ಚೆಯ್ಯಂಡಾಣೆ ಜ.17 : ಕೊಡಗು ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಚೆಯ್ಯಂಡಾಣೆ ಕ್ಲಸ್ಟರ್ ಗೆ ಒಳಪಟ್ಟ ಪ್ರಾಥಮಿಕ ಶಾಲೆಗಳ ಮಕ್ಕಳ ಕಲಿಕಾ ಹಬ್ಬಕ್ಕೆ ಕರಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾ.ಪಂ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ದೀಪ ಬೆಳೆಗಿಸುವುದರ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿ ಅವರು, ಪ್ರಸ್ತುತ ದಿನಗಳಲ್ಲಿ ಸರಕಾರಿ ಶಾಲೆಯ ವಿದ್ಯಾರ್ಥಿಗಳ ಕಲಿಕೆಗೆ ಸರ್ಕಾರ ವಿನೂತನ ಕಾರ್ಯಕ್ರಮಗಳ ಮೂಲಕ ಸಹಕಾರ ನೀಡುತ್ತಿದ್ದು, ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಚೆಯ್ಯಂಡಾಣೆ ಕ್ಲಸ್ಟರ್ ಮಟ್ಟದ ಸಿ ಆರ್ ಪಿ ಉಷಾ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರಲು ಇದೊಂದು ಉತ್ತಮ ಕಾರ್ಯಕ್ರಮ, ಎರಡು ವರ್ಷ ಕೋವಿಡ್‍ನಿಂದಾಗಿ ವಿದ್ಯಾರ್ಥಿಗಳಿಗೆ ಸಾಕಷ್ಟು ನಷ್ಟ ಉಂಟಾಗಿದ್ದು, ಅದನ್ನು ಈ ವರ್ಷ ಕಲಿಕಾ ವರ್ಷ ಎಂದು ಆಚರಿಸುತ್ತಿದ್ದೇವೆ, ಕಲಿಕಾ ಚೇತರಿಕೆ ಹಾಗೂ ಕಲಿಕಾ ಹಬ್ಬಕ್ಕೆ ಪೂರಕವಾದ ಸಂಬಂಧವಿದೆ ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
ಮೂರ್ನಾಡು ಶಾಲೆಯ ಮುಖ್ಯ ಶಿಕ್ಷಕಿ ಲಲಿತಾ ಮಾತನಾಡಿ, ಕಲಿಕಾ ಹಬ್ಬವನ್ನು ಮಡಿಕೇರಿ ತಾಲ್ಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಕರಡದಲ್ಲಿ ಆಯೋಜಿಸಿದ್ದು, ಒಂದು ವರ್ಷದಲ್ಲಿ ಕಲಿತಂತಹ ಸಾಮರ್ಥ್ಯವನ್ನು ವ್ಯಕ್ತಪಡಿಸಲು ಕಲಿಕಾ ಹಬ್ಬ ಸಹಕಾರಿಯಾಗಲಿದೆ ಎಂದರು.
ಸಲಹಾ ಸಮಿತಿಯ ಸದಸ್ಯರು ಹಾಗೂ ಹಿರಿಯರಾದ ಬೇಪುಡಿಯಂಡ ಬಿದ್ದಪ್ಪ ಮಾತನಾಡಿ, ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಉನ್ನತ ಹುದ್ದೆಗಳನ್ನು ಹೊಂದಿರುವವರು ಹಲವರು ಇದ್ದಾರೆ. ಸರಕಾರಿ ಶಾಲೆಗೆ ಎಲ್ಲ ರೀತಿಯ ಸೌಲಭ್ಯ ಇದ್ದರು ಖಾಸಗಿ ಶಾಲೆಯನ್ನೇ ಜನರು ಆಯ್ಕೆ ಮಾಡುತ್ತಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಎಸ್ ಡಿ ಎಂ ಸಿ ಅಧ್ಯಕ್ಷ ಎಚ್.ಎಂ. ಲೊಕೇಶ್ ಅವರ ಅಧ್ಯಕ್ಷತೆಯಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯ ವಿಲಿನ್ ಬೇಪುಡಿಯಂಡ, ನೇತ್ರವತಿ, ಸುಧಾ ಸುಬ್ರಮಣಿ ಹಾಗೂ ಚೆಯ್ಯಂಡಾಣೆ ಕ್ಲಸ್ಟರ್ ಮಟ್ಟದ ಮುಖ್ಯ ಶಿಕ್ಷಕರು, ಪೋಷಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಡಿಜಿಟಲ್ ಗ್ರಂಥಾಲಯದ ಮೇಲ್ವಿಚಾರಕರು ಮತ್ತಿತರರು ಉಪಸ್ಥಿತರಿದ್ದರು.
ಚೆಯ್ಯಂಡಾಣೆ ಶಿಕ್ಷಕಿ ಜಯಪ್ರದಾ ಕಾರ್ಯಕ್ರಮ ನಿರೂಪಿಸಿದರು. ಸ್ವಾಗತವನ್ನು ಕರಡ ಶಾಲೆಯ ಮುಖ್ಯ ಶಿಕ್ಷಕಿ ಲೀಲಾವತಿ ಸ್ವಾಗತಿಸಿ, ಶಿಕ್ಷಕಿ ದಮಯಂತಿ ಸರ್ವರನ್ನು ವಂದಿಸಿದರು.
ವರದಿ : ಅಶ್ರಫ್