ಬೆಂಗಳೂರು, NEWS DESK ನ.18: ವಿಕಲಚೇತನರ ಹಕ್ಕುಗಳ ಕಾಯ್ದೆ-2016ರ ಸಮರ್ಪಕ ಅನುಷ್ಠಾನ ಹಾಗೂ ವಿಕಲಚೇತನರಿಗೆ ಅಗತ್ಯ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ವಿಕಲಚೇತನರ ಹಕ್ಕುಗಳ ಕಾಯ್ದೆ-2016 ಮತ್ತು ಅದರ ನಿಯಮಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯವು W.P. No. 11351/2020ರ ಸಂಬಂಧ 2026ರ ಜೂನ್ 1ರಂದು ನೀಡಿರುವ ಪ್ರವೇಶಯೋಗ್ಯತೆ ಕುರಿತ ಕಾಲಮಿತಿಯ ನಿರ್ದೇಶನಗಳನ್ನು ಪಾಲಿಸುವ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
ನೇಮಕಾತಿಯಲ್ಲಿ ಶೇ.5 ಮೀಸಲಾತಿ:
ಎಲ್ಲಾ ಸರ್ಕಾರಿ ಇಲಾಖೆಗಳು ನೇಮಕಾತಿ ಅಧಿಸೂಚನೆ ಹೊರಡಿಸುವ ಮುನ್ನ ವಿಕಲಚೇತನ ಅಭ್ಯರ್ಥಿಗಳಿಗೆ ಶೇ.5ರಷ್ಟು ಹುದ್ದೆಗಳನ್ನು ಮೀಸಲಿಟ್ಟಿರುವ ಬಗ್ಗೆ ದೃಢೀಕೃತ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಅಗತ್ಯ ಸೌಲಭ್ಯ:
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ರಸ್ತೆಗಳು, ಪಾದಚಾರಿ ಮಾರ್ಗಗಳು, ಉದ್ಯಾನವನಗಳು, ಮಾರುಕಟ್ಟೆಗಳು ಹಾಗೂ ಸಾರ್ವಜನಿಕ ಶೌಚಾಲಯಗಳನ್ನು ವಿಕಲಚೇತನ ಸ್ನೇಹಿಯಾಗಿ ರೂಪಿಸಬೇಕು. ಈ ಕುರಿತು ಸಂಬಂಧಿತ ಇಂಜಿನಿಯರಿಂಗ್ ವಿಭಾಗಗಳು ದೃಢೀಕರಣ ನೀಡಬೇಕು. ರಾಜ್ಯದ ಕಟ್ಟಡಗಳ ಏಕೀಕೃತ ಮಾಹಿತಿಯನ್ನು ಕರ್ನಾಟಕ ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರದ GIS ಪೋರ್ಟಲ್‌ನಲ್ಲಿ ದಾಖಲಿಸುವಂತೆಯೂ ಸೂಚಿಸಲಾಗಿದೆ.
ಕಟ್ಟಡ ನಿರ್ಮಾಣ ನಿಯಮಗಳ ಪಾಲನೆ ಕಡ್ಡಾಯ:
ವಸತಿ ಯೋಜನೆಗಳು, ವಸತಿನಿಲಯಗಳು ಹಾಗೂ ಸಾರ್ವಜನಿಕ ಕಟ್ಟಡಗಳಲ್ಲಿ ವಿಕಲಚೇತನರಿಗೆ ಅನುಕೂಲವಾಗುವ ವ್ಯವಸ್ಥೆಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ನಿಗದಿತ ಮಾನದಂಡಗಳನ್ನು ಪಾಲಿಸದ ಕಟ್ಟಡಗಳಿಗೆ ಸ್ವಾಧೀನಾನುಭವ ಅಥವಾ ಪೂರ್ಣಗೊಳಿಸುವಿಕೆ ಪ್ರಮಾಣಪತ್ರ ನೀಡಬಾರದು ಎಂದು ನಿರ್ದೇಶಿಸಲಾಗಿದೆ.
ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆ:
ಸಾರ್ವಜನಿಕ ಸಾರಿಗೆ ಬಸ್ಸುಗಳು ಮತ್ತು ನಿಲ್ದಾಣಗಳಲ್ಲಿ ವಿಕಲಚೇತನರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ ಸಿಬ್ಬಂದಿಗೆ ಸಂವೇದನಾಶೀಲತಾ ತರಬೇತಿ ನೀಡಬೇಕು. ವಿಕಲಚೇತನರು ಸುಲಭವಾಗಿ ರಸ್ತೆ ದಾಟಲು ಅನುಕೂಲವಾಗುವಂತೆ ಟ್ರಾಫಿಕ್ ಸಿಗ್ನಲ್‌ಗಳ ಸಾಫ್ಟ್‌ವೇರ್‌ನಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ.
