ಮಡಿಕೇರಿ, NEWS DESK ನ.18: ನಗರದ ಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ರೂಢಿ ಸಂಪ್ರದಾಯದಂತೆ ನವೆಂಬರ್ 21ರಿಂದ 26ರವರೆಗೆ ವಿವಿಧ ಧಾರ್ಮಿಕ ಹಾಗೂ ಪೂಜಾ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ದೇವರಾಜು ತಿಳಿಸಿದ್ದಾರೆ.
ನವೆಂಬರ್ 21ರಂದು ಸಂಜೆ 6.30 ಗಂಟೆಗೆ ಉತ್ಥಾನ ದ್ವಾದಶಿ ಪ್ರಯುಕ್ತ ತುಳಸಿ ಪೂಜೆ ನೆರವೇರಲಿದೆ. ನವೆಂಬರ್ 24ರಂದು ಸಂಜೆ 6.30 ಗಂಟೆಯಿಂದ ತೆಪ್ಪೋತ್ಸವ, ಪಲ್ಲಕಿ ಉತ್ಸವ ಹಾಗೂ ದಟ್ಟೋತ್ಸವ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಈ ಕಾರ್ಯಕ್ರಮಗಳಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವ ಭಕ್ತಾದಿಗಳು ದೇವಾಲಯದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವ ಮೂಲಕ ಸೇವೆ ಸಲ್ಲಿಸಬಹುದಾಗಿದೆ.
ನವೆಂಬರ್ 25ರಂದು ರಾತ್ರಿ 7.30 ಗಂಟೆಗೆ ಹುತ್ತರಿ ಹಬ್ಬದ ಪ್ರಯುಕ್ತ ಕದಿರು ತೆಗೆಯುವ ಕಾರ್ಯಕ್ರಮ ಸೇರಿದಂತೆ ವಿವಿಧ ಸಾಂಪ್ರದಾಯಿಕ ಆಚರಣೆಗಳು ನಡೆಯಲಿವೆ. ಮಹಾಪೂಜೆಯ ಬಳಿಕ ಭಕ್ತಾದಿಗಳಿಗೆ ಪ್ರಸಾದ ಹಾಗೂ ಕದಿರು ವಿತರಿಸಲಾಗುತ್ತದೆ.
ನವೆಂಬರ್ 26ರಂದು ಮಧ್ಯಾಹ್ನ 3 ಗಂಟೆಗೆ ನಗರದ ಕೋಟೆ ಆವರಣದಲ್ಲಿ ಹುತ್ತರಿ ಹಬ್ಬದ ಪ್ರಯುಕ್ತ ಶ್ರೀ ಓಂಕಾರೇಶ್ವರ ದೇವಾಲಯದ ವತಿಯಿಂದ ಪಾಂಡೀರ ಕುಟುಂಬದವರಿಂದ ಹುತ್ತರಿ ಕೋಲಾಟ ಕಾರ್ಯಕ್ರಮ ನಡೆಯಲಿದೆ.
ದೇವಾಲಯದಲ್ಲಿ ನಡೆಯುವ ವಿವಿಧ ಪೂಜಾ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾರ್ವಜನಿಕ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿದೆ.
ಹೆಚ್ಚಿನ ಮಾಹಿತಿಗಾಗಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ. ದೇವಯ್ಯ (ಮೊ. 9448899567) ಅಥವಾ ಕಾರ್ಯನಿರ್ವಹಣಾಧಿಕಾರಿ ಪಿ.ಎಲ್. ದೇವರಾಜ್ (ಮೊ. 9448798558) ಅವರನ್ನು ಸಂಪರ್ಕಿಸಬಹುದು ಎಂದು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.















