ಶ್ರೀಮಂಗಲ ಜ.16 : ಪೊನ್ನಂಪೇಟೆ ತಾಲೂಕು ಟಿ.ಶೆಟ್ಟಿಗೇರಿಯಲ್ಲಿ ಚೆಟ್ಟಂಗಡ ಕುಟುಂಬ ಆಯೋಜಿಸಿರುವ ಎರಡನೇ ವರ್ಷದ ಕೊಡವ ಕೌಟುಂಬಿಕ ಹಗ್ಗ ಜಗ್ಗಾಟ ನಮ್ಮೆ-2023 ಲಾಂಛನವನ್ನು ನೆಮ್ಮಲೆ ಗ್ರಾಮದಲ್ಲಿರುವ ಚೆಟ್ಟಂಗಡ ಕುಟುಂಬದ ಐನ್ ಮನೆಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಅನಾವರಣಗೊಳಿಸಿದರು.
ಲಾಂಛನ ಬಿಡುಗಡೆ ಮುನ್ನ ಐನ್ ಮನೆಯಲ್ಲಿ ಕುಟುಂಬದ ಹಿರಿಯರು, ಅತಿಥಿಗಳೊಂದಿಗೆ ಗುರು ಕಾರೋಣರಿಗೆ ಕಾರ್ಯಕ್ರಮದ ಯಶಸ್ವಿಗಾಗಿ ಸಾಮೂಹಿಕವಾಗಿ ಪ್ರಾರ್ಥಿಸಿದರು.
ಲಾಂಛನವನ್ನು ಬಿಡುಗಡೆ ಮಾಡಿ ಮಾತನಾಡಿದ ಸುಜಾ ಕುಶಾಲಪ್ಪ, 1997ರಲ್ಲಿ ಪಾಂಡಂಡ ದಿವಂಗತ ಕುಟ್ಟಪ್ಪ ಅವರು ಕೊಡವ ಜನಾಂಗದಲ್ಲಿ ಒಗ್ಗಟ್ಟು ಬೆಸೆಯಲು ಹಾಗೂ ಕುಟುಂಬಗಳನ್ನು ಒಂದೇ ಸ್ಥಳದಲ್ಲಿ ಸೇರಿಸುವ , ಕ್ರೀಡಾ ಪ್ರತಿಭೆಗಳಿಗೆ ಉತ್ತೇಜನಕ್ಕಾಗಿ ಕೌಟುಂಬಿಕ ಹಾಕಿ ನಮ್ಮೆಯನ್ನು ಪ್ರಾರಂಭಿಸಿದರು. ನಂತರ ಕ್ರಿಕೆಟ್ ಪಂದ್ಯಾವಳಿಯನ್ನು ಸಹ ಕಾರ್ಷನ್ ಕಾರ್ಯಪ್ಪ ಅವರು ಆರಂಭಿಸಿದರು.ಇದು ಜನಪ್ರಿಯವಾಗಿದೆ.ಇದೀಗ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಕಳೆದ ವರ್ಷದಿಂದ ಪೊನ್ನೋಲತಂಡ ಕುಟುಂಬ ಆರಂಭಿಸಿದ್ದು, 2ನೇ ವರ್ಷದ ಪಂದ್ಯವಳಿಯನ್ನು ಚೆಟ್ಟಂಗಡ ಕುಟುಂಬ ಆಯೋಜಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಇದು ಜನಪ್ರಿಯವಾಗಲಿ ಎಂದು ಶುಭ ಹಾರೈಸಿದರು.
