಕೊಡವ ಭಾಷೆ ಮತ್ತು ಸಂಸ್ಕೃತಿಯನ್ನು ಮರೆಯಬಾರದು ಎಂದು ಸಲಹೆ ನೀಡಿದರು.
ಗೌರವ ಕಾರ್ಯದರ್ಶಿ ತೋರೆರ ಕಾಶಿ ಕಾರ್ಯಪ್ಪ ಅವರು ಸಮಾಜದ ಕಟ್ಟಡ ನಿರ್ಮಾಣದ ಪ್ರಗತಿಯ ಕುರಿತು ಮಾಹಿತಿ ನೀಡಿ, ಕಟ್ಟಡ ಕಾಮಗಾರಿಗೆ ಸಮಾಜ ಬಾಂಧವರು ಉದಾರವಾಗಿ ಧನಸಹಾಯ ನೀಡುವಂತೆ ಮನವಿ ಮಾಡಿದರು.
ಲೇಖಕಿ, ನಟಿ ಹಾಗೂ ಸಿನಿಮಾ ನಿರ್ಮಾಪಕಿ ಈರಮಂಡ ಹರಿಣಿ ವಿಜಯ್ ಮಾತನಾಡಿ, ವಿಶಿಷ್ಟ ಕೊಡವ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಯುವಜನತೆ ಪ್ರಮುಖ ಪಾತ್ರ ವಹಿಸಬೇಕು. ಉಮ್ಮತ್ತಾಟ್ ಮತ್ತು ಬೊಳಕಾಟ್ ನೃತ್ಯಗಳನ್ನು ಕಲಿಸಲು ಸಿದ್ಧರಿದ್ದು, ಆಸಕ್ತ ಯುವಕ-ಯುವತಿಯರು ಹೆಸರು ನೋಂದಾಯಿಸಿಕೊಳ್ಳಬಹುದು ಎಂದರು.
ಇದೇ ಸಂದರ್ಭ ನಿವೃತ್ತ ಯೋಧ ಮುಕ್ಕಾಟಿರ ನಾಣಯ್ಯ ಹಾಗೂ ಆರೋಗ್ಯ ಇಲಾಖೆಯ ನಿವೃತ್ತ ನೌಕರರಾದ ನೇಂದುಮಂಡ ಸುಜ್ಯೋತಿ ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಕಳೆದ ಮಹಾಸಭೆಯ ವರದಿಗೆ ಅಂಗೀಕಾರ ಪಡೆಯಲಾಯಿತು. ಗೌರವ ಕಾರ್ಯದರ್ಶಿ ತೋರೆರ ಕಾಶಿ ಕಾರ್ಯಪ್ಪ ಲೆಕ್ಕಪರಿಶೋಧನಾ ವರದಿ ಮಂಡಿಸಿದರು. ಆಡಳಿತ ಮಂಡಳಿಯ ವರದಿಯನ್ನು ಪುದಿಯೊಕ್ಕಡ ರೆಮಿತ ಸುಜಯ್ ವಾಚಿಸಿದರು.
10ನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ ತೋರೆರ ಮೋನಿಶ್ ಮುತ್ತಣ್ಣ ಹಾಗೂ ಕಳ್ಳಿರ ಚೋಂದಮ್ಮ, ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಮಲ್ಲಂಡ ಇಳಾ ತಂಗಮ್ಮ ಮತ್ತು ಪದವಿ ವಿಭಾಗದಲ್ಲಿ ಸಾಧನೆ ಮಾಡಿದ ಈರಮಂಡ ಕೇಸರಿ ಭೋಜಮ್ಮ, ಸ್ನಾತಕೋತರ ಪದವಿಯಲ್ಲಿ ಉತ್ತಮ ಅಂಕ ಪಡೆದ ಕಾಞಂಗಡ ಜಗತ್ ಸುಬ್ಬಯ್ಯ ಹಾಗೂ ಕಳ್ಳಿರ ವಂಶಿ ಮೊನ್ನಪ್ಪ ಐರ್ಲ್ಯಾಂಡ್ ಡಬ್ಲ್ಯೂ ಇನ್ ಯುನಿವರ್ಸಿಟಿಯಲ್ಲಿ ಎಐ ಇನ್ ಎಂ ಎಸ್ ಸಿಯಲ್ಲಿ ಉತ್ತಮ ಅಂಕ ಗಳಿಸಿ ತೇರ್ಗಡೆ ಗೊಂಡಿದ್ದಾರೆ ಅವರಿಗೆ ಸಮಾಜದ ದತ್ತಿನಿಧಿಯಿಂದ ಪ್ರೋತ್ಸಾಹಧನ ಹಾಗೂ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.
ಕ್ರೀಡಾಕೂಟ
ಮಧ್ಯಾಹ್ನ ಮೂರ್ನಾಡಿನ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ನಡೆದ ಕ್ರೀಡಾಕೂಟವನ್ನು ಸಿಆರ್ಪಿಎಫ್ ಅಧಿಕಾರಿ ಅಮ್ಮಚಾಳಿಯಂಡ ಮುತ್ತಣ್ಣ ಉದ್ಘಾಟಿಸಿದರು. ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಕೊಡವ ಪಾಟ್ ಮತ್ತು ವಾಲಗತ್ತಾಟ್ ಸ್ಪರ್ಧೆಗಳು ವಿಶೇಷ ಗಮನ ಸೆಳೆದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸುಬ್ಬಯ್ಯ ನಿರೂಪಿಸಿ, ಮೇಚಿರ ರವಿಶಂಕರ್ ಪ್ರಾರ್ಥಿಸಿ, ಕಳ್ಳಿರ ನಾಣಯ್ಯ ವಂದಿಸಿದರು. ಮಲ್ಲಂಡ ಮಹೇಶ್, ಈರಮಂಡ ವಿಜಯ್, ಮೇಚಿರ ಹರೀಶ್, ನೆಂಡುಮಂಡ ಗೀತಾ ನಾಣಯ್ಯ, ಈರಮಂಡ ದಮಯಂತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
















