ಮಡಿಕೇರಿ, NEWS DESK ನ.18: ಕೊಡವ ಸಮುದಾಯದ ಸಾಂಪ್ರದಾಯಿಕ ಆಚರಣೆ, ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿರುವ ಮಡಿಕೇರಿ ಕೊಡವ ಸಮಾಜದ ಸುಮಾರು 150 ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ಕೋಲ್ಮಂದ್ ಅನ್ನು ₹19 ಲಕ್ಷ ವೆಚ್ಚದಲ್ಲಿ ಸಂಪೂರ್ಣವಾಗಿ ನವೀಕರಿಸಲಾಗಿದೆ. ನವೀಕರಣಗೊಂಡ ಕೋಲ್ಮಂದ್ನ ಉದ್ಘಾಟನಾ ಸಮಾರಂಭ ನವೆಂಬರ್ 21ರಂದು ಸಂಜೆ 4 ಗಂಟೆಗೆ ನಡೆಯಲಿದೆ ಎಂದು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ. ಮುತ್ತಪ್ಪ ತಿಳಿಸಿದ್ದಾರೆ.
ಮಡಿಕೇರಿಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಲ್ ತಿಮ್ಮಯ್ಯ ಕ್ರೀಡಾಂಗಣದ ಸಮೀಪವಿರುವ ಕೊಡವ ಸಮಾಜಕ್ಕೆ ಸೇರಿದ ಸುಮಾರು 30 ಸೆಂಟ್ಸ್ ವಿಸ್ತೀರ್ಣದ ಜಾಗವನ್ನು ಸರ್ಕಾರವು ಹಿಂದೆಯೇ ಸಮಾಜಕ್ಕೆ ಮಂಜೂರು ಮಾಡಿತ್ತು. ಈ ಸ್ಥಳವನ್ನು ಪುತ್ತರಿ ಹಬ್ಬದ ಸಾಂಪ್ರದಾಯಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದರು.
ಕೋಲ್ಮಂದ್ ಪ್ರದೇಶವನ್ನು ಸ್ವಚ್ಛಗೊಳಿಸಿ, ಸುತ್ತಲೂ ಬೇಲಿ ನಿರ್ಮಿಸಿ, ಸಮತಟ್ಟು ಮಾಡುವ ಮೂಲಕ ಸುಸಜ್ಜಿತಗೊಳಿಸಲಾಗಿದೆ. ಈ ಹಿಂದೆ ಮಂದ್ನಲ್ಲಿದ್ದ ಬೃಹತ್ ಅತ್ತಿ ಮರವು 2025ರ ಜುಲೈ 7ರಂದು ಸುರಿದ ಭಾರೀ ಮಳೆಗೆ ನೆಲಕ್ಕುರುಳಿತ್ತು. ಅದೇ ಸ್ಥಳದಲ್ಲಿ ಹೊಸ ಅಶ್ವತ್ಥ ಗಿಡವನ್ನು ನೆಟ್ಟು ಬೆಳೆಸಲಾಗುತ್ತಿದ್ದು, ಮಂದ್ನ ಪರಂಪರೆಯನ್ನು ಮುಂದುವರಿಸುವ ಸಂಕೇತವಾಗಿ ಅದು ಬೆಳೆಯುತ್ತಿದೆ ಎಂದು ತಿಳಿಸಿದರು.
ಪ್ರತಿವರ್ಷ ಪುತ್ತರಿ ಹಬ್ಬದ ನಂತರ ಮಡಿಕೇರಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಕೊಡವ ಬಾಂಧವರು ಇಲ್ಲಿ ಸಾಂಪ್ರದಾಯಿಕ ಪುತ್ತರಿ ಕೋಲಾಟವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಪುತ್ತರಿ ಹಬ್ಬಕ್ಕೆ ಮೂರು ದಿನಗಳ ಮುಂಚಿತವಾಗಿ ಕೋಲಾಟದ ತರಬೇತಿ ನೀಡುವ ‘ಈಡ್’ ಕಾರ್ಯಕ್ರಮವನ್ನೂ ಇದೇ ಮಂದ್ನಲ್ಲಿ ಆಯೋಜಿಸಲಾಗುತ್ತದೆ. ಈ ಮೂಲಕ ಕೊಡವ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದರು.
ನ.21ರಂದು ಗಣ್ಯರಿಂದ ಉದ್ಘಾಟನೆ
ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ. ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಅವರು ಕೋಲ್ಮಂದ್ ಉದ್ಘಾಟಿಸಲಿದ್ದಾರೆ. ಕೊಡವ ಸಮಾಜಗಳ ಒಕ್ಕೂಟ, ಬಾಳುಗೋಡು ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರು ನಾಮಫಲಕ ಅನಾವರಣಗೊಳಿಸಲಿದ್ದಾರೆ.
