ಬೆಂಗಳೂರು, NEWS DESK ನ.18: ಬೆಂಗಳೂರಿನ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಸಂಚಾರ ದಟ್ಟಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಸುಮಾರು ₹436 ಕೋಟಿ ವೆಚ್ಚದ ಸಮಗ್ರ ಸಂಚಾರ ಮೂಲಸೌಕರ್ಯ ಯೋಜನೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳವಾರ ಶಿಲಾನ್ಯಾಸ ನೆರವೇರಿಸಿದರು.
ಮಾರುತಿ ಸೇವಾನಗರದ ಐಒಸಿ ಜಂಕ್ಷನ್ನಲ್ಲಿ ಬೆಂಗಳೂರಿನ ಮೊದಲ ಎಲಿವೇಟೆಡ್ ವೃತ್ತಾಕಾರದ ರೋಟರಿ ಫ್ಲೈಓವರ್ ಹಾಗೂ ಬೈಯಪ್ಪನಹಳ್ಳಿ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ಹೆಚ್ಚುವರಿ ನಾಲ್ಕು ಪಥದ ರೈಲ್ವೆ ಮೇಲ್ಸೇತುವೆ ನಿರ್ಮಾಣ ಸೇರಿದಂತೆ ಹಲವು ಪ್ರಮುಖ ಕಾಮಗಾರಿಗಳು ಈ ಯೋಜನೆಯಡಿ ನಡೆಯಲಿವೆ.
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಯುವ ಕಾಂಗ್ರೆಸ್ ಮುಖಂಡ ರಾಣಾ ಜಾರ್ಜ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಯೋಜನೆಯ ಕುರಿತು ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಐಒಸಿ ಜಂಕ್ಷನ್ನ ಸಂಚಾರ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಸಚಿವ ಕೆ.ಜೆ. ಜಾರ್ಜ್ ನಿರಂತರವಾಗಿ ಮನವಿ ಮಾಡಿದ್ದರು. ಸುಮಾರು 20 ಬಾರಿ ಈ ವಿಷಯವನ್ನು ತಮ್ಮ ಗಮನಕ್ಕೆ ತಂದಿದ್ದರು. ಇದೀಗ ಯೋಜನೆಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ಪ್ರತಿಯೊಬ್ಬ ನಾಗರಿಕನ ಸಮಯಕ್ಕೂ ಮೌಲ್ಯವಿದ್ದು, ಜನರಿಗೆ ಉತ್ತಮ ಮೂಲಸೌಕರ್ಯ ಒದಗಿಸುವಲ್ಲಿ ಸರ್ಕಾರ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದರು.
ಮುಂದಿನ 25 ವರ್ಷಗಳ ಸಂಚಾರ ಬೇಡಿಕೆಗೆ ಯೋಜನೆ
ಐಒಸಿ ಜಂಕ್ಷನ್ನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ನಿಯಂತ್ರಿಸುವುದರ ಜೊತೆಗೆ ಮುಂದಿನ 25 ವರ್ಷಗಳ ಸಂಚಾರದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಲಾಗಿದೆ. ನಾಲ್ಕು ಪಥದ ಎಲಿವೇಟೆಡ್ ರೋಟರಿ ಫ್ಲೈಓವರ್ ಅನ್ನು ಆಧುನಿಕ ಸ್ಟೀಲ್ ಬಾಕ್ಸ್ ಗರ್ಡರ್ ತಂತ್ರಜ್ಞಾನ ಬಳಸಿ ನಿರ್ಮಿಸಲಾಗುತ್ತಿದ್ದು, ಗಂಟೆಗೆ ಸುಮಾರು 4,100 ಪ್ಯಾಸೆಂಜರ್ ಕಾರ್ ಯೂನಿಟ್ಗಳ ಸಂಚಾರ ನಿರ್ವಹಿಸುವ ಸಾಮರ್ಥ್ಯ ಹೊಂದಿರಲಿದೆ.
ಬಾಣಸವಾಡಿ ರಸ್ತೆ, ಕಮ್ಮನಹಳ್ಳಿ ರಸ್ತೆ, ಮಾರುತಿ ಸೇವಾನಗರ ರಸ್ತೆ ಹಾಗೂ ಹಳೆ ಮದ್ರಾಸ್ ರಸ್ತೆ–ಇಂದಿರಾನಗರ–ಬೈಯಪ್ಪನಹಳ್ಳಿ ಟರ್ಮಿನಲ್ ದಿಕ್ಕುಗಳಿಗೆ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ರ್ಯಾಂಪ್ಗಳನ್ನು ನಿರ್ಮಿಸಲಾಗುತ್ತದೆ. ಇದರಿಂದ ನಾಲ್ಕು ದಿಕ್ಕುಗಳಿಂದ ಬರುವ ವಾಹನಗಳು ಜಂಕ್ಷನ್ನಲ್ಲಿ ಅನಗತ್ಯವಾಗಿ ಕಾಯದೆ ಸುಗಮವಾಗಿ ಸಂಚರಿಸಲು ಅನುಕೂಲವಾಗಲಿದೆ.
