ಸಿದ್ದಾಪುರ, NEWS DESK ನ.17: ಸಿದ್ದಾಪುರದಿಂದ ಪಾಲಿಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಇಂದು ಸಿದ್ದಾಪುರದಲ್ಲಿ ಭೂಮಿಪೂಜೆ ನೆರವೇರಿಸಲಾಯಿತು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಭೂಮಿಪೂಜೆ ನೆರವೇರಿಸಿ ಮಾತನಾಡಿ, ಈ ಬಾರಿ ಸುರಿದ ಭಾರೀ ಮಳೆಯಿಂದಾಗಿ ರಸ್ತೆ ಹದಗೆಟ್ಟಿದ್ದು, ಪ್ರತಿನಿತ್ಯ ಸಾವಿರಾರು ಜನರು ಸಂಚರಿಸುವ ಈ ರಸ್ತೆಯನ್ನು ಸುಸಜ್ಜಿತಗೊಳಿಸುವ ಉದ್ದೇಶದಿಂದ ವಿಶೇಷ ಅನುದಾನದಡಿ ₹2.25 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಕಾಮಗಾರಿಯನ್ನು ಗುತ್ತಿಗೆದಾರರು ಶೀಘ್ರವಾಗಿ ಹಾಗೂ ಉತ್ತಮ ಗುಣಮಟ್ಟದಲ್ಲಿ ಪೂರ್ಣಗೊಳಿಸಬೇಕು. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರೂ ಗುಣಮಟ್ಟದ ಬಗ್ಗೆ ಗಮನಹರಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಾರ್ವಜನಿಕರ ಸಹಕಾರದೊಂದಿಗೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಲಿದ್ದು, ಹಂತ ಹಂತವಾಗಿ ಕ್ಷೇತ್ರದ ಎಲ್ಲಾ ರಸ್ತೆಗಳನ್ನು ಉತ್ತಮಪಡಿಸುವುದು ತಮ್ಮ ಪ್ರಮುಖ ಧ್ಯೇಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ವಲಯ ಅಧ್ಯಕ್ಷ ಪ್ರತೀಶ್, ಕಾವೇರಿ ಜಲಾನಯನ ಮಂಡಳಿಯ ನಿರ್ದೇಶಕ ಸೂರಜ್ ಹೊಸೂರು, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪಿ.ವಿ. ಜಾನ್ಸನ್, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹನೀಫ್, ತಾಲೂಕು ಘಟಕದ ಅಧ್ಯಕ್ಷ ರಫೀಕ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಬಿಜೋಯ್ ಸೇರಿದಂತೆ ಮೊಹಮ್ಮದ್ ಆಲೀ, ಅಬ್ದುಲ್ ಸುಕೂರ್, ಪಳನಿ, ಚಿನ್ನಮ್ಮ, ಸತೀಶ್, ಆಪ್ರು ರವೀಂದ್ರ, ಚೆಕು, ಅನಿಲ್, ವೆಂಕಟೇಶ್, ಕುಂಡಚ್ಚಿರ ಮಂಜು ದೇವಯ್ಯ, ಬಶೀರ್, ನೌಶಾದ್, ಜಾಫರ್, ರವಿ, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.
















