ಮಡಿಕೇರಿ ಜ.17 : ಹುದಿಕೇರಿ ಜನತಾ ಪ್ರೌಢಶಾಲೆ ಆಡಳಿತ ಮಂಡಳಿಯಿಂದ ಕೆಪಿಸಿಸಿ ಕಾನೂನು ಘಟಕದ ಮುಖ್ಯಸ್ಥ ಎ.ಎಸ್.ಪೊನ್ನಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹುದಿಕೇರಿ ಜನತಾ ಪ್ರೌಢಶಾಲೆ ಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಪೊನ್ನಣ್ಣ , ಈ ಶಾಲೆಯಲ್ಲಿ ಓದಿದವರು ಹಲವು ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ. ಶಾಲೆ ಆಡಳಿತ ಮಂಡಳಿಯವರು ಶಾಲೆಯ ಕಟ್ಟಡಗಳ ದುಸ್ಥಿತಿಯ ಬಗ್ಗೆ ತಿಳಿಸಿದಾಗ ಶಾಲೆಯನ್ನು ಉಳಿಸಿಕೊಳ್ಳಬೇಕೆಂಬ ಸಂಕಲ್ಪದೊಂದಿಗೆ ವಿವಿಧ ಆಯಾಮಗಳಲ್ಲಿ ಪ್ರಯತ್ನಿಸಿ ಕೊನೆಗೆ ಕೋಲಾರ ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್ ಅವರಿಂದ 10 ಲಕ್ಷ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದು, ಈ ಶಾಲೆಯಲ್ಲಿ ತಂದೆಯವರು ಓದಿದ ಶಾಲೆ ಎಂದು ಸ್ಮರಿಸಿದರು.
ಶಾಲಾ ಅಡತ ಮಂಡಳಿ ಅಧ್ಯಕ್ಷ ಮಂಡೆಚಂಡ ದಿನೇಶ್ ಚಿಟ್ಯಪ್ಪ ಮಾತನಾಡಿ, ಹಲವಾರು ವರ್ಷಗಳಿಂದ ಶಾಲೆಯ ದುರಸ್ತಿಗೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ರಾಜಕೀಯ ಲೆಕ್ಕಾಚಾರಗಳಿಂದಾಗಿ ಯಾರೊಬ್ಬರೂ ಆಸಕ್ತಿ ವಹಿಸಿರಲಿಲ್ಲ. ಆದರೆ ಪೊನ್ನಣ್ಣ ಅವರು ತಮ್ಮ ಸೇವಾ ಮನೋಭಾವದಿಂದ ಶಾಲಾ ಆಡಳಿತ ಮಂಡಳಿಯವರೊಂದಿಗೆ ಕೈಜೋಡಿಸಿ ಶಾಲೆಯನ್ನು ಉಳಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೂ ಹಿಂದಿನ ಆಡಳಿತ ಮಂಡಳಿ ಹಾಗೂ ಹಾಲಿ ಆಡಳಿತ ಮಂಡಳಿಯ ಸಹಕಾರವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಈ ಸಂದರ್ಭ ಶಾಲಾ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಶಿಕ್ಷಕರು ಹಾಜರಿದ್ದರು.