ಮಡಿಕೇರಿ ಜ.15 : ಆರೋಗ್ಯಯುತ ಬದುಕಿಗೆ ಯೋಗ ಮತ್ತು ವ್ಯಾಯಾಮ ಸಹಕಾರಿ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟಿದ್ದಾರೆ.
ಕೊಡಗು ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಸದಾಶಿವ ಪಲ್ಲೇದ್ ಇದ್ದರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜಿಲ್ಲಾ ಆಯೂಷ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಯೋಗ ಒಕ್ಕೂಟ ಸಹಕಾರದಲ್ಲಿ ನಗರದ ಸಾಯಿ ಹಾಕಿ ಟರ್ಫ್ ನಲ್ಲಿ ಭಾನುವಾರ ಯೋಗಥಾನ್ ಕಾರ್ಯಕ್ರಮ ನಡೆಯಿತು.
ಯೋಗಥಾನ್ ಗೆ ಚಾಲನೆ ನೀಡಿ ಮಾತನಾಡಿದ ಶಾಸಕರು ಪ್ರತಿಯೊಬ್ಬರು ಪ್ರತಿನಿತ್ಯ ಯೋಗ ಮತ್ತು ವ್ಯಾಯಾಮ ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಪ್ರತಿ 15 ದಿನಗಳಿಗೊಮ್ಮೆ ಯೋಗಥಾನ್ ಕಾರ್ಯಕ್ರಮವನ್ನು ನಡೆಸುವಂತಾಗಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ ಉತ್ತಮ ಜೀವನಕ್ಕೆ ಪ್ರತಿನಿತ್ಯ ಯೋಗ ಮಾಡುವುದು ಸೂಕ್ತ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ ಮಾತನಾಡಿ ಮಡಿಕೇರಿ, ಪೊನ್ನಂಪೇಟೆ ಮತ್ತು ಕೂಡಿಗೆಯ ಹಾಕಿ ಟರ್ಫ್ ನಲ್ಲಿ ಯೋಗಥಾನ್ ಆಯೋಜಿಸಲಾಗಿದೆ. ಸುಮಾರು 2 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿರುವುದು ಶ್ಲಾಘನಾರ್ಹ ಎಂದು ಹೇಳಿದರು.
ಯೋಗ ಶಿಕ್ಷಕ ಮಹೇಶ್ ಕುಮಾರ್ ಅವರು ಯೋಗಥಾನ್ ಕಾರ್ಯಕ್ರಮ ನಡೆಸಿಕೊಟ್ಟರು. ಜಿ.ಪಂ.ಸಿಇಒ ಡಾ.ಎಸ್.ಆಕಾಶ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುoಡೇಗೌಡ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ರಂಗಧಾಮಯ್ಯ, ತಹಶೀಲ್ದಾರ್ ಪಿ.ಎಸ್.ಮಹೇಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ, ಜಿಲ್ಲಾ ಆಯೂಷ್ ಅಧಿಕಾರಿ ಡಾ.ರೇಣುಕಾದೇವಿ ಮತ್ತಿತರರು ಪಾಲ್ಗೊಂಡಿದ್ದರು.
















