ಮಡಿಕೇರಿ, NEWS DESK ನ.18: ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ರುದ್ರುಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಈಶ್ವರಿ ಬಾಡಗ ಸಹಕಾರ ದವಸ ಭಂಡಾರ ಹಾಗೂ ಪೊದಕೇರಿ ಸಹಕಾರ ದವಸ ಭಂಡಾರ ಸೇರಿದಂತೆ ವಿವಿಧ ಸಹಕಾರ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ 73ನೇ ಸಹಕಾರ ಸಪ್ತಾಹದ ಅಂಗವಾಗಿ ‘ಸಾರ್ವಜನಿಕ, ಖಾಸಗಿ ಮತ್ತು ಸಹಕಾರಿ ಪಾಲುದಾರಿಕೆ ಬಲಪಡಿಸುವುದು’ ಎಂಬ ವಿಷಯದಡಿ ದಿನಾಚರಣೆಯನ್ನು ರುದ್ರುಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಳೆಯಂಡ ಯು. ರಾಬಿನ್ ದೇವಯ್ಯ, ಹಿರಿಯರ ತ್ಯಾಗ, ಪರಿಶ್ರಮ ಹಾಗೂ ನಿಸ್ವಾರ್ಥ ಸೇವೆಯಿಂದ ಕೊಡಗಿನ ಸಹಕಾರಿ ಕ್ಷೇತ್ರ ಉನ್ನತ ಸ್ಥಾನಕ್ಕೇರಿದ್ದು, ದೇಶಕ್ಕೇ ಮಾದರಿಯಾಗಿದೆ ಎಂದರು.
1905ರಲ್ಲಿ ಗದಗದಲ್ಲಿ ದೇಶದ ಪ್ರಥಮ ಸಹಕಾರ ಸಂಘ ಆರಂಭಗೊಂಡಿದ್ದು, ಅದೇ ವರ್ಷ ಮೇ 22ರಂದು ಕೊಡಗು ಜಿಲ್ಲೆಯ ತಲ್ತರೆ ಶೆಟ್ಟಳ್ಳಿಯಲ್ಲಿ ಎರಡನೇ ಸಹಕಾರ ಸಂಘ ಕಾರ್ಯಾರಂಭ ಮಾಡಿರುವುದು ಕೊಡಗು ಹೆಮ್ಮೆ ಪಡುವ ಸಂಗತಿಯಾಗಿದೆ ಎಂದು ತಿಳಿಸಿದರು.
ಪೊದಕೇರಿ, ವಿ. ಬಾಡಗ ಹಾಗೂ ರುದ್ರುಗುಪ್ಪೆ ಸಂಘಗಳು 1976ರಲ್ಲಿ ರುದ್ರುಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದೊಂದಿಗೆ ವಿಲೀನಗೊಂಡವು. ಅಂದಿನಿಂದ ಇಂದಿನವರೆಗೆ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿರುವ ಸಂಘವು ಕೃಷಿ ಮತ್ತು ಕೃಷಿಯೇತರ ಸಾಲ ಸೌಲಭ್ಯಗಳನ್ನು ಒದಗಿಸುತ್ತಾ ಲಾಭದಾಯಕವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸಾಧನೆಗೆ ಹಿರಿಯ ಸಹಕಾರಿಗಳು ಹಾಗೂ ಕೃಷಿಕರ ಕೊಡುಗೆ ಅಪಾರವಾಗಿದೆ ಎಂದು ಶ್ಲಾಘಿಸಿದರು. ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸಿದ ಹಾಗೂ ಸಂಘಗಳಿಗೆ ಜಾಗವನ್ನು ಉದಾರವಾಗಿ ನೀಡಿದ ಹಿರಿಯರನ್ನು ಸದಾ ಸ್ಮರಿಸಬೇಕು ಎಂದರು.
ಹಿರಿಯ ಸಹಕಾರಿಗಳನ್ನು ಸನ್ಮಾನಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ. ಗಣಪತಿ, ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪ್ರತಿಯೊಬ್ಬ ಸದಸ್ಯರ ಸಹಭಾಗಿತ್ವ ಅತ್ಯಗತ್ಯ. ಕೇವಲ ಸಾಲ ಪಡೆಯುವುದಕ್ಕಾಗಿ ಮಾತ್ರ ಸಹಕಾರ ಸಂಘಗಳನ್ನು ಬಳಸಿಕೊಳ್ಳುವುದು ಸರಿಯಲ್ಲ. ಹಿರಿಯರು ಪರಿಶ್ರಮದಿಂದ ಕಟ್ಟಿಬೆಳೆಸಿದ ಸಹಕಾರಿ ಕ್ಷೇತ್ರವನ್ನು ಉಳಿಸಿ, ಮತ್ತಷ್ಟು ಪ್ರಗತಿಯತ್ತ ಕೊಂಡೊಯ್ಯುವುದು ಎಲ್ಲರ ಜವಾಬ್ದಾರಿಯಾಗಿದೆ. ಸಹಕಾರಿ ಕ್ಷೇತ್ರದ ಸಾಧಕ-ಬಾಧಕಗಳ ಕುರಿತು ಸದಸ್ಯರು ಅರಿವು ಹೊಂದಿರಬೇಕು ಎಂದು ಹೇಳಿದರು.
