ಮಡಿಕೇರಿ ಜ.5 : ಕೂಡಿಗೆ ಗ್ರಾ.ಪಂ ಮಾಸಿಕ ಸಭೆಯಲ್ಲಿ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಕೆಲವು ಸದಸ್ಯರು ಆರೋಪ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿ ಪ್ರತಿಭಟನೆ ನಡೆಸಿದರು.
ಪಂಚಾಯಿತಿ ಅಧ್ಯಕ್ಷೆ ಮಂಗಳ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 15ನೇ ಹಣಕಾಸು ಯೋಜನೆಯ ಕಾಮಗಾರಿಗಳು ಪೂರ್ಣಗೊಂಡಿದ್ದರೂ, ಅಧ್ಯಕ್ಷರು ಚೆಕ್‍ಗಳಿಗೆ ಸಹಿ ಹಾಕುತ್ತಿಲ್ಲ ಎಂದು ಆರೋಪಿಸಿ ಸದಸ್ಯರಾದ ಟಿ.ಪಿ ಹಮೀದ್, ಅರುಣ್‍ರಾವ್, ಅನಂತ್, ಶಿವಕುಮಾರ್, ಚಂದ್ರು, ಪಲ್ಲವಿ ಮತ್ತು ವಾಣಿ ಅವರುಗಳು ಸಭೆಯಲ್ಲಿ ಅಧ್ಯಕ್ಷರೊಂದಿಗೆ ಮಾತಿನ ಚಕಮಕಿ ನಡೆಸಿ ನಂತರ ಸಭಾ ನಡಾವಳಿಕೆ ಪುಸ್ತಕದೊಂದಿಗೆ ಸಭಾತ್ಯಾಗ ಮಾಡಿ ಪ್ರತಿಭಟನೆ ನಡೆಸಿದರು.
ಈ ಹಿನ್ನೆಲೆಯಲ್ಲಿ ಅಧ್ಯಕ್ಷರು ಸಭೆಯನ್ನು ಮುಂದೂಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಮಂಗಳ ಪ್ರಕಾಶ್ 15ನೇ ಹಣಕಾಸು ಯೋಜನೆಯ ಕಾಮಗಾರಿಗಳು ಗ್ರಾಮ ವ್ಯಾಪ್ತಿಯಲ್ಲಿ ನಡೆದಿದೆ. ಆದರೆ ಕಾಮಗಾರಿ ಪರಿಶೀಲನೆಗೆ ಅಧಿಕಾರಿಗಳು ಲಭ್ಯವಿಲ್ಲದಕಾರಣ ವಿಳಂಭವಾಗಿದೆ. ಸಾರ್ವಜನಿಕರಿಂದ ದೂರು ಮೇರೆಗೆ ಭುವನಗಿರಿ ವ್ಯಾಪ್ತಿಯಲ್ಲಿ ನಡೆದಕಾಮಗಾರಿ ದುರುಪಯೋಗ ಪ್ರಕರಣ ಸೇರಿದಂತೆ ಪಂಚಾಯಿತಿಯಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ ನಿರ್ವಾಹಣಾಧಿಕಾರಿಗಳ ಗಮನಕ್ಕೆ ಖುದ್ದಾಗಿತರಲಾಗಿದೆ. ಈ ಸಂಬಂಧ ಒಂಬುಡ್ಸ್ ಮನ್ ಮೂಲಕ ತನಿಖೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತ ಆಗದಂತೆ ಎಚ್ಚರವಹಿಸಲಾಗಿದೆ ಎಂದು ಹೇಳಿದ್ದಾರೆ.












