ಮಡಿಕೇರಿ ಜ.05 : ಕರ್ನಾಟಕ ಪೌರಸುಧಾರಣೆಗಳ ಕೋಶ ಬೆಂಗಳೂರು ಅವರ ನಿರ್ದೇಶನದಂತೆ ನಗರಸಭೆ ವ್ಯಾಪ್ತಿಯೊಳಗೆ ಬರುವ ಪ್ರತಿ ವಾಸ, ವಾಣಿಜ್ಯ, ಕೈಗಾರಿಕಾ, ಇತರೇ ಕಟ್ಟಡ ಮತ್ತು ಖಾಲಿ ಜಾಗಗಳ ವಿವರವನ್ನು ತಂತ್ರಾಂಶದಲ್ಲಿ ಅಪ್‍ಲೋಡ್ ಮಾಡಿ, ಸಾರ್ವಜನಿಕರಿಗೆ ತಮ್ಮ ಮಾಲೀಕತ್ವದ ಸ್ವತ್ತಿನ ಇ-ಸ್ವತ್ತು, ಫಾರಂ ನಂ.3 ಸುಲಭವಾಗಿ ಲಭ್ಯವಾಗುವಂತೆ ಮಾಡಲು ಅವಶ್ಯವಿರುವ ಮಾಹಿತಿಯ ದಾಖಲೆಗಳನ್ನು ಪಡೆದು ಲಭ್ಯವಿರುವ ದಾಖಲೆಗಳೊಂದಿಗೆ ಪರಿಶೀಲಿಸಿಕೊಂಡು ಆಸ್ತಿ ಕಣಜ ತಂತ್ರಾಂಶದಲ್ಲಿ ಅಪ್‍ಲೋಡ್ ಮಾಡಲು ಉದ್ದೇಶಿಸಲಾಗಿದೆ.
ನಗರಸಭೆಯಿಂದ ಈ ಸರ್ವೆ ಕೆಲಸಕ್ಕೆ ಎಸ್‍ಜಿಒ, ಏಜೆನ್ಸಿ ಮುಖಾಂತರ ನಿಯೋಜನೆಗೊಂಡ ನಿಯೋಜಿತ ತಾತ್ಕಾಲಿಕ ಹೊರಗುತ್ತಿಗೆ ನೌಕರ ಮತ್ತು ನಗರಸಭೆ ಸಿಬ್ಬಂದಿಗಳು ಜನವರಿ, 06 ರಿಂದ ಪ್ರತಿ ವಾರ್ಡ್‍ನ ಪ್ರತಿ ಮನೆ, ಕಟ್ಟಡ, ಖಾಲಿ ಜಾಗಕ್ಕೆ ಸರ್ವೆಗೆ ಬರಲಿದ್ದು, ಇವರಿಗೆ ಆಸ್ತಿ ಮಾಹಿತಿ ಅನುಬಂಧ-2 ರ ನಮೂನೆಯಲ್ಲಿ ಕೇಳಿರುವ ಮಾಹಿತಿಗಳನ್ನು ಮತ್ತು ಮತದಾರರ ಗುರುತಿನ ಚೀಟಿ, ಪಾನ್ ಕಾರ್ಡ್, ಪಡಿತರ ಚೀಟಿ, ಡ್ರೈವಿಂಗ್ ಲೆಸನ್ಸ್, ಪಾಸ್‍ಪೋರ್ಟ್ ಪ್ರತಿ ಇದರಲ್ಲಿ ಯಾವುದಾದರೊಂದು ಪ್ರತಿ, ಕಟ್ಟಡ ಪರವಾನಿಗೆ ಪ್ರತಿ, ಕಟ್ಟಡ ಛಾಯಾಚಿತ್ರ, ಮಾಲೀಕರ ಪಾಸ್‍ಪೋರ್ಟ್ ಸೈಜ್ ಪೋಟೋ, ಮಾಲೀಕತ್ವದ ದಾಖಲೆ ಪ್ರತಿ, ತೆರಿಗೆ ಪಾವತಿ ವಿವರಗಳು ಮತ್ತು ಸಂಬಂಧಿಸಿದ ಇತರ ದಾಖಲೆಗಳನ್ನು ನೀಡಿ ಸಹಕರಿಸುವಂತೆ ನಗರಸಭೆಯಿಂದ ಸ್ವತ್ತಿನ ಮಾಲೀಕರಲ್ಲಿ ಮನವಿ ಮಾಡಲಾಗಿದೆ ಎಂದು ನಗರಸಭೆ ಪೌರಾಯುಕ್ತರಾದ ವಿಜಯ ಅವರು ತಿಳಿಸಿದ್ದಾರೆ.












