ಸಿದ್ದಾಪುರ, NEWS DESK ನ.17: ಸಿದ್ದಾಪುರ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಆಟೋ ತಂಗುದಾಣಕ್ಕೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ಅನುದಾನದಲ್ಲಿ ಇಂದು ಭೂಮಿಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು, ಸಿದ್ದಾಪುರ ಭಾಗದ ಬಹುತೇಕ ಜನರು ದಿನಗೂಲಿ ಕೆಲಸಕ್ಕೆ ತೆರಳುವವರಾಗಿದ್ದು, ಅವರ ಸಂಚಾರಕ್ಕೆ ಆಟೋರಿಕ್ಷಾಗಳೇ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿವೆ. ಆಟೋರಿಕ್ಷಾ ಮಾಲೀಕರು ಹಾಗೂ ಚಾಲಕರು ತಮ್ಮ ದುಡಿಮೆಯ ಜೊತೆಗೆ ಜನಸೇವೆಯ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಆಟೋರಿಕ್ಷಾ ಚಾಲಕರು ಮತ್ತು ಮಾಲೀಕರಿಗೆ ಸುಸಜ್ಜಿತವಾದ ನಿಲ್ದಾಣವನ್ನು ನಿರ್ಮಿಸಿಕೊಡುವುದು ತಮ್ಮ ಉದ್ದೇಶವಾಗಿದ್ದು, ಸಾರ್ವಜನಿಕರು ಹಾಗೂ ಆಟೋ ಚಾಲಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಜನರನ್ನು ಸುರಕ್ಷಿತವಾಗಿ ಗಮ್ಯಸ್ಥಾನಗಳಿಗೆ ತಲುಪಿಸುವುದರ ಜೊತೆಗೆ, ವಿವಿಧ ಸಂದರ್ಭಗಳಲ್ಲಿ ಆಟೋ ಚಾಲಕರು ಸಾಮಾಜಿಕ ಕಳಕಳಿಯನ್ನೂ ಪ್ರದರ್ಶಿಸುತ್ತಿದ್ದಾರೆ. ಇಂತಹ ಸೇವಾ ಮನೋಭಾವದ ಚಾಲಕರಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುವುದು ಸಂತಸದ ಹಾಗೂ ಹೆಮ್ಮೆಯ ವಿಷಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಬ್ಲಾಕ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ವಲಯ ಅಧ್ಯಕ್ಷರಾದ ಪ್ರತೀಶ್, ಕಾವೇರಿ ಜಲಾನಯನ ಮಂಡಳಿ ನಿರ್ದೇಶಕ ಸೂರಜ್ ಹೊಸೂರು, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪಿ.ವಿ. ಜಾನ್ಸನ್, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹನೀಫ್, ತಾಲೂಕು ಘಟಕದ ಅಧ್ಯಕ್ಷ ರಫೀಕ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಬಿಜೋಯ್ ಸೇರಿದಂತೆ ಅಬ್ದುಲ್ ಸುಕೂರ್, ಪಳನಿ, ಚಿನ್ನಮ್ಮ, ಸತೀಶ್, ಆಪ್ರು ರವೀಂದ್ರ, ಚೆಕು, ಅನಿಲ್, ವೆಂಕಟೇಶ್, ಕುಂಡಚ್ಚಿರ ಮಂಜು ದೇವಯ್ಯ, ಬಶೀರ್, ನೌಶಾದ್, ಜಾಫರ್, ರವಿ, ಆಟೋ ಚಾಲಕರ ಸಂಘದ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.
















