ಕುಶಾಲನಗರ ಡಿ.3 : ಸೋಮವಾರ ರಾತ್ರಿ ಲಿಂಗೈಕ್ಯರಾದ ಬಿಜಾಪುರದ ಜ್ಞಾನ ಯೋಗಾಶ್ರಮದ ಸಂತ ಸಿದ್ದೇಶ್ವರ ಸ್ವಾಮೀಜಿಗಳ ಸಂತಾಪ ಸಭೆ ನಡೆಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ, ಸಿದ್ದೇಶ್ವರ ಶ್ರೀಗಳು ಸದಾ ಶ್ವೇತ ವಸ್ತ್ರಧಾರಿಗಳಾಗಿ ಸರಳವಾಗಿ ಬದುಕು ನಡೆಸಿದವರು. ನಿತ್ಯವೂ ಪ್ರವಚನಗಳ ಮೂಲಕ ಸಹಸ್ರಾರು ಭಕ್ತರ ಬದುಕನ್ನು ಕಟ್ಟಿದ ಶ್ರೀಗಳು ಉತ್ತರ ಕರ್ನಾಟಕದ ಭಕ್ತರ ಪಾಲಿಗೆ ನಡೆದಾಡುವ ದೇವರಾದರು ಎಂದು ಬಣ್ಣಿಸಿದರು. ಕುಶಾಲನಗರ ತಾಲ್ಲೂಕು ಕನ್ನಡ
ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಮಾತನಾಡಿ, ಭಕ್ತರ ಪಾಲಿನ ನಿಜದೈವ ಸಿದ್ದೇಶ್ವರ ಶ್ರೀಗಳು ಬುದ್ಧ, ಬಸವ, ಅಂಬೇಡ್ಕರ್, ಗಾಂಧೀಜಿ, ಮಹಾವೀರ ಮೊದಲಾದ ಶ್ರೇಷ್ಟ ವ್ಯಕ್ತಿಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ಬಂದ ಶ್ರೀಗಳು ಪ್ರತಿದಿನ ಆಶ್ರಮದ ಆವರಣದಲ್ಲಿ ಮುಂಜಾನೆ ಸಮಯ ನೀಡುತ್ತಿದ್ದ ಪ್ರವಚನಕ್ಕೆ ಭಕ್ತರ ದಂಡೇ ಕಾದಿರುತ್ತಿತ್ತು . ಹಾಗಾಗಿ ಶ್ರೀಗಳ ಅಗಲಿಕೆಯಿಂದ ಭಕ್ತ ಕುಲ ಬಡವಾಗಿದೆ ಎಂದರು.
ಸೋಮವಾರಪೇಟೆ ತಾಲ್ಲೂಕು ಕಸಾಪ ಅಧ್ಯಕ್ಷ ವಿಜೇತ್, ಹೆಬ್ಬಾಲೆ ಹೋಬಳಿ ಕಸಾಪ ಅಧ್ಯಕ್ಷ ಮಣಜೂರು ಮಂಜುನಾಥ್, ಪದಾಧಿಕಾರಿಗಳಾದ ಮೊಹಿದ್ದೀನ್, ಡೆನ್ನಿಸ್ ಡಿಸೋಜ, ಫ್ಯಾನ್ಸಿ ಮುತ್ತಣ್ಣ, ಎಸ್.ನಾಗರಾಜು, ಪ್ರೊ.ಹೆಚ್.ಬಿ.ಲಂಗಮೂರ್ತಿ, ವೆಂಕಟೇಶ ಪೂಜಾರಿ ಇದ್ದರು.