ಸಣ್ಣ ಸಣ್ಣ ಕೊಡವ ಕುಟುಂಬಗಳು ಸಹ ಹಾಕಿ ಕ್ರಿಕೆಟ್ ಮತ್ತು ಹಗ್ಗ ಜಗ್ಗಾಟದಂತ ಪಂದ್ಯಾವಳಿಯನ್ನು ಆಯೋಜಿಸಲು ಸಾಧ್ಯವಾಗಬೇಕು. ಸಣ್ಣ ಸಣ್ಣ ಕುಟುಂಬಗಳು ಪಂದ್ಯಾವಳಿಯನ್ನು ನಡೆಸುವುದು ಹಾಗೂ ಆರ್ಥಿಕ ಕ್ರೋಡೀಕರಣ ಕಷ್ಟವಾಗುವ ಹಿನ್ನೆಲೆಯಲ್ಲಿ ಸರಕಾರದಿಂದ ಅನುದಾನವನ್ನು ಪಡೆಯುವ ನಿಟ್ಟಿನಲ್ಲಿ ತಮ್ಮಿಂದ ಪ್ರಸ್ತಾವನೆಯನ್ನು ಸಲ್ಲಿಸಿ 2012ರಿಂದ ಅನುದಾನ ದೊರೆಯುವಂತಾಗಿದೆ.ಎಲ್ಲಾ ಕೌಟುಂಬಿಕ ಪಂದ್ಯಾವಳಿಗಳು ಮುಂದಿನ ದಿನಗಳಲ್ಲಿ ಬಾಳುಗೋಡು ಕೊಡವ ಸಮಾಜಗಳ ಒಕ್ಕೂಟ ಮೈದಾನದಲ್ಲಿ ನಡೆಸಲು ಅಗತ್ಯವಾದ ಸ್ಟೇಡಿಯಂ ಹಾಗೂ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಅಗತ್ಯ ಕ್ರೀಯಾಯೋಜನೆ ರೂಪಿಸಲಾಗುವುದು.ಕೊಡವರಿಗೆ ಮಠ ಇಲ್ಲ. ಇತರ ಜನಾಂಗಕ್ಕೆ ಇರುವ ಮಠಗಳಂತೆ ಕೊಡವ ಜನಾಂಗಕ್ಕೆ ಕೊಡವ ಸಮಾಜ ಒಕ್ಕೂಟ ಕೇಂದ್ರವನ್ನು ಅಭಿವೃದ್ಧಿ ಪಡಿಸಬೇಕಾಗಿದೆ ಎಂದು ವಿವರಿಸಿದರು.
ಎಲ್ಲಾ ಕೊಡವ ಕುಟುಂಬಗಳು ಪಂದ್ಯಾವಳಿಯಲ್ಲಿ ಭಾಗವಹಿಸುವಂತಾಗಬೇಕು. ಇದಕ್ಕೆ ಪೂರಕವಾದ ವ್ಯವಸ್ಥೆಯನ್ನು ನಾವು ಮಾಡಬೇಕಾಗಿದೆ ಎಂದರು. ಕೊಡಗು ಜಿಲ್ಲೆ ಗ್ರಾಮೀಣ ಭಾಗವಾಗಿದ್ದು ಇಲ್ಲಿ ಕೃಷಿಯಲ್ಲಿ ತೊಡಗಿಕೊಂಡಿರುವ ಕೊಡವರಿಗೆ ಸೂಕ್ತವಾದ ಮನೋರಂಜನೆ ಇಲ್ಲ. ಹಾಕಿ- ಕ್ರಿಕೆಟ್ ಮತ್ತು ಹಗ್ಗ ಜಗ್ಗಾಟದಂತಹ ಪಂದ್ಯಾವಳಿಗಳ ಮೂಲಕ ಮನೋರಂಜನೆ ಹಾಗೂ ಕುಟುಂಬಗಳು ಸೇರಲು ಅವಕಾಶ ಕಲ್ಪಿಸಿದೆ. ಕೊಡಗಿನ ನೆಲವನ್ನು ಎಂದಿಗೂ ಮಾರಾಟ ಮಾಡಬೇಡಿ ಉತ್ತಮವಾದ ಪರಿಸರ, ಗಾಳಿ ,ನೀರು ನಮಗೆ ದೊರೆತಿರುವ ಪ್ರಕೃತಿಯ ವರದಾನವಾಗಿದೆ. ಪಂದ್ಯಾವಳಿಗೆ ನನ್ನಿಂದ ಆಗುವ ಎಲ್ಲಾ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.
