ಮಡಿಕೇರಿ, NEWS DESK ನ.28: ಕೊಡವ ಯುವ ಆಟಗಾರರಿಗೆ ತಮ್ಮ ಕ್ರೀಡಾ ಪ್ರತಿಭೆ ಪ್ರದರ್ಶಿಸಲು ವೇದಿಕೆ ಕಲ್ಪಿಸುವ ಹಾಗೂ ಕ್ರಿಕೆಟ್ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಡಿಸೆಂಬರ್ 4, 5 ಮತ್ತು 6ರಂದು ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ 5ನೇ ವರ್ಷದ ಕೊಡವ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.
ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಕುಟ್ಟಂಡ ಕುಟ್ಟಪ್ಪ ಹಾಗೂ ಕಾರ್ಯದರ್ಶಿ ಓಡಿಯಂಡ ಮಾಚಯ್ಯ ಪಂದ್ಯಾವಳಿಯ ಕುರಿತು ಮಾಹಿತಿ ನೀಡಿದರು.
ಕಳೆದ ನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ಆಯೋಜಿಸಿಕೊಂಡು ಬರುತ್ತಿರುವ ಕೊಡವ ಪ್ರೀಮಿಯರ್ ಲೀಗ್ ಇದೀಗ ಐದನೇ ವರ್ಷಕ್ಕೆ ಕಾಲಿಟ್ಟಿದೆ. ಕೊಡಗಿನಲ್ಲಿ ನಡೆಯುವ ಪ್ರಮುಖ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಒಂದಾಗಿರುವ ಈ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಲಿದ್ದು, ಸುಮಾರು 250 ಆಟಗಾರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.
ಮೂರು ದಿನಗಳ ಕಾಲ ನಡೆಯುವ ಪಂದ್ಯಾವಳಿಯಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ನಡೆಯಲಿದ್ದು, ಪ್ರತಿ ಪಂದ್ಯವು ಆರು ಓವರ್‌ಗಳಿಗೆ ಸೀಮಿತವಾಗಿರುತ್ತದೆ. ಅಂತಿಮ ಪಂದ್ಯ ಎಂಟು ಓವರ್‌ಗಳಲ್ಲಿ ನಡೆಯಲಿದೆ.
₹2 ಲಕ್ಷ ಪ್ರಥಮ ಬಹುಮಾನ
ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನವಾಗಿ ₹2 ಲಕ್ಷ, ದ್ವಿತೀಯ ಬಹುಮಾನವಾಗಿ ₹1 ಲಕ್ಷ, ತೃತೀಯ ಬಹುಮಾನವಾಗಿ ₹50 ಸಾವಿರ ಹಾಗೂ ನಾಲ್ಕನೇ ಬಹುಮಾನವಾಗಿ ₹25 ಸಾವಿರ ನಗದು ನೀಡಲಾಗುತ್ತದೆ. ಮೊದಲ ನಾಲ್ಕು ಸ್ಥಾನ ಪಡೆಯುವ ತಂಡಗಳಿಗೆ ಟ್ರೋಫಿಯನ್ನೂ ವಿತರಿಸಲಾಗುತ್ತದೆ.
12 ತಂಡಗಳ ನಡುವೆ ಸೆಣಸಾಟ
ಟೀಮ್ ಕೊಡವ ವಾರಿಯರ್ಸ್, ಕೊಡವಾಮೆ ಕಲ್ಟ್ಸ್, ಟೀಮ್ ಮಹಾಗುರು, ಕೊಡವ ಬಂಬಂಗ್, ಟೀಮ್ ಎ.ಐ. ಕ್ರಿಕೆಟರ್ಸ್, ಟೀಮ್ ಮರೆನಾಡ್ ಯುನೈಟೆಡ್, ಟೀಮ್ ಪಡೆಬೀರಂಗ, ಟೀಮ್ ಡಿ ಕೋಚ್, ಎಜೆ ಬಾಯ್ಸ್ ಕೊಡವ ಮಕ್ಕ, ಟೀಮ್ ಏಳ್ ನಾಡ್ ಸ್ಟ್ರೈಕರ್ಸ್, ಟೀಮ್ ಕರವಲೆ ಭಗವತಿ ಹಾಗೂ ಅಂಜಿಗೇರಿ ನಾಡ್ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿವೆ.
ನವೆಂಬರ್ 1ರಂದು ಆಟಗಾರರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಬಿಡ್ಡಿಂಗ್ ಮೂಲಕ ನಿಗದಿತ ಮೊತ್ತದ ಆಧಾರದ ಮೇಲೆ ಆಟಗಾರರನ್ನು ವಿವಿಧ ತಂಡಗಳಿಗೆ ಆಯ್ಕೆ ಮಾಡಲಾಗಿದೆ. ತಂಡಗಳ ಮಾಲೀಕರು ಹಾಗೂ ಆಟಗಾರರು ಈಗಾಗಲೇ ಪಂದ್ಯಾವಳಿಗೆ ಸಿದ್ಧತೆ ನಡೆಸುತ್ತಿದ್ದಾರೆ.
ಕೊಡವ ಯುವಕರ ಕ್ರೀಡಾ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸುವುದು, ಕ್ರಿಕೆಟ್ ಆಟವನ್ನು ಉತ್ತೇಜಿಸುವುದು ಹಾಗೂ ಕೊಡವ ಸಮುದಾಯದ ಕ್ರೀಡಾ ಬಾಂಧವ್ಯವನ್ನು ಬಲಪಡಿಸುವುದು ಪಂದ್ಯಾವಳಿಯ ಪ್ರಮುಖ ಉದ್ದೇಶವಾಗಿದೆ ಎಂದು ಅಧ್ಯಕ್ಷ ಕುಟ್ಟಂಡ ಕುಟ್ಟಪ್ಪ ತಿಳಿಸಿದರು.
ಕಳೆದ ಐದು ವರ್ಷಗಳಿಂದ ಕೊಡವ ಪ್ರೀಮಿಯರ್ ಲೀಗ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿಕೊಂಡು ಬರಲಾಗುತ್ತಿದ್ದು, 2027ರಲ್ಲಿ ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡಾಕೂಟಗಳನ್ನು ನಡೆಸಲು ಯೋಜನೆ ರೂಪಿಸಲಾಗಿದೆ. ಮಕ್ಕಳಿಗಾಗಿ ವಿಶೇಷ ಪಂದ್ಯಾವಳಿಗಳನ್ನು ಆಯೋಜಿಸುವ ಉದ್ದೇಶವೂ ಇದೆ ಎಂದು ಅವರು ಹೇಳಿದರು.
ಪಂದ್ಯಾವಳಿಯ ಮೂರು ದಿನಗಳ ಎಲ್ಲಾ ಪಂದ್ಯಗಳು ಯೂಟ್ಯೂಬ್‌ನಲ್ಲಿ ನೇರ ಪ್ರಸಾರವಾಗಲಿದ್ದು, ಕ್ರೀಡಾಭಿಮಾನಿಗಳು ಮನೆಯಲ್ಲಿಯೇ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.
ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯಾವಳಿಗೆ ಆಗಮಿಸಿ ಆಟಗಾರರನ್ನು ಪ್ರೋತ್ಸಾಹಿಸುವ ಮೂಲಕ ಟೂರ್ನಿಯನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್‌ನ ಚಕ್ಕೆರ ಕಾರ್ಯಪ್ಪ ಹಾಗೂ ಮುಕ್ಕಾಟಿರ ದೀಪಕ್ ಉಪಸ್ಥಿತರಿದ್ದರು.


