ದಿನದ ಮಹತ್ವದ ಕುರಿತು ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕಿ ಹಾಗೂ ಮಡಿಕೇರಿಯ ಕೆಐಸಿಎಂನ ನಿವೃತ್ತ ಪ್ರಾಂಶುಪಾಲೆ ಶ್ಯಾಮಲಾ ಎಂ.ಎಂ., ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಸಾರ್ವಜನಿಕ ಮತ್ತು ಖಾಸಗಿ ವಲಯಗಳೊಂದಿಗಿನ ಪಾಲುದಾರಿಕೆಯನ್ನು ಬಲಪಡಿಸುವ ಅಗತ್ಯವನ್ನು ವಿವರಿಸಿದರು.
ಸಹಕಾರಿ ಸಂಘಗಳ ಪ್ರತಿಯೊಂದು ಕಾರ್ಯಕ್ರಮಗಳಲ್ಲಿಯೂ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಸ್ಪರ್ಧಾತ್ಮಕ ಸವಾಲುಗಳನ್ನು ಎದುರಿಸಬೇಕು. ಕೃಷಿ ಹಾಗೂ ರೈತಪರ ಚಟುವಟಿಕೆಗಳಿಗೆ ಆದ್ಯತೆ ನೀಡಿದಾಗ ಮಾತ್ರ ಸಹಕಾರಿ ಕ್ಷೇತ್ರ ನಿರಂತರ ಪ್ರಗತಿ ಸಾಧಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ರುದ್ರುಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಈಶ್ವರಿ ಬಾಡಗ ಸಹಕಾರ ದವಸ ಭಂಡಾರದ ಅಧ್ಯಕ್ಷ ಅಮ್ಮಣಿಚಂಡ ಜಿ. ರಂಜು ಅವರು ಸಂಘದ ಪ್ರಗತಿ ಮತ್ತು ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಅಜ್ಜಿನಿಕಂಡ ಎಸ್. ಶ್ಯಾಂಚಂದ್ರ, ಅಡ್ಡಂಡ ಸಿ. ಕುಶಾಲಪ್ಪ, ಅಜ್ಜಿಕುಟ್ಟಿರ ಎಂ. ಮುತ್ತಪ್ಪ, ಮೂಕಚಂಡ ಟಿ. ಸುಬ್ಬಯ್ಯ, ಹೊಟ್ಟೇಂಗಡ ಎಂ. ರಮೇಶ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರಾದ ಕುಂಞಂಗಡ ಅರುಣ್ ಭೀಮಯ್ಯ, ಎಸ್.ಆರ್. ಸುನಿಲ್ ರಾವ್, ಪೂಳಂಡ ಪಿ. ಪೆಮ್ಮಯ್ಯ, ಗುಮ್ಮಟ್ಟಿರ ಎಸ್. ಕಿಲನ್ ಗಣಪತಿ, ಪಟ್ರಪಂಡ ರಘು ನಾಣಯ್ಯ, ವಿರಾಜಪೇಟೆ ತಾಲ್ಲೂಕು ಸಹಕಾರ ಕೂಟದ ಅಧ್ಯಕ್ಷ ಅಲೆಮಾಡ ಡಿ. ಸುಧೀರ್, ಪೊದಕೇರಿ ಸಹಕಾರ ದವಸ ಭಂಡಾರದ ಅಧ್ಯಕ್ಷ ಕಂಜಿತಂಡ ಕೆ. ಮಂದಣ್ಣ ಹಾಗೂ ರುದ್ರುಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ಬಲ್ಲಡಿಚಂಡ ಎಸ್. ಸೀತಮ್ಮ ಉಪಸ್ಥಿತರಿದ್ದರು.
ಹಿರಿಯ ಸಹಕಾರಿಗಳಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿಗಳಾದ ಕೊಂಗಂಡ ಪಿ. ಮುದ್ದಯ್ಯ, ಮೂಕಚಂಡ ಟಿ. ಸುಬ್ಬಯ್ಯ, ಕೊಂಗಂಡ ಎಂ. ದೇವಯ್ಯ, ಮುಲ್ಲೇಂಗಡ ಎಸ್. ಪೊನ್ನಪ್ಪ, ಕೋಲತಂಡ ಯು. ಮಾಚಯ್ಯ, ತೀತಿಮಾಡ ಜೆ. ಅಯ್ಯಪ್ಪ, ಮೇಚಿಯಂಡ ಎಂ. ಪ್ರಭಾ ಹಾಗೂ ಮೂಕಚಂಡ ಡಿ. ಕಾವೇರಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿದ ಹಿರಿಯರು ಸಹಕಾರಿ ಕ್ಷೇತ್ರ ಬೆಳೆದುಬಂದ ಹಾದಿ ಹಾಗೂ ಅದರ ಅಭಿವೃದ್ಧಿಗೆ ಹಿರಿಯರು ಪಟ್ಟ ಪರಿಶ್ರಮದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಅಮ್ಮಣಿಚಂಡ ಜಿ. ರಂಜು ಸ್ವಾಗತಿಸಿ, ಮೂಕಚಂಡ ಟಿ. ಸುಬ್ಬಯ್ಯ ವಂದಿಸಿದರು.
