ಸಭಾ ಕಾರ್ಯಕ್ರಮವನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಲಿದ್ದು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜನಿಕಂಡ ಮಹೇಶ್ ನಾಚಯ್ಯ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಮಾಜಿ ಸಚಿವ ಮಂಡೇಪಂಡ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ ಹಾಗೂ ಮಂಡೇಪಂಡ ಸುನಿಲ್ ಸುಬ್ರಮಣಿ, ಕೊಡಗು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ, ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ ಯು. ನಾಚಪ್ಪ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಇದಲ್ಲದೆ ಯುಕೋ ಸಂಘಟನೆ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಜಭೂಮಿ ಟ್ರಸ್ಟ್ ಅಧ್ಯಕ್ಷ ಚೊಟ್ಟೇಕ್ಮಾಡ ರಾಜೀವ್ ಬೋಪಯ್ಯ, ಕನೆಕ್ಟಿಂಗ್ ಕೊಡವಾಸ್ ಸಂಚಾಲಕ ಶಾಂತೆಯಂಡ ನಿರನ್ ನಾಚಪ್ಪ, ಕೊಡಗು ಏಕೀಕರಣ ರಂಗದ ಅಜ್ಜಿನಂಡ ತಮ್ಮು ಪೂವಯ್ಯ, ಅಮ್ಮ ಕೊಡವ ಟ್ರಸ್ಟ್ ಅಧ್ಯಕ್ಷ ಮುದ್ದಂಡ ಬಿ. ದೇವಯ್ಯ, ಕೊಡವ ಮಕ್ಕಡ ಕೂಟ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಕೊಡವಾಮೆ ಕೊಂಡಾಟ ಸಂಚಾಲಕ ಚಾಮೇರ ದಿನೇಶ್, ಕೊಡವ ವಿದ್ಯಾನಿಧಿ ಉಪಾಧ್ಯಕ್ಷೆ ಕೊಡಂದೆರ ಸರೋಜಿ ಪೂವಣ್ಣ, ವೇಕ್ ಸಂಘಟನೆ ಅಧ್ಯಕ್ಷ ಕುಂಡೋಳಂಡ ದಿನೇಶ್ ಕಾರ್ಯಪ್ಪ, ಕೊಡವ ಸಮಾಜ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ, ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತ ಬೊಳ್ಳಪ್ಪ, ಕೊಡವ ಸಮಾಜದ ಮಾಜಿ ಅಧ್ಯಕ್ಷರಾದ ಕೊಂಗಂಡ ಎಸ್. ದೇವಯ್ಯ ಹಾಗೂ ಮೂವೇರ ಶಂಭು ಸುಬ್ಬಯ್ಯ ಮತ್ತು ಆದಿ ಬ್ರಹ್ಮಗಿರಿ ವಾರಪತ್ರಿಕೆಯ ಸಂಪಾದಕ ಡಾ. ಉಳ್ಳಿಯಡ ಎಂ. ಪೂವಯ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ವಿವಿಧ ಕೊಡವ ಸಮಾಜಗಳ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು, ಮಡಿಕೇರಿಯ ವಿವಿಧ ಕೊಡವ ಕೇರಿಗಳ ಅಧ್ಯಕ್ಷರು, ಕೊಡವ ಸಮಾಜದ ಸದಸ್ಯರು ಮತ್ತು ಸಮುದಾಯದ ಪ್ರಮುಖರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮುತ್ತಪ್ಪ ಮಾಹಿತಿ ನೀಡಿದರು.
ನ.23ರವರೆಗೆ ಸಾಂಪ್ರದಾಯಿಕ ‘ಈಡ್’ ಕಾರ್ಯಕ್ರಮ
ನವೆಂಬರ್ 21ರಂದು ಸಂಜೆ 6.30ಕ್ಕೆ ಸಾಂಪ್ರದಾಯಿಕ ಪುತ್ತರಿ ಕೋಲಾಟದ ‘ಈಡ್’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಈ ಕಾರ್ಯಕ್ರಮ ನವೆಂಬರ್ 23ರವರೆಗೆ ಮುಂದುವರಿಯಲಿದೆ.
ಕೊಡವ ಸಮುದಾಯದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ನವೀಕರಣಗೊಂಡಿರುವ ಕೋಲ್ಮಂದ್ ಮುಂದಿನ ಪೀಳಿಗೆಗೂ ಅಮೂಲ್ಯ ಸಾಂಸ್ಕೃತಿಕ ಕೇಂದ್ರವಾಗಿ ರೂಪುಗೊಳ್ಳಲಿದೆ ಎಂದು ಮಂಡುವಂಡ ಪಿ. ಮುತ್ತಪ್ಪ ಆಶಯ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಕೊಡವ ಸಮಾಜದ ಉಪಾಧ್ಯಕ್ಷ ಕೇಕಡ ಎ. ದೇವಯ್ಯ, ಗೌರವ ಕಾರ್ಯದರ್ಶಿ ಬೊಪ್ಪಂಡ ಸರಳ ಕರುಂಬಯ್ಯ, ಜಂಟಿ ಕಾರ್ಯದರ್ಶಿ ನಂದಿನೆರವಂಡ ಎಂ. ದಿನೇಶ್ ಹಾಗೂ ನಿರ್ದೇಶಕರಾದ ಶಾಂತೆಯಂಡ ವಿಶಾಲ್ ಕಾರ್ಯಪ್ಪ ಮತ್ತು ಕಾಳಚಂಡ ಎಂ. ಅಪ್ಪಣ್ಣ ಉಪಸ್ಥಿತರಿದ್ದರು.
