ಬೈಯಪ್ಪನಹಳ್ಳಿಯಲ್ಲಿ ನಾಲ್ಕು ಪಥದ ರೈಲ್ವೆ ಮೇಲ್ಸೇತುವೆ
ಬೈಯಪ್ಪನಹಳ್ಳಿ ರೈಲ್ವೆ ಲೆವೆಲ್ ಕ್ರಾಸಿಂಗ್ ಸಂಖ್ಯೆ 136A ಬಳಿ ರೈಲು ಸಂಚಾರದ ಸಂದರ್ಭದಲ್ಲಿ ವಾಹನಗಳು ದೀರ್ಘಕಾಲ ಕಾಯುವುದನ್ನು ತಪ್ಪಿಸಲು ಈಗಿರುವ ಎರಡು ಪಥದ ರೈಲ್ವೆ ಮೇಲ್ಸೇತುವೆಗೆ ಹೆಚ್ಚುವರಿಯಾಗಿ ನಾಲ್ಕು ಪಥದ ಹೊಸ ಮೇಲ್ಸೇತುವೆ ನಿರ್ಮಿಸಲಾಗುತ್ತದೆ.
ಇದರೊಂದಿಗೆ ಪಾದಚಾರಿಗಳ ಸುರಕ್ಷತೆ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ಗೆ ಸುಲಭ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ರೈಲ್ವೆ ಹಳಿಗಳ ಕೆಳಗೆ ಪಾದಚಾರಿ ಅಂಡರ್ಪಾಸ್ ಕೂಡ ನಿರ್ಮಿಸಲಾಗುತ್ತದೆ.
24 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ
Bengaluru Smart Infrastructure Limited (B-SMILE) ಮೂಲಕ EPC ಮಾದರಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, 24 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಎಲಿವೇಟೆಡ್ ರೋಟರಿ ಫ್ಲೈಓವರ್, ರೈಲ್ವೆ ಮೇಲ್ಸೇತುವೆ, ಸಂಪರ್ಕ ರಸ್ತೆಗಳು, ಸರ್ವಿಸ್ ರಸ್ತೆಗಳು ಹಾಗೂ ಪಾದಚಾರಿ ಅಂಡರ್ಪಾಸ್ ಯೋಜನೆಯ ಪ್ರಮುಖ ಭಾಗಗಳಾಗಿವೆ.
ಯೋಜನೆಗೆ ಶಿಲಾನ್ಯಾಸ ನೆರವೇರಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಸಚಿವ ಕೆ.ಜೆ. ಜಾರ್ಜ್, ಸರ್ವಜ್ಞನಗರ ಕ್ಷೇತ್ರದ ಜನರಷ್ಟೇ ಅಲ್ಲದೆ ವಿಮಾನ ನಿಲ್ದಾಣ, ಬೈಯಪ್ಪನಹಳ್ಳಿ ರೈಲ್ವೆ ಟರ್ಮಿನಲ್ ಹಾಗೂ ಪ್ರಮುಖ ಸಂಪರ್ಕ ರಸ್ತೆಗಳನ್ನು ಬಳಸುವ ಲಕ್ಷಾಂತರ ಜನರಿಗೆ ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಸಂಚಾರ ಸಮಸ್ಯೆಗಳಿಗೆ ವೈಜ್ಞಾನಿಕ ಹಾಗೂ ದೀರ್ಘಕಾಲೀನ ಪರಿಹಾರ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ. ಮಾರುತಿ ಸೇವಾನಗರ–ಐಒಸಿ ಜಂಕ್ಷನ್ನಲ್ಲಿ ರೋಟರಿ ಫ್ಲೈಓವರ್ ನಿರ್ಮಾಣದಿಂದ ಲಕ್ಷಾಂತರ ವಾಹನ ಸವಾರರು, ವಿಮಾನ ಪ್ರಯಾಣಿಕರು ಹಾಗೂ ರೈಲ್ವೆ ಪ್ರಯಾಣಿಕರ ಸಂಚಾರ ಸುಗಮವಾಗಲಿದೆ. ಮೂಲಸೌಕರ್ಯ ಅಭಿವೃದ್ಧಿಯ ಮೂಲಕ ಜನರ ಜೀವನಮಟ್ಟ ಸುಧಾರಿಸುವುದೇ ನಮ್ಮ ಗುರಿ ಎಂದು ಅವರು ಹೇಳಿದ್ದಾರೆ.
















