ಕುಶಾಲನಗರ, ಜ.16 : ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಫೆ.3 ರಂದು ಕುಶಾಲನಗರದಲ್ಲಿ ಹಮ್ಮಿಕೊಂಡಿರುವ ಕುಶಾಲನಗರ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ಹಾಗೂ ಹಿರಿಯ ಪತ್ರಕರ್ತರಾದ ಕುಶಾಲನಗರದಲ್ಲಿ ನೆಲೆಸಿರುವ ಬಿ.ಆರ್.ನಾರಾಯಣ ಆಯ್ಕೆಯಾಗಿದ್ದಾರೆ.
ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಬಿ.ಆರ್.ನಾರಾಯಣ್ ಅವರನ್ನು ಕುಶಾಲನಗರ ಕಸಾಪ ದಿಂದ ಸಿದ್ದಯ್ಯ ಪುರಾಣಿಕ ಬಡಾವಣೆಯಲ್ಲಿರುವ ಅವರ ಮನೆಗೆ ತೆರಳಿ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಗಮಿಸುವಂತೆ ಆತ್ಮೀಯವಾಗಿ ಆಹ್ವಾನ ನೀಡಿ ಸ್ವಾಗತಿಸಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಹಾಗೂ ಕಸಾಪ ತಾಲ್ಲೂಕು ಅಧ್ಯಕ್ಷ ಕೆ.ಎಸ್.ಮೂರ್ತಿ ಸೇರಿದಂತೆ ಕಸಾಪ ಪದಾಧಿಕಾರಿಗಳು ಹಾಗೂ ಸಮ್ಮೇಳನದ ವಿವಿಧ ಉಪಸಮಿತಿಗಳ ಪ್ರಮುಖರು ಸೇರಿದಂತೆ ಸಾಹಿತಿ ಬಿ.ಆರ್.ನಾರಾಯಣ ಅವರನ್ನು ಸನ್ಮಾನಿಸಿ ಫಲ ತಾಂಬೂಲ ನೀಡಿ ಗೌರವಿಸಲಾಯಿತು.
ಈ ಸಂದರ್ಭ ಮಾತನಾಡಿದ ಜಿಲ್ಲಾಧ್ಯಕ್ಷ ಕೇಶವಕಾಮತ್, ಸುಮಾರು ನಾಲ್ಕು ದಶಕಗಳ ಕಾಲ ಉಪನ್ಯಾಸಕ ವೃತ್ತಿ, ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಬಿ.ಆರ್.ನಾರಾಯಣ ಅವರು ಸಮ್ಮೇಳನಕ್ಕೆ ಆಯ್ಕೆಯಾಗಿರುವುದು ಸಂತಸದ ವಿಷಯ. ಈ ಆಯ್ಕೆ ಸಾಹಿತ್ಯ ಪರಿಷತ್ತಿಗೆ ಹಿರಿಮೆ ತಂದಿದೆ ಎಂದರು.
ಕುಶಾಲನಗರ ತಾಲ್ಲೂಕು ಕಸಾಪ ಅಧ್ಯಕ್ಷ ಕೆ.ಎಸ್.ಮೂರ್ತಿ ಮಾತನಾಡಿ, ಸರಳ ಸಜ್ಜನಿಕೆ ವ್ಯಕ್ತಿತ್ವ ಹೊಂದಿರುವ ಸೂಕ್ಷ್ಮ ಸಂವೇದನೆಯುಳ್ಳ ಬಿ.ಆರ್.ನಾರಾಯಣ ಕೊಡಗಿನ ಸಾಹಿತ್ಯ ವಲಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದು, ಬಿ.ಆರ್.ನಾರಾಯಣ ಜಿಲ್ಲೆಯ ಹಿರಿಯ ಪತ್ರಕರ್ತರಾಗಿ ಮಾಡಿರುವ ಸೇವೆ ಸ್ಮರಣೀಯವಾದುದು ಎಂದರು.
ಕಸಾಪ ನಿಕಟ ಪೂರ್ವ ಅಧ್ಯಕ್ಷ ಎಂ.ಡಿ.ರಂಗಸ್ವಾಮಿ, ಟಿ.ಜಿ.ಪ್ರೇಮಕುಮಾರ್, ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಚ್.ಬಿ. ಲಿಂಗಮೂರ್ತಿ, ಜಿಲ್ಲಾ ಕಸಾಪ ನಿರ್ದೇಶಕರಾದ ಮಂಜುನಾಥ್, ಫ್ಯಾನ್ಸಿ ಮುತ್ತಣ್ಣ, ಸಮ್ಮೇಳನ ಸಮಿತಿಯ ಮೆರವಣಿಗೆ ಸಮಿತಿ ಅಧ್ಯಕ್ಷ ವೆಂಕಟೇಶ ಪೂಜಾರಿ, ಸಂಚಾಲಕ ಬಿ.ಎ.ನಾಗೇಗೌಡ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್, ಅಲಂಕಾರ ಸಮಿತಿ ಅಧ್ಯಕ್ಷ ಚಂದ್ರು, ಬಿ.ಆರ್.ನಾರಾಯಣ ಅವರ ಪತ್ನಿ ಬಿ.ಎಲ್.ಇಂದಿರಾ, ಬಾರವಿ ಕನ್ನಡ ಸಂಘದ ಪದಾಧಿಕಾರಿಗಳಾದ ಬಬೀಂದ್ರ ಪ್ರಸಾದ್, ವಿಜೇಂದ್ರ ಪ್ರಸಾದ್, ಸರ್ಕಾರಿ ಸಂಯುಕ್ತ ಪ್ರೌಢ ಶಾಲೆಯ ಉಪಪ್ರಾಂಶುಪಾಲ ಪರಮೇಶ್ವರಪ್ಪ, ಬಾಲಕಿಯರ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ಬಿ.ಎನ್. ಪುಷ್ಪ, ಉಪನ್ಯಾಸಕ ಫಿಲಿಪ್ ವಾಸ್, ಕಸಾಪ ತಾಲ್ಲೂಕು ಸಮಿತಿ ನಿರ್ದೇಶಕರಾದ ಬಿ.ಬಿ.ಹೇಮಲತಾ, ಭಾರತಿ, ಕೆ.ವಿ.ಉಮೇಶ್, ಬಿ.ಎನ್.ಶ್ರೀಧರ್, ಬಿ.ಎನ್.ರಾಮಚಂದ್ರ ಹಾಜರಿದ್ದರು.