ಮಡಿಕೇರಿ, NEWS DESK ನ.18: ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ ಹಾಗೂ ದೈಹಿಕ ಚಟುವಟಿಕೆಗಳ ಕೊರತೆಯಿಂದ ಮಧುಮೇಹದ ಪ್ರಮಾಣ ಹೆಚ್ಚಾಗುತ್ತಿದ್ದು, ಈ ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆಯುವುದು ಅತ್ಯಗತ್ಯ ಎಂದು ಕೊಡಗು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶ್ರೀನಿವಾಸ್ ತಿಳಿಸಿದ್ದಾರೆ.
ಅಸಾಂಕ್ರಾಮಿಕ ರೋಗಗಳ ತಡೆ ಮತ್ತು ನಿಯಂತ್ರಣ ರಾಷ್ಟ್ರೀಯ ಕಾರ್ಯಕ್ರಮದಡಿ (ಎನ್‌ಪಿ-ಎನ್‌ಸಿಡಿ) ಕೊಡಗು ಜಿಲ್ಲೆಯಲ್ಲಿ 30 ವರ್ಷ ಮೇಲ್ಪಟ್ಟವರ ಆರೋಗ್ಯ ತಪಾಸಣೆ, ಮಧುಮೇಹದ ಆರಂಭಿಕ ಪತ್ತೆ ಹಾಗೂ ನಿರಂತರ ಚಿಕಿತ್ಸೆಗೆ ಆರೋಗ್ಯ ಇಲಾಖೆ ವಿಶೇಷ ಆದ್ಯತೆ ನೀಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
2025ರ ಏಪ್ರಿಲ್‌ನಿಂದ 2026ರ ಮಾರ್ಚ್‌ವರೆಗೆ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಒಟ್ಟು 2,31,796 ಮಂದಿಯನ್ನು ಮಧುಮೇಹ ತಪಾಸಣೆಗೆ ಒಳಪಡಿಸಲಾಗಿದ್ದು, ನಿಗದಿತ ಗುರಿಯ ಶೇ.87ರಷ್ಟು ಸಾಧನೆ ಮಾಡಲಾಗಿದೆ. ಈ ಅವಧಿಯಲ್ಲಿ 36,247 ಮಂದಿಯಲ್ಲಿ ಮಧುಮೇಹ ಪತ್ತೆಯಾಗಿದೆ.
ಇನ್ನು 2026ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ 85,101 ಮಂದಿಗೆ ಮಧುಮೇಹ ತಪಾಸಣೆ ನಡೆಸಲಾಗಿದ್ದು, 4,464 ಮಂದಿಯಲ್ಲಿ ಹೊಸದಾಗಿ ಕಾಯಿಲೆ ಗುರುತಿಸಲಾಗಿದೆ. ಇದೇ ಅವಧಿಯಲ್ಲಿ 81,314 ಮಂದಿಗೆ ಅಧಿಕ ರಕ್ತದೊತ್ತಡ ತಪಾಸಣೆ ನಡೆಸಿ, 7,079 ಮಂದಿಯಲ್ಲಿ ಕಾಯಿಲೆ ಪತ್ತೆಹಚ್ಚಲಾಗಿದೆ.
ಮಧುಮೇಹ ನಿಯಂತ್ರಣದಲ್ಲಿ ಶೇ.85ರಷ್ಟು ಸಾಧನೆ
ಜಿಲ್ಲೆಯಲ್ಲಿ 36,273 ಮಧುಮೇಹ ರೋಗಿಗಳನ್ನು ಚಿಕಿತ್ಸಾ ಅನುಸರಣೆಗೆ ಒಳಪಡಿಸಲಾಗಿದ್ದು, ಇವರಲ್ಲಿ 30,897 ಮಂದಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಮಧುಮೇಹ ನಿಯಂತ್ರಣದ ಪ್ರಮಾಣ ಶೇ.85ರಷ್ಟಿದೆ.
ತಾಲ್ಲೂಕುವಾರು ಮಧುಮೇಹ ನಿಯಂತ್ರಣದ ಪ್ರಮಾಣ ಮಡಿಕೇರಿಯಲ್ಲಿ ಶೇ.81, ಸೋಮವಾರಪೇಟೆಯಲ್ಲಿ ಶೇ.86, ಕುಶಾಲನಗರದಲ್ಲಿ ಶೇ.85, ವಿರಾಜಪೇಟೆಯಲ್ಲಿ ಶೇ.86 ಹಾಗೂ ಪೊನ್ನಂಪೇಟೆಯಲ್ಲಿ ಶೇ.88ರಷ್ಟಿದೆ. ಅಲ್ಲದೆ, ಜಿಲ್ಲೆಯಲ್ಲಿ ಅಧಿಕ ರಕ್ತದೊತ್ತಡ ಹೊಂದಿರುವ 57,399 ರೋಗಿಗಳನ್ನೂ ಚಿಕಿತ್ಸಾ ಅನುಸರಣೆಗೆ ಒಳಪಡಿಸಲಾಗಿದೆ.
ಗೃಹ ಆರೋಗ್ಯ ಯೋಜನೆಯಡಿ 2.40 ಲಕ್ಷ ಮಂದಿಗೆ ತಪಾಸಣೆ
ಗೃಹ ಆರೋಗ್ಯ ಯೋಜನೆಯಡಿ 2025ರ ಆಗಸ್ಟ್‌ನಿಂದ 2026ರ ಅಕ್ಟೋಬರ್‌ವರೆಗೆ ಜಿಲ್ಲೆಯಲ್ಲಿ 2,40,283 ಮಂದಿಯನ್ನು ಮಧುಮೇಹ ತಪಾಸಣೆಗೆ ಒಳಪಡಿಸಲಾಗಿದೆ. ಇವರಲ್ಲಿ 3,664 ಮಂದಿಯಲ್ಲಿ ಹೊಸದಾಗಿ ಮಧುಮೇಹ ಪತ್ತೆಯಾಗಿದ್ದು, ಈಗಾಗಲೇ ಕಾಯಿಲೆ ಹೊಂದಿರುವವರನ್ನು ಸೇರಿಸಿ ಒಟ್ಟು 34,837 ಮಂದಿ ಚಿಕಿತ್ಸೆಯಲ್ಲಿದ್ದಾರೆ.
ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದಂತೆ 2,37,740 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದ್ದು, ಒಟ್ಟು 47,840 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಾ. ಶ್ರೀನಿವಾಸ್ ತಿಳಿಸಿದ್ದಾರೆ.
ಮಧುಮೇಹದ ಲಕ್ಷಣಗಳ ಬಗ್ಗೆ ಎಚ್ಚರಿಕೆ ಅಗತ್ಯ
ಅತಿಯಾದ ಬಾಯಾರಿಕೆ, ಪದೇ ಪದೇ ಮೂತ್ರ ವಿಸರ್ಜನೆ, ವಿಪರೀತ ಹಸಿವು, ಸುಸ್ತು, ಅನಿರೀಕ್ಷಿತವಾಗಿ ತೂಕ ಇಳಿಕೆಯಾಗುವುದು, ದೃಷ್ಟಿ ಮಂದವಾಗುವುದು ಹಾಗೂ ಗಾಯಗಳು ನಿಧಾನವಾಗಿ ವಾಸಿಯಾಗುವುದು ಮಧುಮೇಹದ ಪ್ರಮುಖ ಲಕ್ಷಣಗಳಾಗಿವೆ. ಕೆಲವರಲ್ಲಿ ಕಾಯಿಲೆಯ ಆರಂಭಿಕ ಹಂತದಲ್ಲಿ ಯಾವುದೇ ಸ್ಪಷ್ಟ ಲಕ್ಷಣಗಳು ಕಾಣಿಸಿಕೊಳ್ಳದಿರುವ ಸಾಧ್ಯತೆಯೂ ಇದೆ. ಆದ್ದರಿಂದ ನಿಯಮಿತ ಆರೋಗ್ಯ ತಪಾಸಣೆ ಅತ್ಯಗತ್ಯವಾಗಿದೆ.
ಆರೋಗ್ಯಕರ ಜೀವನಶೈಲಿ ಅನುಸರಿಸಲು ಸಲಹೆ
ಮಧುಮೇಹ ನಿಯಂತ್ರಣದಲ್ಲಿಡಲು ಸಕ್ಕರೆ ಹಾಗೂ ಸಂಸ್ಕರಿಸಿದ ಆಹಾರಗಳ ಸೇವನೆಯನ್ನು ಕಡಿಮೆ ಮಾಡಬೇಕು. ತರಕಾರಿ, ಸೊಪ್ಪು ಹಾಗೂ ನಾರಿನಾಂಶ ಹೆಚ್ಚಿರುವ ಆಹಾರವನ್ನು ಸೇವಿಸಬೇಕು. ಪ್ರತಿದಿನ ಕನಿಷ್ಠ 30 ನಿಮಿಷ ನಡಿಗೆ ಅಥವಾ ವ್ಯಾಯಾಮ ಮಾಡಬೇಕು. ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದರ ಜೊತೆಗೆ ವೈದ್ಯರ ಸಲಹೆಯಂತೆ ಔಷಧಿಗಳನ್ನು ಸೇವಿಸಬೇಕು.
ನಿಯಮಿತವಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹಾಗೂ ಎಚ್‌ಬಿಎ1ಸಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ವೈದ್ಯರ ಸಲಹೆಯಿಲ್ಲದೆ ಔಷಧಿಗಳನ್ನು ನಿಲ್ಲಿಸಬಾರದು. ಮಧುಮೇಹ ನಿಯಂತ್ರಣದಲ್ಲಿರದಿದ್ದರೆ ಹೃದಯ, ಮೂತ್ರಪಿಂಡ, ಕಣ್ಣು ಹಾಗೂ ನರಗಳಿಗೆ ಸಂಬಂಧಿಸಿದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ.
ವಿಶೇಷವಾಗಿ 30 ವರ್ಷ ಮೇಲ್ಪಟ್ಟವರು ಹಾಗೂ ಕುಟುಂಬದಲ್ಲಿ ಮಧುಮೇಹದ ಹಿನ್ನೆಲೆ ಹೊಂದಿರುವವರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಕಾಯಿಲೆ ಉಲ್ಬಣಿಸಿದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ಆರಂಭದಲ್ಲೇ ಪತ್ತೆಹಚ್ಚಿ ನಿಯಂತ್ರಿಸುವುದು ಉತ್ತಮ ಎಂದು ಡಾ. ಶ್ರೀನಿವಾಸ್ ಸಲಹೆ ನೀಡಿದ್ದಾರೆ.
ಇತ್ತೀಚೆಗೆ ಮಡಿಕೇರಿ ತಾಲ್ಲೂಕಿನ ಬಲ್ಲಮಾವಟಿಯಲ್ಲಿ ನಡೆದ ಪ್ರಜಾಸೇವಾ ಅಭಿಯಾನದ ಸಂದರ್ಭದಲ್ಲಿ ವಿಶ್ವ ಮಧುಮೇಹ ದಿನಾಚರಣೆಯನ್ನು ಆಚರಿಸಿ, ಸಾರ್ವಜನಿಕರಲ್ಲಿ ಮಧುಮೇಹದ ಕುರಿತು ಜಾಗೃತಿ ಮೂಡಿಸಲಾಯಿತು.















