ಸುಂಟಿಕೊಪ್ಪ, NEWS DESK ನ.17: ಕೆದಕಲ್ ನೇಗಾದಳು ಗ್ರಾಮದಲ್ಲಿ ಕಾಡುಕೋಣವೊಂದು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ, ಘಟನೆಯ ಸತ್ಯಾಸತ್ಯತೆಯನ್ನು ಸಾರ್ವಜನಿಕರಿಗೆ ತಿಳಿಸಬೇಕೆಂದು ಸುಂಟಿಕೊಪ್ಪ ಹೋಬಳಿ ರೈತ ಸಂಘ ಆಗ್ರಹಿಸಿದೆ.
ಮಂಗಳವಾರ ಕೆದಕಲ್ ನೇಗಾದಳು ಗ್ರಾಮದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಮಾತುಕತೆಯ ಸಂದರ್ಭದಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಹೇರೂರು ಈ ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವನ್ಯಜೀವಿಗಳ ಹತ್ಯೆಯನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಅರಣ್ಯ ಇಲಾಖೆಯು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರು ಕಂಡುಬಂದಲ್ಲಿ ಅವರಿಗೆ ಸೂಕ್ತ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಅಧ್ಯಕ್ಷ ಎನ್.ಸಿ. ಕ್ಲೈವ್ ಪೊನ್ನಪ್ಪ ಮಾತನಾಡಿ, ಪ್ರಸ್ತುತ ಕಾಫಿ ಕೊಯ್ಲಿನ ಸಮಯವಾಗಿದ್ದು, ಪ್ರತಿನಿತ್ಯ ಕಾಡುಕೋಣಗಳು ತೋಟಗಳಿಗೆ ಬರುತ್ತಿವೆ. ಇದರಿಂದ ರೈತರು ಹಾಗೂ ಕಾರ್ಮಿಕರಲ್ಲಿ ಆತಂಕ ಮತ್ತು ಭಯದ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡುಕೋಣಗಳು ತೋಟಗಳಿಗೆ ಬಾರದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಅವುಗಳನ್ನು ಸುರಕ್ಷಿತವಾಗಿ ಕಾಡಿಗೆ ಮರಳಿಸುವ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ಕ್ಲೈವ್ ಪೊನ್ನಪ್ಪ, ಪದಾಧಿಕಾರಿಗಳಾದ ದಾಸಂಡ ರಮೇಶ್ ಚೆಂಗಪ್ಪ, ಕುಂಜಿಲನ ಮಂಜುನಾಥ್, ಮಾಗಲು ವಸಂತ, ಉದಯ, ಸಂಜು ಪೊನ್ನಪ್ಪ, ಸೋಮಯ್ಯ, ಜಗದೀಶ್, ಗೋಪಿನಾಥ್, ಪುಲ್ಲೇರ ವಸಂತ, ವೆಂಕಪ್ಪ ಹಾಗೂ ಸತೀಶ್ ಉಪಸ್ಥಿತರಿದ್ದರು.
















