ಮಡಿಕೇರಿ ಜ.10 : ಇದೇ ಜ. 19 ರಂದು ಶಿವಯೋಗಿ ಸಿದ್ದರಾಮ ಮತ್ತು ಮಹಾಯೋಗಿ ವೇಮನ ಜಯಂತಿಯನ್ನು ನಗರದ ಭಾರತೀಯ ವಿದ್ಯಾಭವನದಲ್ಲಿ ಆಚರಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದೆ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಹಾಗೆಯೇ ಅಂಬಿಗರ ಚೌಡಯ್ಯ ಜಯಂತ್ಯೋತ್ಸವವನ್ನು ಇದೇ ಜನವರಿ 21 ರಂದು ಹಾರಂಗಿ ಅಥವಾ ಶಿರಂಗಾಲ ಗ್ರಾಮದಲ್ಲಿ ಆಯೋಜಿಸಲು ನಿರ್ಧರಿಸಲಾಯಿತು.
ಫೆಬ್ರುವರಿ 1 ರಂದು ಆಯೋಜಿಸಬೇಕಿದ್ದ ಮಡಿವಾಳ ಮಾಚಿದೇವ ಜಯಂತಿಯನ್ನು ಫೆಬ್ರುವರಿ 11 ರಂದು ನಗರದ ದಾಸವಾಳ ರಸ್ತೆ ಬಳಿ ಇರುವ ವೀರಭದ್ರೇಶ್ವರ ದೇವಾಲಯದಲ್ಲಿ ಆಚರಿಸಲು ತೀರ್ಮಾನಿಸಲಾಯಿತು.
ಹಾಗೆಯೇ ಸವಿತಾ ಮಹರ್ಷಿ ಜಯಂತಿಯನ್ನು ಫೆಬ್ರುವರಿ 27 ರಂದು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಬಳಿಕ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ಸರ್ಕಾರದ ನಿಯಮದಂತೆ ಜಯಂತ್ಯೋತ್ಸವವನ್ನು ಆಯೋಜಿಸಬೇಕು. ಶಿಷ್ಟಚಾರವನ್ನು ಪಾಲಿಸಬೇಕು. ಜಯಂತ್ಯೋತ್ಸವ ಸಂಬಂಧ ಜಿಲ್ಲಾಡಳಿತದ ಜೊತೆ ಸಮಾಜದ ಎಲ್ಲರೂ ಕೈಜೋಡಿಸಬೇಕು ಎಂದು ಕೋರಿದರು.
ಮಡಿವಾಳ ಸಮಾಜದ ಪ್ರಮುಖರಾದ ಸುಕುಮಾರ್ ಅವರು ಸಮಾಜದ ಪ್ರಮುಖರೆಲ್ಲರೂ ಫೆಬ್ರುವರಿ 11 ರಂದು ನಗರದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಒಂದೆಡೆ ಸೇರುವುದರಿಂದ ಅಂದು ಕಾರ್ಯಕ್ರಮ ಆಯೋಜಿಸಲು ಅವಕಾಶ ಮಾಡಬೇಕು. ಜೊತೆಗೆ ಕಲಾತಂಡ ಕಳುಹಿಸಿಕೊಡುವಂತೆ ಕೋರಿದರು.
ಸವಿತಾ ಸಮಾಜದ ಮಡಿಕೇರಿ ತಾಲ್ಲೂಕು ಅಧ್ಯಕ್ಷರಾದ ಎಂ.ಟಿ.ಮಧು ಅವರು ಫೆಬ್ರುವರಿ 27 ರಂದು ಸಮಾಜದ ಎಲ್ಲರೂ ಸೇರಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಏರ್ಪಡಿಸಲಾಗಿದ್ದು, ಅಂದು ಕಾರ್ಯಕ್ರಮ ಆಯೋಜನೆಗೆ ಅವಕಾಶ ಮಾಡಬೇಕು ಎಂದು ಮನವಿ ಮಾಡಿದರು. ಸಮಾಜದ ಪ್ರಮುಖರು ಇದ್ದರು.