ಪೊನ್ನೋಲತಂಡ ಕಿರಣ್ ಮಾತನಾಡಿ, ಕಡಿಮೆ ಖರ್ಚಿನಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆ ಆಯೋಜಿಸಲು ಸಾಧ್ಯವಿದೆ. ಜನಸಂಖ್ಯೆ ಕಡಿಮೆ ಇರುವ ಮತ್ತು ಆರ್ಥಿಕವಾಗಿ ಶಕ್ತಿ ಕಡಿಮೆ ಇರುವ ಕೊಡವ ಕುಟುಂಬಗಳು ಸಹ ಇಂತಹ ಪಂದ್ಯಾವಳಿಯಲ್ಲಿ ಭಾಗವಹಿಸಲು ಮತ್ತು ಆಯೋಜಿಸಲು ಸಾಧ್ಯವಿದೆ. ಕಡಿಮೆ ಸದಸ್ಯರಿರುವ ಕುಟುಂಬಗಳಿಗೆ ಹಾಕಿ ಮತ್ತು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುವುದು ಮತ್ತು ಆಯೋಜಿಸುವುದು ಕಷ್ಟಸಾಧ್ಯ. ಆದ್ದರಿಂದ ಸಣ್ಣ ಸಣ್ಣ ಕುಟುಂಬಗಳು ಸಹ ಪಂದ್ಯಾವಳಿಯಲ್ಲಿ ಭಾಗವಹಿಸಲು ಮತ್ತು ಆಯೋಜಿಸಲು ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಕಳೆದ ವರ್ಷದಿಂದ ಆಯೋಜಿಸಲಾಗಿದೆ ಎಂದು ಹೇಳಿದರು.
ಈಗಾಗಲೇ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಮೊದಲ ಬಾರಿಗೆ ಪೊನ್ನೋಲತಂಡ ಕುಟುಂಬ ನಡೆಸಿದೆ. ಎರಡನೇ ವರ್ಷದಲ್ಲಿ ಚೆಟ್ಟಂಗಡ ಕುಟುಂಬ ಆಯೋಜಿಸುತ್ತಿದೆ. ಇದಲ್ಲದೆ ಅಲ್ಲುಮಾಡ, ಚಂಗುಲಂಡ, ಚಿಯಕಪೂವಂಡ, ಬೊಟ್ಟಂಗಡ ಕುಟುಂಬಗಳು ಸಹ ಮುಂದಿನ ವರ್ಷಗಳಲ್ಲಿ ನಡೆಸಲು ಈಗಾಗಲೇ ಹೆಸರು ನೋಂದಾಯಿಸಿಕೊಂಡಿವೆ. ಹಾಗೆಯೇ ಮುಂದೆ ನಡೆಸುವ ಕುಟುಂಬಗಳು ಸಂಪರ್ಕಿಸಬಹುದು ಎಂದು ಹೇಳಿದರು.
ಹಾಕಿ ಅಕಾಡೆಮಿ ಕಾರ್ಯದರ್ಶಿ ಮಾಲೇಟಿರ ಶ್ರೀನಿವಾಸ್ ಅವರು ಮಾತನಾಡಿ ಕೊಡವರಲ್ಲಿ ಕ್ರೀಡೆ ಮೂಲಕ ಒಗ್ಗಟ್ಟು ಬೆಸೆಯುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ. ಆದರೆ ರಾಜಕೀಯ ಕಾರಣಕ್ಕಾಗಿ ಕೊಡವರು ಮಾನಸಿಕವಾಗಿ ಬೇರ್ಪಡಿಸಿ ಅದರ ದುರ್ಲಾಭ ಪಡೆಯಲು ಮೂರನೇ ವ್ಯಕ್ತಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಎಚ್ಚರಿಸಿದ ಅವರು ಜನಾಂಗದಲ್ಲಿ ರಾಜಕೀಯ ದ್ವೇಷ ಅಸೂಯೆವನ್ನು ಬಿಟ್ಟು ಜನಾಂಗದ ಹಿತಾಸಕ್ತಿ ಬಂದಾಗ ಒಂದೇ ವೇದಿಕೆಯಲ್ಲಿ ಸೇರಬೇಕಾಗಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚೆಟ್ಟಂಗಡ ಕುಟುಂಬದ ಅಧ್ಯಕ್ಷ ವಿಜಯ ಕಾರ್ಯಪ್ಪ ಅವರು ನಮ್ಮ ಕುಟುಂಬ ಆಯೋಜಿಸಿರುವ ಹಗ್ಗ ಜಗ್ಗಾಟ ಸ್ಪರ್ಧೆಯು ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಆರಂಭ ವಾಗಲಿದೆ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕವಾದ ಸ್ಪರ್ಧೆ ನಡೆಯಲಿದೆ. ಮೊದಲ ಸ್ಥಾನ ಪಡೆಯುವ ಉಭಯ ವಿಭಾಗದ ತಂಡಗಳಿಗೆ ತಲ ರೂ.50 ಸಾವಿರ ಟ್ರೋಫಿ, ಎರಡನೇ ಸ್ಥಾನ ಪಡೆಯುವ ತಂಡಕ್ಕೆ ರೂ 30 ಸಾವಿರ-ಟ್ರೋಫಿ ಹಾಗೂ ಮೂರನೇ ಸ್ಥಾನ ಪಡೆಯುವ ತಂಡಗಳಿಗೆ ರೂ.20 ಸಾವಿರ-ಟ್ರೋಫಿ ನೀಡಲಾಗುವುದು ಎಂದು ತಿಳಿಸಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಕುಟುಂಬದ ಕಾರ್ಯದರ್ಶಿ ರವಿ ಸುಬ್ಬಯ್ಯ ಅವರು ಹಗ್ಗ ಜಗ್ಗಾಟ ಸ್ಪರ್ಧೆಗೆ ಮತ್ತು ಜನಾಂಗಕ್ಕೂ ತುಂಬಾ ಸಂಬಂಧವಿದೆ. ಈ ಸ್ಪರ್ಧೆಯು ಶಕ್ತಿ ಸಾಮಥ್ರ್ಯದ ಸ್ಪರ್ಧೆಯಾಗಿದ್ದು, ಕೊಡಗಿನ ಮುತ್ತುನಾಡಿನಲ್ಲಿ ಕೊಡವರು ಶಕ್ತಿ ಕೋಲ್ ಸ್ಪರ್ಧೆ ಮೂಲಕ ತಮ್ಮ ಸಾಮಥ್ರ್ಯವನ್ನು ಪ್ರದರ್ಶಿಸುತ್ತಿದ್ದರು. ಅದೇ ರೀತಿ ಹಗ್ಗ ಜಗ್ಗಾಟಕ್ಕೆ ಇತಿಹಾಸವಿದೆ ಎಂದರು. ಈ ಪಂದ್ಯಾವಳಿಯಲ್ಲಿ ಕನಿಷ್ಠ 400 ಕುಟುಂಬಗಳನ್ನು ಭಾಗವಹಿಸುವಂತೆ ಎಲ್ಲ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ರಮ ಉತ್ತಪ್ಪ ಪ್ರಾರ್ಥಿಸಿ, ವಿಜಯ ಕಾರ್ಯಪ್ಪ ಸ್ವಾಗತಿಸಿ, ಜಂಟಿ ಕಾರ್ಯದರ್ಶಿ ಕಂಬ ಕಾರ್ಯಪ್ಪ ವಂದಿಸಿದರು.
ಕಾರ್ಯಕ್ರಮಕ್ಕೆ ಗ್ರಾಮದ ಚೊಟ್ಟೆಯಾಂಡಮಾಡ,ಕುಂಞಂಗಡ,ಮಾಣೀರ,ಬಲ್ಯಾಂಡಮಾಡ, ಚಂಗುಲಂಡ, ಬಾದುಮಂಡ, ಬಾನಂಗಡ ಕುಟುಂಬದ ಅಧ್ಯಕ್ಷರು ಸದಸ್ಯರು ಭಾಗವಹಿಸಿದ್ದರು. ಇದಲ್ಲದೆ ಟಿ.ಶೆಟ್ಟಿಗೇರಿ ಕೊಡವ ಸಮಾಜ ಅಧ್ಯಕ್ಷ ಚೊಟ್ಟೆಯಾಂಡಮಾಡ ವಿಶ್ವನಾಥ್,ಕಾರ್ಯದರ್ಶಿ ಮನ್ನೇರ ರಮೇಶ್, ಟಿ.ಶೆಟ್ಟಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ,ಟಿ-ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಚಂಗುಲಂಡ ಸತೀಶ್ ಸೇರಿದಂತೆ ಕುಟುಂಬದ ಮಹಿಳೆಯರು ಮಕ್ಕಳು ಭಾಗವಹಿಸಿದ್ದರು.