ಸೋಮವಾರಪೇಟೆ,ಜ.6 : ಪುಷ್ಪಗಿರಿ ವನ್ಯಜೀವಿ ವಿಭಾಗದಿಂದ ನೂತನವಾಗಿ ಗಡಿ ಗುರುತು ಮಾಡಿರುವುದು ಸಮರ್ಪಕವಾಗಿಲ್ಲ ಎಂದು ಕೊತ್ನಳ್ಳಿ ಗ್ರಾಮಸ್ಥರು ಆರೋಪಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಕಂದಾಯ, ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರ ಸಭೆ ಕೊತ್ನಳ್ಳಿ ಗ್ರಾಮದಲ್ಲಿ ನಡೆಯಿತು.
ನೂತನವಾಗಿ ಗಡಿ ಕಲ್ಲುಗಳನ್ನು ನಿಲ್ಲಿಸಿರುವ ಜಾಗವು ಜನವಸತಿ ಹಾಗೂ ಕೃಷಿ ಪ್ರದೇಶಕ್ಕೆ ಹತ್ತಿರವಿದ್ದು, ಮುಂದಿನ ದಿನಗಳಲ್ಲಿ ಗ್ರಾಮಸ್ಥರಿಗೆ ಸಮಸ್ಯೆಯಾಗಲಿದೆ. ಈ ಹಿನ್ನೆಲೆ ಹಿಂದೆ ಇದ್ದ ಗಡಿಯನ್ನೇ ಮುಂದುವರೆಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ನಂತರ ಅಧಿಕಾರಿಗಳು ಮತ್ತು ಗ್ರಾಮಸ್ಥರು ಅರಣ್ಯ ಪ್ರದೇಶಕ್ಕೆ ತೆರಳಿ ಗಡಿ ಗುರುತು ಮಾಡಿರುವ ಸ್ಥಳವನ್ನು ವೀಕ್ಷಿಸಿದರು. ಈ ಸಂದರ್ಭ ಹೊಸದಾಗಿ ಅಳವಡಿಸಿರುವ ಗಡಿಗೆ ಜಿಪಿಎಸ್ ಪಾಯಿಂಟ್ ಬಂದಿದ್ದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ 8 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವಿದ್ದುದು ಇದೀಗ 11 ಸಾವಿರಕ್ಕೆ ಏರಿಕೆಯಾಗಿದೆ. ಇಡೀ ಗ್ರಾಮಗಳನ್ನು ಅರಣ್ಯಕ್ಕೆ ಸೇರ್ಪಡೆಗೊಳಿಸುವ ಹುನ್ನಾರ ನಡೆಸಲಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ತಹಶಿಲ್ದಾರ್ ಎಸ್.ಎನ್. ನರಗುಂದ್, ಎಡಿಎಲ್‍ಆರ್ ವಿರೂಪಾಕ್ಷ, ಪುಷ್ಪಗಿರಿ ವನ್ಯ ಜೀವಿ ವಿಭಾಗದ ಆರ್‍ಎಫ್‍ಓ ವಿಮಲ್ ಬಾಬು, ಎಸಿಎಫ್ ಶ್ರೀನಿವಾಸ್ ನಾಯಕ್ ಸೇರಿದಂತೆ ಸ್ಥಳೀಯ ಅರಣ್ಯಾಧಿಕಾರಿಗಳು, ಮಡಿಕೇರಿಯಿಂದ ಆಗಮಿಸಿದ್ದ ಫಾರೆಸ್ಟ್ ಸರ್ವೆ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅಂತಿಮವಾಗಿ ತಾ. 9ರಂದು ತಾಲೂಕು ಕಚೇರಿಯಲ್ಲಿ ಗ್ರಾಮಸ್ಥರನ್ನು ಒಳಗೊಂಡಂತೆ ಸಂಬಂಧಿಸಿದ ಎಲ್ಲಾ ಇಲಾಖಾಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸಲಾಗುವುದು ಎಂದು ತಹಶಿಲ್ದಾರ್ ಭರವಸೆ ನೀಡಿದ ನಂತರ ಸಭೆ ಮುಕ್ತಾಯವಾಯಿತು.
ಈ ಸಂದರ್ಭ ಕುಮಾರಳ್ಳಿ ಗ್ರಾಮದ ಅಧ್ಯಕ್ಷ ಉದಯ್, ಕೊತ್ನಳ್ಳಿ ಗ್ರಾಮಾಧ್ಯಕ್ಷ ರಾಮಚಂದ್ರ, ಕುಡಿಗಾಣದ ಅಧ್ಯಕ್ಷ ಎಂ.ಟಿ. ದಿನೇಶ್, ಪ್ರಮುಖರಾದ ಅರುಣ್ ಕೊತ್ನಳ್ಳಿ, ಬೀದಳ್ಳಿ ಗಿರೀಶ್, ಕುಡಿಗಾಣ ಈಶ್ವರ್, ಬೀದಳ್ಳಿ ತಮ್ಮಯ್ಯ, ಕೊತ್ನಳ್ಳಿ ರಾಜೇಶ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.