ಡಿಜಿಟಲ್ ಪ್ರವೇಶಯೋಗ್ಯತೆಗೆ ಆದ್ಯತೆ:
ಎಲ್ಲಾ ಸರ್ಕಾರಿ ವೆಬ್‌ಸೈಟ್‌ಗಳು ವಿಕಲಚೇತನರು ಸುಲಭವಾಗಿ ಬಳಸುವಂತಿರಬೇಕು. ಇದಕ್ಕಾಗಿ ಟೆಕ್ಸ್ಟ್ ಟು ವಾಯ್ಸ್ ಮತ್ತು ವಾಯ್ಸ್ ಟು ಟೆಕ್ಸ್ಟ್ ಸೌಲಭ್ಯಗಳನ್ನು ಒಳಗೊಂಡ ಮಾನದಂಡಗಳನ್ನು ಇ-ಆಡಳಿತ ಇಲಾಖೆ ಪಾಲಿಸಬೇಕು. ವಿಕಲಚೇತನರ ಅನುಕೂಲಕ್ಕಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಇ-ಕನ್ನಡ ಇಂಗ್ಲಿಷ್-ಕನ್ನಡ ನಿಘಂಟನ್ನು ಶೀಘ್ರ ಪೂರ್ಣಗೊಳಿಸಿ ವ್ಯಾಪಕ ಪ್ರಚಾರ ನೀಡಲು ನಿರ್ಧರಿಸಲಾಗಿದೆ.
ಕ್ರೀಡೆ ಮತ್ತು ಶಿಕ್ಷಣಕ್ಕೆ ಉತ್ತೇಜನ:
ಶಾಲಾ ಹಂತದಿಂದಲೇ ಪ್ಯಾರಾ ಕ್ರೀಡೆಗಳಿಗೆ ಉತ್ತೇಜನ ನೀಡಲು ಅರ್ಹ ಮಕ್ಕಳಿಗೆ ಶ್ರವಣ ಸಾಧನಗಳನ್ನು ಒದಗಿಸಿ ಅವರ ಕ್ರೀಡಾ ಪ್ರತಿಭೆಯನ್ನು ಗುರುತಿಸಲು ಕ್ರಮ ಕೈಗೊಳ್ಳಲಾಗುವುದು. ಶಾಲಾ ಶಿಕ್ಷಣ ಇಲಾಖೆಯಲ್ಲಿ ಸಂಗೀತ ಶಿಕ್ಷಕರ ಹುದ್ದೆಗಳ ಕೊರತೆಯನ್ನು ನೀಗಿಸಲು ಹೊರಗುತ್ತಿಗೆ ಆಧಾರದ ಮೇಲೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.
ನೋಡಲ್ ಅಧಿಕಾರಿಗಳ ನೇಮಕ:
ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಪ್ರವೇಶಯೋಗ್ಯತೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ಅವರ ವಿವರಗಳನ್ನು ಇಲಾಖೆಗಳ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿನ ಸೌಲಭ್ಯಗಳ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನಿರಂತರ ಪರಿಶೀಲನೆ ಮತ್ತು ಆಡಿಟ್ ನಡೆಸಿ ಅಗತ್ಯ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಿದೆ. ವಿಕಲಚೇತನರಿಗೆ ಸಂಬಂಧಿಸಿದ ನೀತಿ ಮತ್ತು ನಿಯಮಗಳನ್ನು ಒಳಗೊಂಡ ಕೈಪಿಡಿಯನ್ನು ಸಿದ್ಧಪಡಿಸುವಂತೆಯೂ ಸೂಚಿಸಲಾಗಿದೆ.
ಒಂದು ವಾರದೊಳಗೆ ವರದಿ ಸಲ್ಲಿಸಲು ಸೂಚನೆ:
ಉಚ್ಚ ನ್ಯಾಯಾಲಯದ ನಿರ್ದೇಶನಗಳ ಅನುಪಾಲನೆ ಕುರಿತು ಪ್ರತಿ ಕೆಡಿಪಿ ಸಭೆಯಲ್ಲೂ ವಿಷಯಸೂಚಿಯನ್ನು ಕಡ್ಡಾಯವಾಗಿ ಸೇರಿಸಬೇಕು. ಎಲ್ಲಾ ಇಲಾಖೆಗಳು ನಿಗದಿತ ಕಾಲಮಿತಿಯಲ್ಲಿ ಕೈಗೊಂಡ ಕ್ರಮಗಳ ಕುರಿತು ಅನುಪಾಲನಾ ವರದಿಯನ್ನು ಒಂದು ವಾರದೊಳಗೆ ಸಲ್ಲಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ವಿಕಲಚೇತನರಿಗೆ ಸಮಾನ ಅವಕಾಶ, ಸುಗಮ ಸಂಚಾರ ಹಾಗೂ ಸರ್ಕಾರಿ ಸೇವೆಗಳಲ್ಲಿ ಸುಲಭ ಪ್ರವೇಶ ಕಲ್ಪಿಸುವ ನಿಟ್ಟಿನಲ್ಲಿ ಈ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದೆ.
















